
ನವದೆಹಲಿ, ಆಗಸ್ಟ್ 08: ಇತ್ತೀಚಿನ ದಿನಗಳಲ್ಲಿ E20 ಪೆಟ್ರೋಲ್‌ನಲ್ಲಿ (ಎಥನಾಲ್ ಮಿಶ್ರಿತ ಪೆಟ್ರೋಲ್) ಅತಿಯಾದ ಕ್ಲೋರೈಡ್ ಮತ್ತು ತೇವಾಂಶ (ನೀರಿನ ಅಂಶ) ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದ ಬೆನ್ನಲ್ಲೇ, ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ದೇಶಾದ್ಯಂತ ತೀವ್ರ ನಿಗಾ ವಹಿಸಿ ತಪಾಸಣೆ ನಡೆಸಿವೆ. ಈ ತಪಾಸಣೆಯಲ್ಲಿ ಇಂಧನದ ಗುಣಮಟ್ಟವು ನಿಗದಿತ ಮಾನದಂಡಗಳ ಒಳಗೇ ಇರುವುದು ದೃಢಪಟ್ಟಿದ್ದು, ಇಂಧನ ಕಲುಷಿತಗೊಂಡಿದೆ ಎಂಬ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ. ಮಾಧ್ಯಮಗಳಲ್ಲಿ 500 ppm ವರೆಗೆ ಕ್ಲೋರೈಡ್ ಪತ್ತೆಯಾಗಿದೆ ಎಂದು ಮಾಡಲಾಗಿದ್ದ ಆರೋಪಗಳನ್ನು ತಳ್ಳಿಹಾಕಿರುವ ಕಂಪನಿಗಳು, ಗ್ರಾಹಕರು ಯಾವುದೇ ಆತಂಕವಿಲ್ಲದೆ E20 ಪೆಟ್ರೋಲ್ ಬಳಸಬಹುದು ಎಂದು ತಿಳಿಸಿವೆ.
ಗ್ರಾಹಕರ ನಂಬಿಕೆ ಮತ್ತು ವಾಹನಗಳ ಕಾರ್ಯಕ್ಷಮತೆಗೆ ಯಾವುದೇ ಧಕ್ಕೆಯಾಗದಂತೆ ತಡೆಯಲು ಭಾರತ ಸರ್ಕಾರ ಮತ್ತು ತೈಲ ಕಂಪನಿಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ದೇಶದ ಪ್ರತಿ ಪೆಟ್ರೋಲ್ ಬಂಕ್‌ಗಳಲ್ಲಿರುವ ಭೂಗತ ಇಂಧನ ಟ್ಯಾಂಕ್‌ಗಳನ್ನು ದಿನಕ್ಕೆ 8 ರಿಂದ 12 ಬಾರಿ ನೀರಿನ ಸೋರಿಕೆ ಮತ್ತು ಸಾಂದ್ರತೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ದೇಶಾದ್ಯಂತ ಸುಮಾರು 90,000 ಪೆಟ್ರೋಲ್ ಬಂಕ್‌ಗಳಲ್ಲಿ ಈ ಕಡ್ಡಾಯ ತಪಾಸಣೆ ನಡೆಯುತ್ತಿದ್ದು, ಎಲ್ಲಿಯೂ ನೀರಿನ ಅಂಶ ಪತ್ತೆಯಾಗಿಲ್ಲ.
ಇದರೊಂದಿಗೆ ಸಂಚಾರಿ ಇಂಧನ ಗುಣಮಟ್ಟ ತಪಾಸಣಾ ಪ್ರಯೋಗಾಲಯಗಳನ್ನು (Mobile Fuel Quality Testing Laboratories) ನಿಯೋಜಿಸಲಾಗಿದ್ದು, ಪ್ರಯೋಗಾಲಯಗಳ ಮೂಲಕ ಸ್ವತಂತ್ರವಾಗಿ ಗುಣಮಟ್ಟವನ್ನು ಮರುಪರಿಶೀಲಿಸಲಾಗುತ್ತಿದೆ.
ಈ ವ್ಯಾಪಕ ತಪಾಸಣೆಯ ಸಂದರ್ಭದಲ್ಲಿ ಕೇವಲ ನಾಲ್ಕು ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರ ಕ್ಲೋರೈಡ್ ಪ್ರಮಾಣ ಕೊಂಚ ಹೆಚ್ಚಿರುವುದು ಪತ್ತೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆ ಬಂಕ್‌ಗಳ ಇಂಧನ ಮಾರಾಟವನ್ನು ಅಮಾನತುಗೊಳಿಸಿದ್ದಾರೆ. ಅದರ ಮೂಲ ಕಾರಣವನ್ನು ಪತ್ತೆಹಚ್ಚಿ, ಅಗತ್ಯ ಕ್ರಮ ಕೈಗೊಂಡ ಬಳಿಕವಷ್ಟೇ ಅಲ್ಲಿ ಮತ್ತೆ ಇಂಧನ ಪೂರೈಕೆಗೆ ಅವಕಾಶ ನೀಡಲಾಗಿದೆ.
ಈ ಎಲ್ಲಾ ತಪಾಸಣೆಗಳ ಸಂಪೂರ್ಣ ವಿವರ ಹಾಗೂ ಕೋಷ್ಟಕವನ್ನು ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ಅಧಿಕೃತ ವೆಬ್‌ಸೈಟ್ www.cht.gov.in ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಗುಣಮಟ್ಟಕ್ಕೆ ನಮ್ಮ ಮೊದಲ ಆದ್ಯತೆಯಾಗಿದ್ದು, ಗ್ರಾಹಕರು ಯಾವುದೇ ಗೊಂದಲವಿಲ್ಲದೆ ಇಂಧನ ಖರೀದಿಸಬಹುದು ಎಂದು ತೈಲ ಮಾರುಕಟ್ಟೆ ಕಂಪನಿಗಳು ಪ್ರಕಟಣೆಯಲ್ಲಿ ಭರವಸೆ ನೀಡಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:43 am, Sat, 8 August 26