ಮತಗಟ್ಟೆಗಳ ವಿಡಿಯೋ ನೀಡುವುದರಿಂದ ಮತದಾರರ ಖಾಸಗಿತನಕ್ಕೆ ಧಕ್ಕೆ; ಕಾಂಗ್ರೆಸ್ ಆರೋಪಕ್ಕೆ ಚುನಾವಣಾ ಆಯೋಗ ಸಮರ್ಥನೆ
45 ದಿನಗಳನ್ನು ಮೀರಿ ಮತಗಟ್ಟೆಗಳ ಸಿಸಿಟಿವಿ ದೃಶ್ಯಗಳನ್ನು ಸಂರಕ್ಷಿಸಲು ಹೊಸ ಒತ್ತಡವನ್ನು ಎದುರಿಸುತ್ತಿರುವ ಚುನಾವಣಾ ಆಯೋಗ ತನ್ನ ಪ್ರಸ್ತುತ ನೀತಿಗೆ ಬದ್ಧವಾಗಿದೆ. ಮತಗಟ್ಟೆಯ ವಿಡಿಯೋವನ್ನು ಸಾರ್ವಜನಿಕಗೊಳಿಸುವುದರಿಂದ ಮತದಾರರ ಗೌಪ್ಯತೆಗೆ ಅಪಾಯ ಉಂಟಾಗಬಹುದು. ಇದು ಕಾನೂನು ರಕ್ಷಣೆಗಳನ್ನು ಉಲ್ಲಂಘಿಸಬಹುದು ಎಂದು ಚುನಾವಣಾ ಆಯೋಗ ಎಚ್ಚರಿಸಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತಗಟ್ಟೆಗಳ ವಿಡಿಯೋ ದೃಶ್ಯವಳಿಯನ್ನು ಕೋರಿದ್ದರು.

ನವದೆಹಲಿ: 45 ದಿನಗಳಿಗಿಂತ ಹೆಚ್ಚು ಕಾಲ ಮತಗಟ್ಟೆ ಸಿಸಿಟಿವಿ ದೃಶ್ಯಗಳನ್ನು ಉಳಿಸಿಕೊಳ್ಳಲು ಹೆಚ್ಚಿದ ಕಾಂಗ್ರೆಸ್ ನಾಯಕರ ಬೇಡಿಕೆಗಳ ನಡುವೆ, ಚುನಾವಣಾ ಆಯೋಗ (Election Commission) ಮತದಾರರ ಗೌಪ್ಯತೆ ಮತ್ತು ಸುರಕ್ಷತೆಗೆ ಸಂಭಾವ್ಯ ಅಪಾಯಗಳನ್ನು ಉಲ್ಲೇಖಿಸಿ ತನ್ನ ಅಸ್ತಿತ್ವದಲ್ಲಿರುವ ನಿಯಮವನ್ನು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್ನ ಬೇಡಿಕೆಯು ತರ್ಕಬದ್ಧವಾಗಿ ಕಂಡುಬಂದರೂ, ಅದು ಕಾನೂನು ರಕ್ಷಣೆಗೆ ವಿರುದ್ಧವಾಗಿದೆ. ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಚುನಾವಣಾ ಸಮಿತಿಯೊಳಗಿನ ಮೂಲಗಳು ಒಪ್ಪಿಕೊಂಡಿವೆ.
ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯಗಳ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಕ್ರೋಢೀಕೃತ, ಡಿಜಿಟಲ್, ಮತದಾರರ ಪಟ್ಟಿಯನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಕರೆ ನೀಡಿದ್ದರು. ಚುನಾವಣಾ ದಿನದಂದು ಮತಗಟ್ಟೆಗಳಿಂದ ವೀಡಿಯೊಗಳು ಅಥವಾ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡುವ ಮನವಿಯು ಮತದಾರರ ಗೌಪ್ಯತೆ ಮತ್ತು ಭದ್ರತೆಯನ್ನು ದುರ್ಬಲಗೊಳಿಸುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದು ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ, ರಾಹುಲ್ ಗಾಂಧಿಯ ಮ್ಯಾಚ್ ಫಿಕ್ಸಿಂಗ್ ಆರೋಪ, ಚುನಾವಣಾ ಆಯೋಗ ಹೇಳಿದ್ದೇನು?
“ಯಾವುದೇ ಗುಂಪು ಅಥವಾ ವ್ಯಕ್ತಿಯಿಂದ ಮತದಾರರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ದೃಶ್ಯಾವಳಿಗಳನ್ನು ಹಂಚಿಕೊಳ್ಳುವುದರಿಂದ, ಮತ ಚಲಾಯಿಸಿದ ಮತದಾರರು ಮತ್ತು ಮತ ಚಲಾಯಿಸದ ಮತದಾರರು ಇಬ್ಬರೂ ಸಮಾಜ ವಿರೋಧಿ ಅಂಶಗಳಿಂದ ಒತ್ತಡ, ತಾರತಮ್ಯ ಮತ್ತು ಬೆದರಿಕೆಗೆ ಗುರಿಯಾಗುತ್ತಾರೆ” ಎಂದು ಚುನಾವಣಾ ಆಯೋಗ ಹೇಳಿದೆ.
ಒಂದು ನಿರ್ದಿಷ್ಟ ರಾಜಕೀಯ ಪಕ್ಷವು ಒಂದು ನಿರ್ದಿಷ್ಟ ಮತಗಟ್ಟೆಯಲ್ಲಿ ಕಡಿಮೆ ಸಂಖ್ಯೆಯ ಮತಗಳನ್ನು ಪಡೆದರೆ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಯಾರು ಮತ ಚಲಾಯಿಸಿದ್ದಾರೆ ಮತ್ತು ಯಾರು ಮತ ಚಲಾಯಿಸಿಲ್ಲ ಎಂಬುದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಇದು ನಂತರ ಮತದಾರರ ಮೇಲಿನ ಕಿರುಕುಳ ಅಥವಾ ಬೆದರಿಕೆಗೆ ಕಾರಣವಾಗಬಹುದು ಎಂದು ಅದು ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ