ನಾನು ಮುಖ್ಯಮಂತ್ರಿ, ನಾನು ಓಡಿಹೋಗುತ್ತೇನೆಯೇ?: ಇಡಿ ಸಮನ್ಸ್ ಬಗ್ಗೆ ಹೇಮಂತ್ ಸೋರೆನ್

ನಾನು ಮುಖ್ಯಮಂತ್ರಿ ಹುದ್ದೆಯಲ್ಲಿದ್ದೇನೆ. ಆದರೆ ತನಿಖೆ ನಡೆಯುತ್ತಿರುವ ರೀತಿ, ನನ್ನನ್ನು ಕರೆಸಿದ ರೀತಿ, ನಾನು ದೇಶದಿಂದ ಓಡಿಹೋಗುವ ರೀತಿಯ ವ್ಯಕ್ತಿ ಎಂದು ಅವರು ಭಾವಿಸುವಂತಿದೆ. ದೇಶ ಬಿಟ್ಟು ದೊಡ್ಡ ಉದ್ಯಮಿಗಳು ಓಡಿ ಹೋಗಿದ್ದಾರೆಯೇ ವಿನಾ ಬೇರೆ ಯಾರೂ ಓಡಿ ಹೋಗಿದ್ದು ನನಗೆ ನೆನಪಿಲ್ಲ

ನಾನು ಮುಖ್ಯಮಂತ್ರಿ, ನಾನು ಓಡಿಹೋಗುತ್ತೇನೆಯೇ?: ಇಡಿ ಸಮನ್ಸ್ ಬಗ್ಗೆ ಹೇಮಂತ್ ಸೋರೆನ್
ಹೇಮಂತ್ ಸೋರೆನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 17, 2022 | 12:57 PM

ರಾಂಚಿ: ಅಕ್ರಮ ಗಣಿಗಾರಿಕೆ (illegal mining) ಮೂಲಕ ಅಕ್ರಮ ಹಣ ವರ್ಗಾವಣೆ (money laundering ) ಆರೋಪದ ಮೇಲೆ ಕೇಂದ್ರ ತನಿಖಾ ಸಂಸ್ಥೆ ಇಡಿ ಇಂದು(ಗುರುವಾರ),  ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಅವರಲ್ಲಿ ವಿಚಾರಣೆಗೆ  ಹಾಜರಾಗುವಂತೆ ಹೇಳಿದೆ. ಇಡಿ ಸಮನ್ಸ್ ಬಗ್ಗೆ ಪ್ರತಿಕ್ರಿಯಿಸಿದ ಸೋರೆನ್ ಇದು ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿಯ ದೊಡ್ಡ ಪಿತೂರಿಯ ಭಾಗ ಎಂದು ಹೇಳಿದ್ದಾರೆ. ಚುನಾವಣಾ ಆಯೋಗಕ್ಕೆ ಬಿಜೆಪಿ ನೀಡಿದ ದೂರಿನ ಆಧಾರದ ಮೇಲೆ ಗಣಿಗಾರಿಕೆ ಗುತ್ತಿಗೆ ನೀಡಿದ್ದಕ್ಕಾಗಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸಾಧ್ಯತೆಯನ್ನು ಪ್ರಸ್ತಾಪಿಸಿದ ಅವರು ರಾಜ್ಯಪಾಲ ರಮೇಶ್ ಬೈಸ್ ಅವರು ಶೀಘ್ರವಾಗಿ ನಿರ್ಧಾರವನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಸೋರೆನ್ ಅವರ ವಿಧಾನಸಭಾ ಸದಸ್ಯತ್ವವನ್ನು ತೆಗೆದುಹಾಕುವಂತೆ ಆಯೋಗವು ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. “ರಾಜ್ಯಪಾಲರು ಅವರು ‘ಎರಡನೇ ಅಭಿಪ್ರಾಯ’ ಕೇಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾವು ಚುನಾವಣಾ ಆಯೋಗವನ್ನು ಕೇಳಿದ್ದೇವೆ ಮತ್ತು ಅಂತಹ ಯಾವುದೇ ಅಭಿಪ್ರಾಯವನ್ನು ಕೇಳಲಾಗಿಲ್ಲ ಎಂದು ನಮಗೆ ತಿಳಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಫೆಡರಲ್ ಏಜೆನ್ಸಿಗಳ ಕಲ್ಲು ಗಣಿಗಾರಿಕೆ ಹಗರಣದ ಆರೋಪಗಳನ್ನು ಆಧಾರ ರಹಿತ ಎಂದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು  ಶೀಘ್ರದಲ್ಲೇ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಹೆಚ್ಚಿನ ನಾಯಕರನ್ನು ಹುಡುಕುತ್ತದೆ  ಎಂದು ಹೇಳಿದರು.

ನಾನು ಮುಖ್ಯಮಂತ್ರಿ ಹುದ್ದೆಯಲ್ಲಿದ್ದೇನೆ. ಆದರೆ ತನಿಖೆ ನಡೆಯುತ್ತಿರುವ ರೀತಿ, ನನ್ನನ್ನು ಕರೆಸಿದ ರೀತಿ, ನಾನು ದೇಶದಿಂದ ಓಡಿಹೋಗುವ ರೀತಿಯ ವ್ಯಕ್ತಿ ಎಂದು ಅವರು ಭಾವಿಸುವಂತಿದೆ. ದೇಶ ಬಿಟ್ಟು ದೊಡ್ಡ ಉದ್ಯಮಿಗಳು ಓಡಿ ಹೋಗಿದ್ದಾರೆಯೇ ವಿನಾ ಬೇರೆ ಯಾರೂ ಓಡಿ ಹೋಗಿದ್ದು ನನಗೆ ನೆನಪಿಲ್ಲ.ಯಾವ ರಾಜಕಾರಣಿಯೂ ಹಾಗೆ ಪಲಾಯನ ಮಾಡಿಲ್ಲ ಎಂದು ಜಾರಿ ನಿರ್ದೇಶನಾಲಯ ಕಚೇರಿಗೆ ತೆರಳುವ ಮುನ್ನ ರಾಂಚಿಯ ತಮ್ಮ ಮನೆಯಲ್ಲಿ ಸುಮಾರು 10 ನಿಮಿಷಗಳ ಕಾಲ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸೋರೆನ್ ಹೇಳಿದ್ದಾರೆ.

2019 ರ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್ ಗೆದ್ದಾಗಿನಿಂದ ನನ್ನನ್ನು ಪದಚ್ಯುತಗೊಳಿಸುವ ಪ್ರಯತ್ನಗಳು ನಡೆದಿವೆ  ಪಿತೂರಿಗಾರರು ಜಲಾಂತರ್ಗಾಮಿ ನೌಕೆಯಂತೆ ಕೆಲಸ ಮಾಡುತ್ತಿದ್ದಾರೆ, ಮೇಲೆ ಬರಲು ತುಂಬಾ ಹೆದರುತ್ತಿದ್ದರು. ಆದರೆ ಆ ಜಲಾಂತರ್ಗಾಮಿ ನೌಕೆಯನ್ನು ಈಗ ಮೇಲ್ಮೈಗೆ ತರಲಾಗುತ್ತಿದೆ ಎಂದು ಸೋರೆನ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸೋರೆನ್ ಅವರ ರಾಜಕೀಯ ಸಹಾಯಕರಾದ ಪಂಕಜ್ ಮಿಶ್ರಾ ಮತ್ತು ಇತರ ಇಬ್ಬರು ಬಚ್ಚು ಯಾದವ್ ಮತ್ತು ಪ್ರೇಮ್ ಪ್ರಕಾಶ್ ಅವರನ್ನು ತನಿಖಾ ಸಂಸ್ಥೆ ಬಂಧಿಸಿದೆ. ₹ 1,000 ಕೋಟಿಯನ್ನು ‘ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅಪರಾಧದ ಆದಾಯ’ ಎಂದು ಗುರುತಿಸಲಾಗಿದೆ ಎಂದು ಇಡಿ ಹೇಳಿದೆ. ಅಂತಹ ಹಗರಣ ಸಾಧ್ಯವಿಲ್ಲ ಎಂದು ಸೋರೆನ್ ಆರೋಪ ನಿರಾಕರಿಸಿದ್ದಾರೆ. ₹ 1,000 ಕೋಟಿ ಅಕ್ರಮ ಎಸಗಲು ಆಗಬೇಕಾದ ಗಣಿಗಾರಿಕೆಯ ಪ್ರಮಾಣವನ್ನು ಊಹಿಸಿಕೊಳ್ಳಿ. ಗಣಿಗಾರಿಕೆ ಮಾಡಿದ ಕಲ್ಲುಗಳು ಎಲ್ಲಿಗೆ ಹೋದವು? ಅವನ್ನೂ ಸಾಗಿಸಿರಬೇಕು ಅಲ್ಲವೇ? ಸರಿಯಾದ ಸಾಕ್ಷ್ಯಗಳಿದ್ದರೆ ಮಾತ್ರ ಏಜೆನ್ಸಿಗಳು ಅಂತಹ ಗಂಭೀರ ಆರೋಪಗಳನ್ನು ಮಾಡಬೇಕು ಎಂದು ಸೋರೆನ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Thu, 17 November 22