ಮೇಘಾಲಯ ಬಿಜೆಪಿ ನಾಯಕನ ರೆಸಾರ್ಟ್ ಮೇಲೆ ಪೊಲೀಸ್ ದಾಳಿ: 73 ಮಂದಿಯ ಬಂಧನ, ವೇಶ್ಯಾವಟಿಕೆ ಆರೋಪ
ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಮ್ಮ ವಿರುದ್ಧ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕ ಬರ್ನಾರ್ಡ್ ಆರೋಪಿಸಿದ್ದಾರೆ.
ಗುವಾಹತಿ: ಬಿಜೆಪಿಗೆ ಭಾರಿ ಮುಜುಗರ ತಂದೊಡ್ಡುವ ವಿದ್ಯಮಾನವೊಂದು ಮೇಘಾಲಯದಲ್ಲಿ (Meghalaya) ನಡೆದಿದೆ. ಮೇಘಾಲಯ ಪೊಲೀಸರು ಇದೀಗ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಮಾಜಿ ಉಗ್ರಗಾಮಿ ನಾಯಕ ಬರ್ನಾರ್ಡ್ ಎನ್.ಮರಾಕ್ ಅಲಿಯಾಸ್ ರಿಂಪು (Bernard N Marak alias Rimpu) ಅವರನ್ನು ಹುಡುಕಾಡುತ್ತಿದ್ದಾರೆ. ವೆಸ್ಟ್ ಗಾರೊ ಹಿಲ್ ಜಿಲ್ಲೆಯ ಟುರಾ ಎಂಬಲ್ಲಿ ಅವರ ವಿರುದ್ಧ ಅವರ ವಿರುದ್ಧ ಅಕ್ರಮ ಮಾನವ ಸಾಗಣೆ ಪ್ರಕರಣ ದಾಖಲಾಗಿದೆ.
‘ನಾನೇನು ತಲೆಮರೆಸಿಕೊಂಡಿಲ್ಲ’ ಎಂದು ಹೇಳುತ್ತಿರುವ ರಿಂಪು, ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಮ್ಮ ವಿರುದ್ಧ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಿನ್ನೆಯ ದಾಳಿಯನ್ನು ಕಳೆದ ಫೆಬ್ರುವರಿಯಲ್ಲಿ ದಾಖಲಾಗಿರುವ ಪೊಕ್ಸೊ ಪ್ರಕರಣಕ್ಕೆ ತಳಕು ಹಾಕಲು ಯತ್ನಿಸುತ್ತಿದ್ದಾರೆ. ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಿರುವ ಸಂಗ್ಮಾ ರಾಜಕೀಯ ಕಾರಣಗಳಿಗಾಗಿಯೇ ನನ್ನ ಬಂಧನಕ್ಕೆ ಆದೇಶ ನೀಡಿದ್ದಾರೆ ಎಂದು ಅವರು ದೂರಿದ್ದಾರೆ.
ಈ ಪ್ರಕಣದ ಬಗ್ಗೆ ಬಿಜೆಪಿಯ ಮೇಘಾಲಯ ಘಟಕವು ಈವರೆಗೆ ಏನೂ ಹೇಳಿಲ್ಲ. ಅಧಿಕೃತ ಹೇಳಿಕೆಯನ್ನು ಇನ್ನಷ್ಟೇ ನೀಡಬೇಕಿದೆ. ಬರ್ನಾರ್ಡ್ ಎನ್. ಮಾರಕ್ ಮಾಲೀಕತ್ವದ ರೆಸಾರ್ಟ್ ಮೇಲೆ ಶನಿವಾರ ನಸುಕಿನಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕೊಳಕು ಕೊಠಡಿಗಳಲ್ಲಿ ಆರು ಮಕ್ಕಳು ಪತ್ತೆಯಾಗಿದ್ದರು. ಈ ರೆಸಾರ್ಟ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಮೇಘಾಲಯ ಪೊಲೀಸರು ಆರೋಪಿಸಿದ್ದು, ಈವರೆಗೆ 73 ಮಂದಿಯನ್ನು ಬಂಧಿಸಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಬಿಜೆಪಿ ನಾಯಕ ತಲೆಮರೆಸಿಕೊಂಡಿದ್ದಾರೆ.
ಎಲ್ಲ ಮಕ್ಕಳು ಇನ್ನೂ ಆಘಾತದ ಸ್ಥಿತಿಯಲ್ಲಿಯೇ ಇದ್ದಾರೆ. ಸಮರ್ಪಕವಾಗಿ ಮಾತನಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಘಟನಾ ಸ್ಥಳದಲ್ಲಿ ಪತ್ತೆಯಾದ ವಸ್ತುಗಳು ಮತ್ತು ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಈ ಸ್ಥಳವನ್ನು ಬರ್ನಾರ್ಡ್ ಅವರು ವೇಶ್ಯಾವಾಟಿಕೆಗಾಗಿ ಬಳಸಿಕೊಳ್ಳುತ್ತಿದ್ದರು ಎನ್ನಲು ಸಾಕಷ್ಟು ಆಧಾರಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ನಾನು ಕೆಲ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದೇನೆ. ಪೊಲೀಸರು ಆ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಬಂಧನದಲ್ಲಿರುವ ಯಾವೊಬ್ಬ ವ್ಯಕ್ತಿಯೂ ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಪೊಲೀಸರು ಹೊರಿಸಿರುವ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.
‘ಪಾರ್ಟಿ ಮಾಡುತ್ತಿದ್ದ ಪ್ರೌಢ ವಯಸ್ಕ ಮಹಿಳೆಯನ್ನು ವೇಶ್ಯೆ ಎಂದು ಹೇಳಲು ಆಗುವುದಿಲ್ಲ. ಹೋಂಸ್ಟೇಗೆ ವೇಶ್ಯಾಗೃಹದ ಪಟ್ಟ ನೀಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಬೇಕೆಂದೇ ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ. ತಮ್ಮ ಮತದಾರರಿಗೆ ಕಳಂಕ ತರುತ್ತಿದ್ದಾರೆ’ ಎಂದು ರಿಂಪು ಆರೋಪಿಸಿದರು.
ಗಾರೊ ಹಿಲ್ ಆಟೊನಮಸ್ ಜಿಲ್ಲಾ ಮಂಡಳಿಯ ಚುನಾಯಿತ ಪ್ರತಿನಿಧಿಯಾಗಿರುವ ಬರ್ನಾರ್ಡ್ ಎನ್.ಮಾರಕ್, ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (Meghalaya Democratic Alliance – MDA) ಮೈತ್ರಿ ಸರ್ಕಾರವನ್ನು ಕಠಿಣವಾಗಿ ಟೀಕಿಸುತ್ತಿದ್ದಾರೆ. ಬಿಜೆಪಿ ಸಹ ಈ ಮೈತ್ರಿಕೂಟದ ಸಹವರ್ತಿ ಪಕ್ಷವಾಗಿದೆ. ಅ.ಚಿಕ್ ನ್ಯಾಷನಲಿಸ್ಟ್ ವಾಲಂಟರಿ ಕೌನ್ಸಿಲ್ (ಬಿ) ಎನ್ನುವ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸ್ವಯಂಘೋಷಿತ ಅಧ್ಯಕ್ಷರಾಗಿದ್ದರು.
ತಮ್ಮ ಅಪ್ರಾಪ್ತ ವಯಸ್ಸಿನ ಮಗಳು ಒಂದು ವಾರದಿಂದ ನಾಪತ್ತೆಯಾಗಿದ್ದಾಳೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ನಾಪತ್ತೆಯಾದ ಬಾಲಕಿ ಟುರಾದಲ್ಲಿ ಇರುವ ಬಗ್ಗೆ ಅವರ ಸಂಬಂಧಿಕರು ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ ಬಾಲಕಿಯ ಮೇಲೆ ಕಳೆದ ಒಂದು ವಾರದಲ್ಲಿ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆದಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಕ್ಸೊ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ವಿಚಾರಣೆ ವೇಳೆ ರಿಂಪು ಬಾಗನ್ ವಿರುದ್ಧ ಬಾಲಕಿಯು ಆರೋಪ ಮಾಡಿದ್ದಳು. ಈ ಪ್ರಕರಣದ ಅಕ್ರಮ ವ್ಯವಹಾರದ ಬಗ್ಗೆ ಹಲವು ದೂರುಗಳು ಕೇಳಿಬಂದಿದ್ದವು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಿಂಪು ಬಗನ್ ಕಟ್ಟಡಕ್ಕೆ ಭೇಟಿ ನೀಡಿದಾಗ ಸರ್ಚ್ ಪಾರ್ಟಿಗೆ ಮೂರು ಅಂತಸ್ತಿನ ಕಟ್ಟಡ ಗೋಚರಿಸಿತು. ಇದರಲ್ಲಿ ಸುಮಾರು 30 ಕೊಠಡಿಗಳಿದ್ದವು ಎಂದು ಪೊಲೀಸರು ಹೇಳಿದ್ದಾರೆ.