
ಟೆಹ್ರಾನ್, ಮಾರ್ಚ್ 3: ಇರಾನ್‌ನ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್‌ನ (Israel Attack) ದಾಳಿ ನಡೆಯುತ್ತಿರುವುದರಿಂದ ಹಲವಾರು ಭಾರತೀಯ ವಿದ್ಯಾರ್ಥಿಗಳನ್ನು ಟೆಹ್ರಾನ್‌ನ ಹೊರಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಕೆಲವು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಟೆಹ್ರಾನ್‌ನಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಅಂಥವರನ್ನು ಹೊರತುಪಡಿಸಿ ಉಳಿದವರನ್ನು ಶಿಫ್ಟ್ ಮಾಡಲಾಗಿದೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ಸಹ ನೀಡಲಾಗಿದೆ.
ಟೆಹ್ರಾನ್ ನಗರದಲ್ಲಿ ದಾಳಿಯ ಅಪಾಯ ಹೆಚ್ಚಾದ ಕಾರಣದಿಂದ ಭಾರತದ ರಾಯಭಾರ ಕಚೇರಿಯು ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಟೆಹ್ರಾನ್‌ನ ಹೊರಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ರಾಯಭಾರ ಕಚೇರಿಯು ಅವರಿಗೆ ಸಾರಿಗೆ, ಆಹಾರ ಮತ್ತು ವಸತಿ ವ್ಯವಸ್ಥೆಗಳನ್ನು ಮಾಡಿದೆ. ರಾಯಭಾರ ಕಚೇರಿಯ ಸಹಾಯವನ್ನು ನಿರಾಕರಿಸಿದ ಕೆಲವೇ ವಿದ್ಯಾರ್ಥಿಗಳು ಮಾತ್ರ ಟೆಹ್ರಾನ್‌ನಲ್ಲಿ ಉಳಿದಿದ್ದಾರೆ ಎಂದು ಕಾನ್ಸುಲೇಟ್ ತಿಳಿಸಿದೆ.
ಇದನ್ನೂ ಓದಿ: ಇರಾನ್ ಮೇಲೆ ಇಸ್ರೇಲ್-ಯುಎಸ್ ದಾಳಿ; ಸಾವಿನ ಸಂಖ್ಯೆ 787ಕ್ಕೆ ಏರಿಕೆ
“ಇನ್ನೂ ಇರಾನ್‌ನಲ್ಲಿಯೇ ಉಳಿದಿರುವ ಇತರ ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತೀಯ ಪ್ರಜೆಗಳಿಗೆ ಈ ಹಿಂದೆ ನೀಡಲಾದ ಸಲಹೆಯು ಬದಲಾಗದೆ ಉಳಿದಿದೆ. ನೀವು ಇರುವ ಸ್ಥಳದಲ್ಲಿಯೇ ಇರಿ, ಸಾಧ್ಯವಾದಷ್ಟು ಮನೆ ಅಥವಾ ರೂಂನ ಒಳಗಿರಿ. ಕಿಟಕಿಗಳಿಂದ ದೂರವಿರಿ. ಎಲ್ಲಾ ಸಮಯದಲ್ಲೂ ಸರಿಯಾದ ಎಚ್ಚರಿಕೆ ವಹಿಸಿ. ಪ್ರತಿಭಟನೆಗಳ ಪ್ರದೇಶಗಳ ಬಳಿ ಓಡಾಡಬೇಡಿ. ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಿ” ಎಂದು ಭಾರತ ಸೂಚಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ