ಎನ್‌ಆರ್‌ಐ ಮತದಾರರಿಗೆ ವಿದ್ಯುನ್ಮಾನ ಮತಪತ್ರ ಪರಿಗಣನೆಯಲ್ಲಿದೆ: ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ
ಅಧಿಕೃತ ಅಂದಾಜಿನ ಪ್ರಕಾರ, ಸಾಗರೋತ್ತರದಲ್ಲಿ ನೆಲೆಸಿರುವ 1.26 ಕೋಟಿ ಜನರಲ್ಲಿ ಕನಿಷ್ಠ ಶೇ 60-65 ಜನರು ಭಾರತೀಯ ಚುನಾವಣೆಗಳಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ನೋಂದಾಯಿತ ಮತದಾರರಲ್ಲಿ ಹೆಚ್ಚಿನವರು ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ.
ದೆಹಲಿ: ಅನಿವಾಸಿ ಭಾರತೀಯ ಮತದಾರರಿಗೆ ಎಲೆಕ್ಟ್ರಾನಿಕ್ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ (ETPBS) ಸೌಲಭ್ಯ ಪರಿಗಣನೆಯಲ್ಲಿದೆ ಎಂದು ಭಾರತೀಯ ಚುನಾವಣಾ ಆಯೋಗವು (Election Commission of India) ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ (Sushil Chandra) ನೇತೃತ್ವದ ನಿಯೋಗವು ಏಪ್ರಿಲ್ 9-19 ರವರೆಗೆ ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ಗೆ ಭೇಟಿ ನೀಡಿದ್ದು ಅನೇಕ ಸಭೆಗಳನ್ನು ನಡೆಸಿ, ಇದರಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಸಲಹೆ ಸೂಚನೆ ಕೇಳಿತ್ತು. ಈ ಭೇಟಿಯ ಸಮಯದಲ್ಲಿ, ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ನ ಚುನಾವಣಾ ಆಯೋಗಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಾಯಿತು. ಜೊತೆಗೆ ಎರಡು ದೇಶಗಳಲ್ಲಿನ ಎನ್‌ಆರ್‌ಐ ಸಮುದಾಯದೊಂದಿಗೆ ಸಂವಾದ ನಡೆಸಲಾಯಿತು. ಎರಡೂ ಚುನಾವಣಾ ನಿರ್ವಹಣಾ ಸಂಸ್ಥೆಗಳು ಸಹ ಇಸಿಐ ಜೊತೆ ತಿಳುವಳಿಕೆ ಒಪ್ಪಂದದ ಪಾಲುದಾರರಾಗಿದ್ದಾರೆ. ಮೂರು ದೇಶಗಳು ತಮ್ಮ ಜನರ ಸಾಮೂಹಿಕ ಅನುಭವಗಳು ಮತ್ತು ಮೂಲಭೂತವಾದ, ವಿಶಿಷ್ಟವಾದ ಮತ್ತು ಬೇರೂರಿರುವ ಸಂಬಂಧವನ್ನು ಹಂಚಿಕೊಳ್ಳುತ್ತವೆ ಎಂದು ಇಸಿಐ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಸಂಖ್ಯೆಗಳು “ಕಡಿಮೆ” ಆಗಿರುವುದರಿಂದ ಅನಿವಾಸಿ ಭಾರತೀಯ ಮತದಾರರಾಗಿ ನೋಂದಾಯಿಸಲು ಸಿಇಸಿ ಮತದಾರರನ್ನು ಒತ್ತಾಯಿಸಿದೆ.
ಅಧಿಕೃತ ಅಂದಾಜಿನ ಪ್ರಕಾರ, ಸಾಗರೋತ್ತರದಲ್ಲಿ ನೆಲೆಸಿರುವ 1.26 ಕೋಟಿ ಜನರಲ್ಲಿ ಕನಿಷ್ಠ ಶೇ 60-65 ಜನರು ಭಾರತೀಯ ಚುನಾವಣೆಗಳಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ನೋಂದಾಯಿತ ಮತದಾರರಲ್ಲಿ ಹೆಚ್ಚಿನವರು ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದರೆ, ಗುಜರಾತ್ ಮತ್ತು ಪಂಜಾಬ್‌ನಿಂದಲೂ ನೋಂದಾಯಿತ ಮತದಾರರಲ್ಲಿ ಇದ್ದಾರೆ ಎಂದು ಈ ಬಗ್ಗೆ ತಿಳಿದಿರುವ ಮೂಲಗಳು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಅನಿವಾಸಿ ಭಾರತೀಯ ಮತದಾರರು ಆನ್‌ಲೈನ್‌ನಲ್ಲಿ ಲಭ್ಯವಿರುವ ಫಾರ್ಮ್ 6A ಅನ್ನು ಬಳಸಿಕೊಂಡು ತಮ್ಮ ಕ್ಷೇತ್ರಗಳಲ್ಲಿ ನೋಂದಾಯಿಸಲು ಅನುಮತಿಸಲಾಗಿದೆ. ಅವರ ಹೆಸರನ್ನು ಆಯಾ ಮತಗಟ್ಟೆಯ ಚುನಾವಣಾ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ. ಪ್ರಸ್ತುತ ಅನಿವಾಸಿ ಭಾರತೀಯರು (NRI) ತಮ್ಮ ಮತಗಟ್ಟೆಗಳಲ್ಲಿ ಮಾತ್ರ ಮತ ಚಲಾಯಿಸಬಹುದು.
ಆದಾಗ್ಯೂ, ಸಾಗರೋತ್ತರ ಮತದಾರರಿಗೆ ಅಂಚೆ ಮತಪತ್ರ ಸೌಲಭ್ಯವನ್ನು ವಿಸ್ತರಿಸಲು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ತಿದ್ದುಪಡಿಯನ್ನು ತ್ವರಿತಗೊಳಿಸಲು ಚುನಾವಣಾ ಆಯೋಗ ಕಳೆದ ವರ್ಷ ನವೆಂಬರ್ 27 ರಂದು ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ. ಸೇವಾ ಮತದಾರರಿಗೆ 2019 ರ ಲೋಕಸಭೆ ಚುನಾವಣೆಯಲ್ಲಿ ಮೊದಲು ಪರೀಕ್ಷಿಸಲಾದ ಇಟಿಪಿಬಿಎಸ್ ಮೂಲಕ ಮತದಾನವನ್ನು ಮಾಡುವಂತೆ ಅದು ಪ್ರಸ್ತಾಪಿಸಿದೆ.
ದಕ್ಷಿಣ ಆಫ್ರಿಕಾವು ಪ್ರಜಾಪ್ರಭುತ್ವದಲ್ಲಿ ದೊಡ್ಡ ದಾಪುಗಾಲುಗಳನ್ನು ಮಾಡಿದೆ ಮತ್ತು ಅಕ್ಟೋಬರ್ 2022 ರಲ್ಲಿ ಎಡಬ್ಲ್ಯುಇಬಿಯ ಮುಂದಿನ ಸಾಮಾನ್ಯ ಸಭೆಯನ್ನು ಆಯೋಜಿಸಲಿದೆ ಎಂದು ಚಂದ್ರ ಹೇಳಿದರು. ಭಾರತವು ಎಡಬ್ಲ್ಯುಇಬಿ ಯೊಂದಿಗೆ ಗಟ್ಟಿಯಾದ ಮತ್ತು ಸಕ್ರಿಯವಾದ ಸಂಬಂಧವನ್ನು ಹೊಂದಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಈ ಸಂಘಟನೆಯ ಸ್ಥಾಪಕ ಸದಸ್ಯರು.
ವಿದೇಶದಲ್ಲಿ ನೆಲೆಸಿರುವ 1.26 ಕೋಟಿ ಭಾರತೀಯರಲ್ಲಿ ಕೇವಲ 1,00,000 ಕ್ಕಿಂತ ಸ್ವಲ್ಪ ಹೆಚ್ಚು ಜನರು ಮಾತ್ರ ಭಾರತೀಯ ಚುನಾವಣಾ ಆಯೋಗದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಈ ವಿಷಯದ ಪರಿಚಯವಿರುವ ಜನರು ಹೇಳಿದ್ದಾರೆ.
ಇದನ್ನೂ ಓದಿ: Lalu Prasad Yadav: ಮೇವು ಹಗರಣ; ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ಗೆ ಜಾಮೀನು ಮಂಜೂರು
Published On - 1:49 pm, Fri, 22 April 22