
ಚೆನ್ನೈ, ನವೆಂಬರ್ 29: ಕೇಂದ್ರ ಸರ್ಕಾರ ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ (Delimitation Bill) ಮಸೂದೆಗೆ ತಮಿಳುನಾಡಿನ ಡಿಎಂಕೆ ಬೆಂಬಲ ಘೋಷಿಸಿದೆ. ಈ ಹಿಂದೆ ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯನ್ನು ತೀವ್ರವಾಗಿ ವಿರೋಧಿಸಿದ್ದ ಡಿಎಂಕೆಯ ಈ ನಿರ್ಧಾರ, ಕೇಂದ್ರದ ಆಡಳಿತ ಪಕ್ಷದ ಬಲವನ್ನು ಹೆಚ್ಚಿಸಿದೆ. ಶನಿವಾರ ಬೆಳಗ್ಗೆ ನಡೆದ ಡಿಎಂಕೆ ಸಂಸದೀಯ ಪಕ್ಷದ ಸಭೆಯಲ್ಲಿ ಮಸೂದೆಗೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾತನಾಡಿದ ಸಂಸದ ಎ. ರಾಜಾ, ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಡಿಎಂಕೆ ಬೆಂಬಲಿಸಲಿದೆ ಎಂದು ಸ್ಪಷ್ಟಪಡಿಸಿದರು. ಸಂಸದ ದಯಾನಿಧಿ ಮಾರನ್ ಕೂಡ ಸಂಸತ್ತಿನಲ್ಲಿ ಪಕ್ಷ ಮಸೂದೆಗೆ ಬೆಂಬಲ ನೀಡಲಿದೆ ಎಂದು ಪುನರುಚ್ಚರಿಸಿದರು.
ಡಿಎಂಕೆ ಈ ಹಿಂದೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು. ಆದರೆ, ಕೇಂದ್ರ ಸರ್ಕಾರ ಮಸೂದೆಯಲ್ಲಿ ಎಲ್ಲ ರಾಜ್ಯಗಳಿಗೂ ಸಂಸತ್ ಸ್ಥಾನಗಳ ಸಂಖ್ಯೆಯನ್ನು ಶೇ 50ರಷ್ಟು ಹೆಚ್ಚಿಸುವ ಪ್ರಸ್ತಾವನೆ ಹಾಗೂ ಸ್ಥಾನಗಳ ಹೆಚ್ಚಳದ ಮೇಲೆ 25 ವರ್ಷಗಳ ಕಾಲ ತಡೆ ನೀಡುವ ಅಂಶಗಳನ್ನು ಸೇರಿಸಿದ ಬಳಿಕ ಪಕ್ಷ ತನ್ನ ನಿಲುವು ಪ್ರಕಟಿಸಿದೆ.
ಪ್ರಸ್ತುತ ಲೋಕಸಭೆಯಲ್ಲಿ ತಮಿಳುನಾಡು 39 ಸ್ಥಾನಗಳನ್ನು ಹೊಂದಿದೆ. ಕ್ಷೇತ್ರ ಮರುವಿಂಗಡಣೆಯ ಬಳಿಕ ರಾಜ್ಯದ ಸ್ಥಾನಗಳ ಸಂಖ್ಯೆ 59ಕ್ಕೆ ಏರಿಕೆಯಾಗಬಹುದು. ಸಂಸತ್ತಿನಲ್ಲಿ ತಮಿಳುನಾಡಿನ ಪ್ರಸ್ತುತ ಶೇ 7.2ರಷ್ಟು ಪಾಲು ಉಳಿಯುವುದಾದರೆ ಪಕ್ಷಕ್ಕೆ ಆಕ್ಷೇಪವಿಲ್ಲ ಎಂದು ಡಿಎಂಕೆ ತಿಳಿಸಿದೆ.
ಶುಕ್ರವಾರ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕ್ಷೇತ್ರ ಮರುವಿಂಗಡಣೆ ಕುರಿತು ಪಕ್ಷದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು. ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯ ಅಪಾಯಗಳ ಬಗ್ಗೆ ಮೊದಲು ಧ್ವನಿ ಎತ್ತಿದ್ದಾಗಿ ಹೇಳಿದ್ದ ಅವರು, ಚೆನ್ನೈನಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿನಿಧಿಗಳನ್ನು ಒಗ್ಗೂಡಿಸಿ ಸಾಮಾನ್ಯ ಹೋರಾಟಕ್ಕೆ ವೇದಿಕೆ ರೂಪಿಸಿದ್ದನ್ನು ನೆನಪಿಸಿಕೊಂಡಿದ್ದರು.
ತಮಿಳುನಾಡಿನ ಹಿತಾಸಕ್ತಿಗೆ ಆದ್ಯತೆ ನೀಡುವುದಾಗಿ ಹೇಳಿದ್ದ ಸ್ಟಾಲಿನ್, ಲೋಕಸಭೆಯಲ್ಲಿ ರಾಜ್ಯದ ಪ್ರಸ್ತುತ ಶೇ 7.18ರಷ್ಟು ಪ್ರಾತಿನಿಧ್ಯವನ್ನು ರಕ್ಷಿಸಬೇಕು ಮತ್ತು ರಾಜ್ಯಗಳ ನಡುವಿನ ಸ್ಥಾನ ಹಂಚಿಕೆಯನ್ನು 1971ರ ಜನಗಣತಿ ಆಧಾರದಲ್ಲಿ ಇನ್ನೂ 25 ವರ್ಷಗಳ ಕಾಲ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದರು. ‘ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಟಾಲಿನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದ್ದರು.
ಸಂಸತ್ ಸ್ಥಾನಗಳ ಹೆಚ್ಚಳಕ್ಕೆ ವಿರೋಧವಿಲ್ಲ, ಪಾಲು ಉಳಿಯಬೇಕು ಎಂದಿದ್ದರು.
ಡಿಎಂಕೆ ಮೂಲಗಳ ಪ್ರಕಾರ, ಪಕ್ಷದ ಮುಖ್ಯ ಕಳವಳ ಸಂಸತ್ತಿನ ಒಟ್ಟು ಸ್ಥಾನಗಳ ಸಂಖ್ಯೆ ಹೆಚ್ಚಿಸುವುದರ ಬಗ್ಗೆ ಅಲ್ಲ. ಬದಲಾಗಿ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ತಮಿಳುನಾಡಿನ ರಾಜಕೀಯ ಪ್ರಾತಿನಿಧ್ಯದ ಪಾಲು ಕಡಿಮೆಯಾಗಬಾರದು ಎಂಬುದೇ ಪಕ್ಷದ ಪ್ರಮುಖ ಬೇಡಿಕೆಯಾಗಿದೆ.
ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆ: ಕರ್ನಾಟಕ ವಿಧಾನಸಭೆಯಲ್ಲಿ ಭಾರಿ ಬದಲಾವಣೆ, ರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಸಾಧ್ಯತೆ
‘ನಮಗೆ ದೊಡ್ಡ ಸಂಸತ್ತು ಬೇಕೆಂದಿಲ್ಲ. ಆದರೆ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಲು ಅವರು ನಿರ್ಧರಿಸಿದ್ದರೆ, ಕನಿಷ್ಠ ನಮ್ಮ ಪಾಲನ್ನಾದರೂ ಉಳಿಸಬೇಕು’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಕಾಂಗ್ರೆಸ್‌ನಿಂದ ದೂರವಾದ ಬಳಿಕ ಡಿಎಂಕೆ ತನ್ನ ನಿಲುವು ಬದಲಿಸಿದೆ ಎಂಬ ಆರೋಪವನ್ನೂ ಪಕ್ಷ ತಳ್ಳಿಹಾಕಿದೆ. ನ್ಯಾಯಸಮ್ಮತ ಕ್ಷೇತ್ರ ಮರುವಿಂಗಡಣೆ ಮಾಡಬೇಕು ಎಂಬುದು ಡಿಎಂಕೆಯ ಹಿಂದಿನಿಂದಲೂ ಇರುವ ಬೇಡಿಕೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ