
ಚೆನ್ನೈ, ಆಗಸ್ಟ್ 24: ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರು ಕೊಳತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ತಮಿಳಗ ವೆಟ್ರಿ ಕಳಗಂ (TVK) ಅಭ್ಯರ್ಥಿ ವಿ.ಎಸ್. ಬಾಬು ಅವರ ಆಯ್ಕೆಯನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇವಿಎಂ ಲೋಪದೋಷಗಳು ಹಾಗೂ ವಿವಿಪ್ಯಾಟ್ ಯಂತ್ರಗಳಿಗೆ ಸಂಬಂಧಿಸಿದ ಅಕ್ರಮಗಳನ್ನು ಆರೋಪಿಸಿ ಸ್ಟಾಲಿನ್ ಅವರು ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿಯನ್ನು ದಾಖಲಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಂ.ಕೆ. ಸ್ಟಾಲಿನ್ ಸುಮಾರು 8 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದೀಗ ಡಿಎಂಕೆ ಮದ್ರಾಸ್ ಹೈಕೋರ್ಟ್‌ನಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಅಕ್ರಮಗಳು ನಡೆದಿರಬಹುದು ಮತ್ತು ಅವುಗಳನ್ನು ಮತ್ತೆ ಪರಿಶೀಲಿಸಬೇಕು ಎಂದು ಆರೋಪಿಸಿ ಪ್ರಕರಣ ದಾಖಲಿಸಿತ್ತು.
ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದ CWRC: ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು
ಇದೀಗ ಡಿಎಂಕೆ ನಾಯಕ ಸ್ಟಾಲಿನ್ ಸಲ್ಲಿಸಿರುವ ಅರ್ಜಿಯಲ್ಲಿ ಕೊಳತ್ತೂರು ಕ್ಷೇತ್ರದ ಮತಗಳ ಮರುಎಣಿಕೆಗೆ ಮನವಿ ಮಾಡಲಾಗಿದೆ. ಜೊತೆಗೆ ವಿ.ಎಸ್. ಬಾಬು ಅವರ ಆಯ್ಕೆಯನ್ನು ರದ್ದುಗೊಳಿಸಿ, ತಮ್ಮನ್ನು ಈ ಕ್ಷೇತ್ರದಿಂದ ಅಧಿಕೃತವಾಗಿ ಆಯ್ಕೆಯಾದ ವಿಜೇತ ಎಂದು ಘೋಷಿಸುವಂತೆ ಸ್ಟಾಲಿನ್ ನ್ಯಾಯಾಲಯವನ್ನು ವಿನಂತಿಸಿದ್ದಾರೆ.
DMK chief MK Stalin moves Madras High Court challenging TVK candidate V.S. Babu’s victory in Kolathur.
DMK leader M.K. Stalin has filed an election petition in the Madras High Court challenging the victory of TVK candidate V.S. Babu from the Kolathur Assembly constituency.… pic.twitter.com/EiMNXiXpvr
— ANI (@ANI) August 24, 2026
ವಿ.ಎಸ್. ಬಾಬು ಎದುರು ಸ್ಟಾಲಿನ್ ಸೋಲು:
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಲ್ಲಿ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರು ಟಿ.ವಿ.ಕೆ ಅಭ್ಯರ್ಥಿ ವಿ.ಎಸ್. ಬಾಬು ಅವರ ವಿರುದ್ಧ 8,795 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಚುನಾವಣಾ ಆಯೋಗದ ಪ್ರಕಾರ, ಬಾಬು ಅವರು 82,997 ಮತಗಳನ್ನು ಪಡೆದಿದ್ದರೆ, ಸ್ಟಾಲಿನ್ 74,202 ಮತಗಳನ್ನು ಗಳಿಸಿದ್ದರು. ಎಐಎಡಿಎಂಕೆ ಅಭ್ಯರ್ಥಿ ಪಿ. ಸಂತಾನ ಕೃಷ್ಣನ್ 18,430 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದರು.
ಈ ಸೋಲು ಎಂಕೆ ಸ್ಟಾಲಿನ್ ಅವರ 35 ವರ್ಷಗಳ ರಾಜಕೀಯ ಜೀವನದಲ್ಲಿ ಎದುರಿಸಿದ ಮೊದಲ ಚುನಾವಣಾ ಹಿನ್ನಡೆಯಾಗಿದೆ. 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಒಟ್ಟು 7 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸ್ಟಾಲಿನ್ ಅವರು 2021ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.
ಇದನ್ನೂ ಓದಿ: ತಮಿಳುನಾಡಿನಲ್ಲಿ ಕಾರ್ ಸಮರ; ವಿಜಯ್ ಸರ್ಕಾರದ ಉಚಿತ ವಾಹನದ ಆಫರ್ ಬೇಡವೆಂದ ಡಿಎಂಕೆ ಶಾಸಕರು
ಈ ತಿಂಗಳ ಆರಂಭದಲ್ಲಿ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿ.ಎಸ್. ಸಮೀರನ್ ಅವರು ಕೊಳತ್ತೂರು ಕ್ಷೇತ್ರದ ಇವಿಎಂ ಯಂತ್ರಗಳಲ್ಲಿ ಅಕ್ರಮ ನಡೆದಿದೆ ಎಂಬ ವಿಪಕ್ಷ ಡಿಎಂಕೆಯ ಆರೋಪಗಳನ್ನು ತಳ್ಳಿಹಾಕಿದ್ದರು. ಇವಿಎಂ ಪರಿಶೀಲನೆ ಪ್ರಕ್ರಿಯೆಯ ಸಮಯದಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ ಎಂದು ಡಿಎಂಕೆ ಆರೋಪಿಸಿದ ಹಿನ್ನೆಲೆಯಲ್ಲಿ ಸಮೀರನ್ ಈ ಸ್ಪಷ್ಟನೆ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ