Electric Scooter: ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟ; 7 ವರ್ಷದ ಬಾಲಕ ಸಾವು
ಮಹಾರಾಷ್ಟ್ರದ ಪಲ್ಘಾರ್ನ ವಸೈನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡುತ್ತಿರುವಾಗ ಉಂಟಾದ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾನೆ.
ಪಲ್ಘಾರ್: ಚಾರ್ಜ್ ಮಾಡುತ್ತಿದ್ದ ವೇಳೆ ಎಲೆಕ್ಟ್ರಿಕ್ ಸ್ಕೂಟರ್‌ನ (Electric Scooter) ಬ್ಯಾಟರಿ ಸ್ಫೋಟಗೊಂಡು 7 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ (Shocking News) ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಮೃತ ಬಾಲಕನನ್ನು ಶಬ್ಬೀರ್ ಅನ್ಸಾರಿ ಎಂದು ಗುರುತಿಸಲಾಗಿದೆ. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ.
ಎಲೆಕ್ಟ್ರಿಕ್ ಸ್ಕೂಟರ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿರುವುದು ಇದೇ ಮೊದಲನೇನಲ್ಲ. ಈ ರೀತಿಯ ಘಟನೆಗಳು ಆತಂಕಕ್ಕೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ತೆಲಂಗಾಣದಲ್ಲಿ ತನ್ನ ಮನೆಯಲ್ಲಿ ಚಾರ್ಜಿಂಗ್‌ಗಾಗಿ ಇರಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಡಿಟ್ಯಾಚಬಲ್ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿತ್ತು. ಹಾಗೇ, ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡುವಾಗ ಬ್ಯಾಟರಿ ಸ್ಫೋಟಗೊಂಡು ಹೊಗೆಯಿಂದ ಉಸಿರುಗಟ್ಟಿ ತಂದೆ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ವೆಲ್ಲೂರು ಜಿಲ್ಲೆಯಲ್ಲಿ ನಡೆದಿತ್ತು.
ಇದನ್ನೂ ಓದಿ: ಬೆಂಗಳೂರಿನ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಸಚಿವ ನಿತಿನ್ ಗಡ್ಕರಿ
ಮಹಾರಾಷ್ಟ್ರದ ಪಲ್ಘಾರ್ನ ವಸೈನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡುತ್ತಿರುವಾಗ ಉಂಟಾದ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾನೆ. 7 ವರ್ಷದ ಬಾಲಕ ಶಬ್ಬೀರ್ ಅನ್ಸಾರಿ ತನ್ನ ಮನೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು ಶೇ. 70ಕ್ಕೂ ಹೆಚ್ಚು ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾನೆ. ಸ್ಫೋಟ ಸಂಭವಿಸಿದಾಗ ಅನ್ಸಾರಿ ಮತ್ತು ಅವರ ಅಜ್ಜಿ ಅಂಗಳದ ಬಳಿ ಮಲಗಿದ್ದರು. ಚಾರ್ಜಿಂಗ್‌ಗಾಗಿ ಅನ್ಸಾರಿ ಅವರ ತಂದೆ ಇವಿ ಬ್ಯಾಟರಿಯನ್ನು ಪ್ಲಗ್ ಮಾಡಿದ್ದರು. ಆಗ ಬ್ಯಾಟರಿ ಸ್ಫೋಟಗೊಳ್ಳುತ್ತಿದ್ದಂತೆ ಅಲ್ಲೇ ಮಲಗಿದ್ದ ಶಬ್ಬೀರ್ ಅನ್ಸಾರಿ ಮೈ ಸುಟ್ಟು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ.
Maharashtra | A 7-year-old child died during treatment today after getting critically injured in an e-scooter blast that occurred while it was getting charged in Vasai, Palghar. Case registered; further investigation initiated: Manikpur Police Station
— ANI (@ANI) October 2, 2022
ಸೆಪ್ಟೆಂಬರ್ 23ರಂದು ಮುಂಜಾನೆ 4.30ರ ಸುಮಾರಿಗೆ EV ಬ್ಯಾಟರಿಯ ಸ್ಫೋಟ ಸಂಭವಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆತನ ಅಜ್ಜಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಬ್ಯಾಟರಿ ಅತಿಯಾಗಿ ಬಿಸಿಯಾಗಿದ್ದರಿಂದ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Mon, 3 October 22