ಸಾವರ್ಕರ್ ಕುರಿತು ನಮಗೆ ಅಪಾರ ಗೌರವವಿದೆ; ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ಷೇಪ

| Updated By: ಸುಷ್ಮಾ ಚಕ್ರೆ

Updated on: Nov 17, 2022 | 2:56 PM

ನಾವು ರಾಹುಲ್ ಗಾಂಧಿಯ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ನಮಗೆ ವಿಡಿ ಸಾವರ್ಕರ್ ಅವರ ಬಗ್ಗೆ ಅಪಾರ ಗೌರವವಿದೆ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಸಾವರ್ಕರ್ ಕುರಿತು ನಮಗೆ ಅಪಾರ ಗೌರವವಿದೆ; ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ಷೇಪ
ರಾಹುಲ್ ಗಾಂಧಿ
Follow us on

ಮುಂಬೈ: ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ (Veer Savarkar) ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರು ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ ನಾಯಕರ ಹಾಗೂ ಅನೇಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮೈತ್ರಿಕೂಟದ ಸದಸ್ಯ ಪಕ್ಷವಾದ ಶಿವಸೇನೆ (Shiv Sena) ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray), ನಾವು ರಾಹುಲ್ ಗಾಂಧಿಯ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ನಮಗೆ ವಿಡಿ ಸಾವರ್ಕರ್ ಅವರ ಬಗ್ಗೆ ಅಪಾರ ಗೌರವವಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಹೇಳಿರುವುದನ್ನು ನಾವು ಒಪ್ಪುವುದಿಲ್ಲ. ವೀರ ಸಾವರ್ಕರ್ ಅವರನ್ನು ನಾವು ಗೌರವಿಸುತ್ತೇವೆ. ಆದರೆ, ಅದರ ಜೊತೆಗೆ ಬಿಜೆಪಿಯವರು ಕೂಡ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಬೇಕಾಗಿದೆ. ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ನಾವು ಹಿಂದುತ್ವ ಪರಂಪರೆಗೆ ಚ್ಯುತಿ ತಂದಿದ್ದೇವೆ ಎಂದು ಆರೋಪಿಸಲಾಗುತ್ತಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. 2019ರಲ್ಲಿ ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ಅವರ ಪಕ್ಷಗಳೊಂದಿಗೆ ಮಹಾ ವಿಕಾಸ್ ಅಘಾಡಿಯನ್ನು ರಚಿಸಲು ಉದ್ಧವ್ ಠಾಕ್ರೆ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿದ್ದರು.

ಇದನ್ನೂ ಓದಿ: ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ: ವಾಹನಗಳ ಜಖಂ ಗೊಳಿಸಿದ ಆರೋಪದಡಿ ಮೃತ ಹರ್ಷ ಸಹೋದರಿ ಸೇರಿದಂತೆ 15 ಮಂದಿ ವಿರುದ್ಧ ಎಫ್​ಐಆರ್

ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಂಜಿತ್ ಸಾವರ್ಕರ್, “ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರು ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ. ಆದ್ದರಿಂದ ನಾನು ರಾಹುಲ್ ಗಾಂಧಿ ವಿರುದ್ಧ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.


ಮಂಗಳವಾರ ರಾಹುಲ್ ಗಾಂಧಿ ಜಂಜಾಟಿಯ ಗೌರವ್ ದಿವಸ್ ಸಂದರ್ಭದಲ್ಲಿ ಹಿಂಗೋಲಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಬುಡಕಟ್ಟು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡುವಾಗ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ರಂಜಿತ್ ಸಾವರ್ಕರ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ವೀರ್ ಸಾವರ್ಕರ್​ ವಿರುದ್ಧ ಅವಮಾನಕಾರಿ ಹೇಳಿಕೆ; ರಾಹುಲ್ ಗಾಂಧಿ ವಿರುದ್ಧ ದೂರು ನೀಡಲು ಸಾವರ್ಕರ್ ಮೊಮ್ಮಗ ನಿರ್ಧಾರ

“ಅಂಡಮಾನ್ ಜೈಲಿನಲ್ಲಿ ವೀರ್ ಸಾವರ್ಕರ್ ಇದ್ದಾಗ ಬ್ರಿಟಿಷರಿಗೆ ಪತ್ರ ಬರೆದು, ತಮ್ಮನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡಲು ಹೇಳಿದರು. ವೀರ್ ಸಾವರ್ಕರ್ ಅವರು ಬ್ರಿಟಿಷರಿಂದ ಪಿಂಚಣಿ ಪಡೆದರು. ಅವರು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರು. ಜೈಲಿನಿಂದ ಹೊರಬಂದ ನಂತರ ಅವರು ಬ್ರಿಟಿಷರ ಪ್ರಸ್ತಾಪವನ್ನು ಒಪ್ಪಿಕೊಂಡು ಅವರ ಕಡೆಗೆ ಸೇರಿದರು. ಸಾವರ್ಕರ್ ಮತ್ತು ಬಿರ್ಸಾ ಮುಂಡಾ ನಡುವಿನ ವ್ಯತ್ಯಾಸವೆಂದರೆ ಬಿರ್ಸಾ ಮುಂಡಾ 24 ವರ್ಷದವರಾಗಿದ್ದಾಗ ಬ್ರಿಟಿಷರ ವಿರುದ್ಧ ಹೋರಾಡಿದರು” ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ