ಮನಮೋಹನ್ ಸಿಂಗ್ ನಿಧನಕ್ಕೆ ಆರ್ಎಎಸ್ಎಸ್ ತೀವ್ರ ಸಂತಾಪ: ಭಾರತಕ್ಕೆ ಸಿಂಗ್ ಕೊಡುಗೆ ಸದಾ ಸ್ಮರಣೀಯ ಎಂದ ಭಾಗವತ್
ದೇಶದ ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರ ಸಂತಾಪ ಸೂಚಿಸಿದೆ. ಸಿಂಗ್ ಅವರು ಭಾರತಕ್ಕೆ ಕೊಟ್ಟ ಕೊಡುಗೆಯನ್ನು ದೇಶ ಸದಾ ಸ್ಮರಿಸಲಿದೆ. ಸಿಂಗ್ ನಿಧನದಿಂದ ದೇಶವು ತೀವ್ರ ದುಃಖಕ್ಕೀಡಾಗಿದೆ ಎಂದು ಆರ್ಎಸ್ಎಸ್ ಶೋಕ ಸಂದೇಶದಲ್ಲಿ ತಿಳಿಸಿದೆ.
ನವದೆಹಲಿ, ಡಿಸೆಂಬರ್ 27: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ತೀವ್ರ ಸಂತಾಪ ಸೂಚಿಸಿದೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಶೋಕ ಸಂದೇಶ ಪ್ರಕಟಿಸಿದ್ದು, ಸಿಂಗ್ ನಿಧನದಿಂದ ದೇಶವು ತೀವ್ರ ದುಃಖತಪ್ತವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಆರ್ಎಸ್ಎಸ್ ಶೋಕ ಸಂದೇಶದಲ್ಲೇನಿದೆ?
ದೇಶದ ಅತ್ಯುನ್ನತ ನಾಯಕ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದಿಂದ ದೇಶವು ತೀವ್ರ ದುಃಖತಪ್ತವಾಗಿದೆ. ಅವರ ಕುಟುಂಬಕ್ಕೆ, ಅಸಂಖ್ಯಾತ ಪ್ರೀತಿಪಾತ್ರರಿಗೆ ಮತ್ತು ಅಭಿಮಾನಿಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ತೀವ್ರ ಸಂತಾಪವನ್ನು ಸೂಚಿಸುತ್ತದೆ. ಸಿಂಗ್ ಅವರು ಬಡತನದ ಹಿನ್ನೆಲೆಯಿಂದ ಬಂದರೂ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರು. ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಸಿಂಗ್ ಅವರು ಭಾರತಕ್ಕೆ ಕೊಟ್ಟ ಕೊಡುಗೆ ಎಂದೆಂದಿಗೂ ಸ್ಮರಿಸಲಾಗುತ್ತದೆ ಮತ್ತು ಗೌರವಾರ್ಹ. ಅಗಲಿದ ಆತ್ಮಕ್ಕೆ ಸದ್ಗತಿ ನೀಡಲಿ ಎಂದು ಆ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆ ಎಂದು ಆರ್ಎಸ್ಎಸ್ ಮುಖ್ಯಸ್ಥ (ಸರಸಂಘ ಚಾಲಕ) ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಶೋಕ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಆರ್ಎಸ್ಎಸ್ ಶೋಕ ಸಂದೇಶ
The entire nation is extremely saddened by the demise of former Prime Minister of Bharat and senior leader of the country Dr. Sardar Manmohan Singh. Rashtriya Swayamsevak Sangh expresses its deepest condolences to his family and countless loved ones and admirers. Dr. Manmohan… pic.twitter.com/3sAt9dgTne
— RSS (@RSSorg) December 27, 2024
ಮನಮೋಹನ್ ಸಿಂಗ್ ಗುರುವಾರ ಸಂಜೆ ದೆಹಲಿಯ ಏಮ್ಸ್‌ನಲ್ಲಿ 92 ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಮನೆಯಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ್ದ ಅವರನ್ನು ದೆಹಲಿಯ ಏಮ್ಸ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.
ಮನಮೋಹನ್ ಸಿಂಗ್ ಪುತ್ರಿ ಶುಕ್ರವಾರ ಮಧ್ಯರಾತ್ರಿ ವೇಳೆಗೆ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿಯ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಶನಿವಾರ ಬೆಳಗ್ಗೆ ಇರಿಸಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ.
ಇದನ್ನೂ ಓದಿ: ದಿವಾಳಿಯಂಚಿನಲ್ಲಿದ್ದ ದೇಶವನ್ನು ಆ ಒಂದು ಬಜೆಟ್ನಿಂದ ರಕ್ಷಿಸಿದ್ದ ಮನಮೋಹನ್ ಸಿಂಗ್!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ