ಅಕ್ರಮ ಹಣ ವರ್ಗಾವಣೆ ಪ್ರಕರಣ; ಸುಪ್ರೀಂ ಕೋರ್ಟ್ನಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಜಾಮೀನು ಅರ್ಜಿ ವಜಾ
ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಬಿಡುಗಡೆ ಕೋರಿ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ (Nawab Malik) ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ವಜಾಗೊಳಿಸಿದೆ. ಈ ಹಂತದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಬಿಡುಗಡೆ ಕೋರಿ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಈ ಹಂತದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿರುವ ಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲಿಯೇ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ನವಾಬ್ ಮಲಿಕ್‌ಗೆ ಸೂಚಿಸಿದೆ.
ನವಾಬ್ ಮಲಿಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಯಾವುದೇ ಪೂರ್ವಾಪೇಕ್ಷಿತ ಅಪರಾಧ ಇಲ್ಲದಿರುವುದರಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಹೇಗೆ ಅನ್ವಯಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ಚಂದ್ರಚೂಡ್, “ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ, ನೀವು ಪಿಎಂಎಲ್‌ಎ (ಹಣ ವರ್ಗಾವಣೆ ತಡೆ ಕಾಯ್ದೆ) ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಈ ಹಂತದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ, ನೀವು ವಿಚಾರಣಾ ನ್ಯಾಯಾಲಯದ ಮುಂದೆ ಹೋಗಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿ” ಎಂದಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ ಜೊತೆಗಿನ ಆಸ್ತಿ ವ್ಯವಹಾರಕ್ಕಾಗಿ ನವಾಬ್ ಮಲಿಕ್ ಇಡಿಯಿಂದ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಎದುರಿಸುತ್ತಿದ್ದಾರೆ. ಫೆಬ್ರವರಿ 23ರಂದು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಬಂಧಿಸಲಾಗಿತ್ತು. ಅವರನ್ನು ಮೊದಲು ಇಡಿ ಕಸ್ಟಡಿಗೆ ಕಳುಹಿಸಲಾಯಿತು ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಅವರು ಇದೀಗ ಜೈಲಿನಲ್ಲಿದ್ದಾರೆ.
ಈ ವಾರದ ಆರಂಭದಲ್ಲಿ, ಬಾಂಬೆ ಹೈಕೋರ್ಟ್ ಪ್ರಕರಣದಲ್ಲಿ ತಕ್ಷಣದ ಪರಿಹಾರಕ್ಕಾಗಿ ಅವರ ಮನವಿಯನ್ನು ತಿರಸ್ಕರಿಸಿದ್ದರಿಂದ ನವಾಬ್ ಮಲಿಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ಆದೇಶದ ವಿರುದ್ಧದ ಅವರ ಮನವಿಯನ್ನು ಪರಿಗಣಿಸಲು ನಿರಾಕರಿಸಿತು. “ನಾವು ಈ ಹಂತದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಹೈಕೋರ್ಟ್‌ನ ಅವಲೋಕನಗಳು ಕೇವಲ ಮಧ್ಯಂತರ ಪರಿಹಾರವನ್ನು ನೀಡಬೇಕೆ ಎಂಬ ಬಗ್ಗೆ ಮಾತ್ರ ಸೀಮಿತವಾಗಿದೆ. ನೀವು ಸೂಕ್ತ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ತನ್ನ ಮನವಿಯನ್ನು ತಿರಸ್ಕರಿಸಿ ಮಾರ್ಚ್ 15ರಂದು ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ನವಾಬ್ ಮಲಿಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ದಾವೂದ್‌ನಿಂದ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಆಸ್ತಿ ಖರೀದಿಸಿದ ಆರೋಪದ ಮೇಲೆ ಇಡಿ ಮಲಿಕ್‌ನನ್ನು ಬಂಧಿಸಿತ್ತು. ಇಡಿ ಅವರಿಗೆ ನೀಡಿದ ಸಮನ್ಸ್‌ಗೆ ಸಹಿ ಹಾಕಿದ ನಂತರ ವಿಚಾರಣೆಗಾಗಿ ಫೆಬ್ರವರಿ 23 ರಂದು ಬೆಳಿಗ್ಗೆ 7 ಗಂಟೆಗೆ ಮಲಿಕ್ ಅವರನ್ನು ಅವರ ನಿವಾಸದಿಂದ ಕರೆದೊಯ್ದಿದ್ದರು. ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಮಲಿಕ್‌ನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್‌ಗೆ ಮಾರ್ಚ್ 21ರವರೆಗೆ ನ್ಯಾಯಾಂಗ ಬಂಧನ
Nawab Malik: ಬಂಧನಕ್ಕೊಳಗಾಗಿರುವ ಸಚಿವ ನವಾಬ್ ಮಲಿಕ್ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲು