ವರದಕ್ಷಿಣೆ ಕಿರುಕುಳ: ರಾಜಸ್ತಾನದಲ್ಲಿ ಆತ್ಮಹತ್ಯೆ ಮೂಲಕ ಸಾವನ್ನಪ್ಪಿದ 3 ಸಹೋದರಿಯರು ಮತ್ತು 2 ಮಕ್ಕಳು, ಮಹಿಳೆಯರಲ್ಲಿ 2 ಗರ್ಭಿಣಿಯರು

ಮೂವರು ಸಹೋದರಿಯರು ಒಂದೇ ಮನೆಯ ಮೂವರು ಅಣ್ಣ-ತಮ್ಮಂದಿರಗೆ ಮದುವೆ ಮಾಡಿಕೊಡಲಾಗಿತ್ತು.

ವರದಕ್ಷಿಣೆ ಕಿರುಕುಳ: ರಾಜಸ್ತಾನದಲ್ಲಿ ಆತ್ಮಹತ್ಯೆ ಮೂಲಕ ಸಾವನ್ನಪ್ಪಿದ 3 ಸಹೋದರಿಯರು ಮತ್ತು 2 ಮಕ್ಕಳು, ಮಹಿಳೆಯರಲ್ಲಿ 2 ಗರ್ಭಿಣಿಯರು
ಆತ್ಮಹತ್ಯೆ ಮೂಲಕ ಸಾವನ್ನಪ್ಪಿರುವ ಮಹಿಳೆಯರು
Image Credit source: NDTV.com
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 29, 2022 | 6:40 AM

ಜೈಪುರ: ರಾಜಸ್ತಾನದಲ್ಲಿ (Rajasthan) ಮೂವರು ಅಕ್ಕತಂಗಿಯರು (three sisters) ಇಬ್ಬರು ಮಕ್ಕಳೊಂದಿಗೆ ಸಾಮೂಹಿಕ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿರುವ (death by suicide) ದಾರುಣ ಪ್ರಕರಣ ಇಡೀ ರಾಜ್ಯವನ್ನು ತಲ್ಲಣಿಸುವಂತೆ ಮಾಡಿದೆ. ಮೂವರು ಸಹೋದರಿಯರು ಒಂದೇ ಮನೆಯ ಮೂವರು ಅಣ್ಣ-ತಮ್ಮಂದಿರಗೆ ಮದುವೆ ಮಾಡಿಕೊಡಲಾಗಿತ್ತು. ಸತ್ತಿರುವ ಇಬ್ಬರು ಮಕ್ಕಳಲ್ಲಿ ಒಬ್ಬ 4-ವರ್ಷದ ಬಾಲಕನಾಗಿದ್ದರೆ ಮತ್ತೊಂದು 27-ದಿನದ ಹಸುಳೆ. ಇದಕ್ಕೂ ವಿಷಾದಕರ ಮನಸನ್ನು ವಿಹ್ವಲಗೊಳಿಸುವ ಸಂಗತಿಯೆಂದರೆ, ಸಾವನ್ನಪ್ಪಿರುವ ಮಹಿಳೆಯರ ಪೈಕಿ ಇಬ್ಬರು ಗರ್ಭಿಣಿಯರಾಗಿದ್ದರು.

ಈ ಗೃಹಿಣಿಯರನ್ನು ಕಾಲು ಮೀನಾ (25), ಮಮತಾ (23) ಮತ್ತು ಕಮ್ಲೇಶ್ (20) ಎಂದು ಗುರುತಿಸಲಾಗಿದೆ. ಜೈಪುರ ಜಿಲ್ಲೆ ದುದುಗೆ ಹತ್ತಿರದ ಚಪಿಯಾ ಹೆಸರಿನ ಗ್ರಾಮದಲ್ಲಿ ವಾಸವಾಗಿರುವ ಒಂದೇ ಕುಟುಂಬದ ಮೂವರು ಸಹೋದರರನ್ನು ಇವರು ಮದುವೆಯಾಗಿದ್ದರು.

ಮೃತ ಮಹಿಳೆಯರನ್ನು ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿ ಮನಬಂದಂತೆ ಥಳಿಸಲಾಗುತಿತ್ತು ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ‘ವರದಕ್ಷಿಣೆಗಾಗಿ ನನ್ನ ಸಹೋದರಿಯರನ್ನು ಸತತವಾಗಿ ಪೀಡಿಸಲಾಗುತಿತ್ತು ಮತ್ತು ಅವರ ಮೇಲೆ ದೈಹಿಕ ಹಲ್ಲೆ ನಡೆಸಲಾಗುತಿತ್ತು. ಮೇ 25 ರಂದು ಅವರು ಕಾಣೆಯಾದಾಗ ನಾವು ಅವರನ್ನು ಹುಡುಕದ ಸ್ಥಳವಿಲ್ಲ. ಪೊಲೀಸ್ ಸ್ಟೇಶನಲ್ಲಿ ದೂರು ಸಲ್ಲಿಸಿ, ಮಹಿಳಾ ಸಹಾಯವಾಣಿಯ ನೆರವಿ ಕೋರಿದೆವು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಕದವನ್ನೂ ತಟ್ಟಿದೆವು. ಆದರೆ, ಯಾರಿಂದಲೂ ಪ್ರಯೋಜನವಾಗಲಿಲ್ಲ,’ ಎಂದು ಮಹಿಳೆಯರ ಸೋದರ ಸಂಬಂಧಿ ಹೇಮರಾಜ್ ಮೀನಾ ಹೇಳಿದ್ದಾರೆ.

ಅವರು ಸಾಯುವ ಮೊದಲು ಡೆತ್ ನೋಟ್ ಬಿಟ್ಟಿಲ್ಲವಾದರೂ ಕಿರಿಯ ಸಹೋದರಿ ಕಮ್ಲೇಶ್ ಹಿಂದಿಯಲ್ಲಿ ಬರೆದಿರುವ ವಾಟ್ಸ್ಯಾಪ್ ಪೋಸ್ಟನ್ನು ಶೇರ್ ಮಾಡಿದ್ದಾರೆ. ‘ನಾವು ಹೊರಡುವ ಸಮಯ ಬಂದಬಿಟ್ಟಿದೆ, ಎಲ್ಲರೂ ಸಂತೋಷವಾಗಿರಿ. ಅತ್ತೆ-ಮಾವ ನೀಡುತ್ತಿದ್ದ ಕಿರುಕುಳವೇ ನಮ್ಮ ಸಾವಿಗೆ ಕಾರಣವಾಗಿದೆ. ಪ್ರತಿ ದಿನ ಇಷ್ಟಿಷ್ಟು ಸಾಯುವುದಕ್ಕಿಂತ ಒಂದೇ ಸಲಕ್ಕೆ ಸಾಯುವುದು ಒಳ್ಳೆಯದು. ಹಾಗಾಗಿ ನಾವೆಲ್ಲ ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ಮುಂದಿನ ಜನ್ಮದಲ್ಲಿ ಮೂವರು ಒಟ್ಟಿಗೆ ಬದುಕು ನಡೆಸುತ್ತೇವೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಸಾಯುವ ಇಚ್ಛೆ ನಮಗೆ ಖಂಡಿತ ಇರಲಿಲ್ಲ, ಅದರೆ ನಮ್ಮ ಅತ್ತೆ-ಮಾವ ಬದುಕಲು ಬಿಡುತ್ತಿಲ್ಲ, ನಮ್ಮ ಸಾವಿಗೆ ನಮ್ಮ ಹೆತ್ತವರನ್ನು ದೂಷಿಸಬೇಡಿ,’ ಅಂತ ಅವರು ಬರೆದಿದ್ದಾರೆ.

ಮೂವರು ಮಹಿಳೆಯರು ಮತ್ತು ಎರಡು ಮಕ್ಕಳು ನಾಪತ್ತೆಯಾದ ನಾಲ್ಕು ದಿನಗಳ ನಂತರ ದುದು ಗ್ರಾಮದ ಒಂದು ಬಾವಿಯಲ್ಲಿ ಅವರ ಮೃತ ದೇಹಗಳು ಪೊಲೀಸರಿಗೆ ಸಿಕ್ಕಿವೆ.

ಮಾಧ್ಯಮಗಳಿಗೆ ಲಭ್ಯವಾಗಿರುವ ಲಭ್ಯವಾಗಿರುವ ಮಾಹಿತಿ ಪ್ರಕಾರ ಪೊಲೀಸರು, ಮಹಿಳೆಯರ ಪತಿಗಳು ಮತ್ತು ಅತ್ತೆ-ಮಾವ ವಿರುದ್ಧ ಹಲ್ಲೆ ಮತ್ತು ಕ್ರೌರ್ಯತೆ ಪ್ರದರ್ಶಿಸಿದ ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ. ಈಗ ಮೂಲ ಎಫ್ ಐ ಆರ್ ಗೆ ವರದಕ್ಷಿಣೆ ಕಿರುಕುಳ ಸಾವಿನ ಪ್ರಕರಣವನ್ನೂ ಸೇರಿಸಲಾಗುವುದು ಅಂತ ಹೇಳಿದ್ದಾರೆ. ಸಾವುಗಳಿಗೆ ಸಂಬಂಧಿಸಿದಂತೆ ಮೂರು ಮಹಿಳೆಯರ ಪತಿಗಳು, ಅತ್ತೆ-ಮಾವ ಮತ್ತು ಇತರ ಸಂಬಂಧಿಗಳ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಮಹಿಳೆಯರ ಜೀವಗಳಿಗೆ ಬೆಲೆಯೇ ಇಲ್ಲದ ಸ್ಥಿತಿ ಉದ್ಭವಿಸಿರುವುದಕ್ಕೆ ರಾಜಸ್ತಾನ ನೇಣಿಗೆ ಕೊರಳೊಡ್ಡಬೇಕು ಎಂದು ಹೇಳಿರುವ ರಾಜ್ಯದ ಮಹಿಳಾ

ಹೋರಾಟಗಾರ್ತಿಯರು, ಸದರಿ ಪ್ರಕರಣದಲ್ಲಿ ಒಂದು ಉನ್ನತ ಹಂತದ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಮೃತ ದೇಹಗಳನ್ನು ಪತ್ತೆ ಮಾಡಲು 4 ದಿನಗಳ ಸಮಯ ತೆಗೆದುಕೊಂಡ ಪೊಲೀಸರ ವಿರುದ್ಧವೂ ಕ್ರಮ ಜರುಗಿಸಬೇಕು ಅಂತಲೂ ಅವರು ಒತ್ತಾಯಿಸುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada