ವಿಜಯ್​ಗೆ ಹೊಸ ತಲೆನೋವು; ಸರ್ಕಾರ ರಚನೆಗೆ ಒಂದಾಗುತ್ತಾರಾ ಬದ್ಧ ವೈರಿಗಳಾದ ಡಿಎಂಕೆ- ಎಐಎಡಿಎಂಕೆ?

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಮೇ 4ರಂದು ಘೋಷಿಸಲಾಯಿತು. ಆದರೆ, ಯಾವ ಪಕ್ಷಕ್ಕೂ ಬಹುಮತ ಸಿಗಲಿಲ್ಲ. ಟಿವಿಕೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಸಿಗದ ಕಾರಣದಿಂದ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ. ಈ ರಾಜಕೀಯ ಬಿಕ್ಕಟ್ಟನ್ನು ಬಳಸಿಕೊಳ್ಳಲು ನಿರ್ಧರಿಸಿರುವ ಡಿಎಂಕೆ- ಎಐಎಡಿಎಂಕೆ ತಮ್ಮ ವೈರತ್ವವನ್ನು ಮರೆತು ಸರ್ಕಾರ ರಚಿಸಲು ಕೈ ಜೋಡಿಸುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ವಿಜಯ್​ಗೆ ಹೊಸ ತಲೆನೋವು; ಸರ್ಕಾರ ರಚನೆಗೆ ಒಂದಾಗುತ್ತಾರಾ ಬದ್ಧ ವೈರಿಗಳಾದ ಡಿಎಂಕೆ- ಎಐಎಡಿಎಂಕೆ?
Mk Stalin, Palaniswami
Image Credit source: PTI

Updated on: May 06, 2026 | 10:11 PM

ಚೆನ್ನೈ, ಮೇ 6: ತಮಿಳುನಾಡಿನಲ್ಲಿ ವಿಜಯ್ (Vijay) ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದ್ದರೂ ಸರ್ಕಾರ ರಚನೆಗೆ ಇನ್ನೂ 5 ಸ್ಥಾನಗಳ ಅಗತ್ಯವಿದೆ. ಯಾವ ಪಕ್ಷವೂ ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸದ ಹಿನ್ನೆಲೆಯಲ್ಲಿ ರಾಜ್ಯಪಾಲರು ನಾಳೆ ನಿಗದಿಯಾಗಿದ್ದ ವಿಜಯ್ ಅವರ ಪ್ರಮಾಣವಚನ ಸಮಾರಂಭವನ್ನು ಮುಂದೂಡಿದ್ದರು. ಬಹುಮತ ಸಾಬೀತುಪಡಿಸುವವರೆಗೂ ಸರ್ಕಾರ ರಚನೆಗೆ ಅನುಮತಿ ನೀಡುವುದಿಲ್ಲ ಎಂದು ವಿಜಯ್ ಅವರನ್ನು ವಾಪಾಸ್ ಕಳುಹಿಸಿದ್ದರು. ಇದೆಲ್ಲದರ ನಡುವೆ ಬದ್ಧ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದೆಯಾ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದ್ದು, ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ತೆರೆಮರೆಯಲ್ಲಿ ರಹಸ್ಯವಾಗಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸಲು ಮಾತುಕತೆ ಆರಂಭಿಸಿವೆ ಎಂದು ವರದಿಯಾಗಿದೆ. ಎರಡೂ ಪಕ್ಷಗಳ ಪ್ರಮುಖ ನಾಯಕರು ಈ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಜ್ಯಪಾಲರನ್ನು ಭೇಟಿಯಾಗಿ ತಮಿಳುನಾಡು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಟಿವಿಕೆ ಮುಖ್ಯಸ್ಥ ವಿಜಯ್

ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಮಿಳುನಾಡಿನಲ್ಲಿ ಮಿತ್ರಪಕ್ಷಗಳನ್ನು ಭದ್ರಪಡಿಸಿಕೊಳ್ಳಲು ಮತ್ತು ಸರ್ಕಾರ ರಚಿಸಲು ಹರಸಾಹಸ ಪಡುತ್ತಿದೆ. ಇದರ ನಡುವೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತನ್ನ ದೀರ್ಘಕಾಲದ ಪ್ರತಿಸ್ಪರ್ಧಿ ಎಐಎಡಿಎಂಕೆ ಜೊತೆ ರಹಸ್ಯವಾಗಿ ಮಾತುಕತೆಗಳನ್ನು ಪ್ರಾರಂಭಿಸಿದೆ ಎನ್ನಲಾಗುತ್ತಿದೆ.

ಯಾವುದೇ ಪ್ರಗತಿಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಚರ್ಚೆಗಳು ನಡೆದಿವೆ ಎಂದು ಎಐಎಡಿಎಂಕೆ ಮೂಲಗಳು ದೃಢಪಡಿಸಿವೆ. ಏಪ್ರಿಲ್ 23ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 59 ಸ್ಥಾನಗಳನ್ನು ಪಡೆದರೆ, ಎಐಎಡಿಎಂಕೆ 47 ಸ್ಥಾನಗಳನ್ನು ಗಳಿಸಿತು. ಡಿಎಂಕೆ ಮತ್ತು ಎಐಎಡಿಎಂಕೆ ಕೈಜೋಡಿಸಿದರೂ ಅವರ ಒಟ್ಟು ಶಾಸಕರ ಸಂಖ್ಯೆ 106 ಆಗುತ್ತದೆ. ಬಹುಮತ ಪಡೆಯಲು ಇನ್ನೂ ಸಾಕಷ್ಟು ಶಾಸಕರ ಅಗತ್ಯವಿರುತ್ತದೆ. ಬಹುಮತಕ್ಕೆ ಬೇಕಾಗುವ ಸಂಖ್ಯೆ 118. ಹೀಗಾಗಿ, ಬೇರೆ ಪಕ್ಷಗಳ ಬೆಂಬಲದ ಅಗತ್ಯವಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us