Court: ಸತ್ತ ಗಂಡನ ಕೆಲಸ ಗಿಟ್ಟಿಸಲು ಸುಳ್ಳು ದಾಖಲೆ, ಕುಡಿದು ಗಲಾಟೆ; ಈಕೆ ಉದ್ಯೋಗಕ್ಕೆ ನಾಲಾಯಕ್ ಎಂದಿತು ಕೋರ್ಟ್
Forged Documents: ದೆಹಲಿಯ ಬಿಹಾರ ಭವನದಲ್ಲಿ ಗ್ರೂಪ್ 4 ವಿಭಾಗದಲ್ಲಿ ನೌಕರಿಯಲ್ಲಿದ್ದ ಮಹಿಳೆಯೊಬ್ಬರನ್ನು ಸುಳ್ಳು ದಾಖಲೆ ಕಾರಣಕ್ಕೆ ವಜಾಗೊಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಉಚ್ಚ ನ್ಯಾಯಾಲಯ, ಆ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ ಕ್ರಮವನ್ನು ಎತ್ತಿಹಿಡಿದು ತೀರ್ಪಿತ್ತಿದೆ.
ನವದೆಹಲಿ: ಕೆಲಸಕ್ಕೆ ಸೇರಲು ಸುಳ್ಳು ದಾಖಲೆಗಳನ್ನು (Forged Documents) ಸಲ್ಲಿಸುವ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಫೋರ್ಜರಿ ದಾಖಲೆ ಸಲ್ಲಿಸುವವರು ಉದ್ಯೋಗಿಗಳಾಗಲು ನಾಲಾಯಕ್ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೆಹಲಿಯ ಬಿಹಾರ ಭವನದಲ್ಲಿ ಗ್ರೂಪ್ 4 ವಿಭಾಗದಲ್ಲಿ ನೌಕರಿಯಲ್ಲಿದ್ದ ಮಹಿಳೆಯೊಬ್ಬರನ್ನು ಸುಳ್ಳು ದಾಖಲೆ ಕಾರಣಕ್ಕೆ ವಜಾಗೊಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಉಚ್ಚ ನ್ಯಾಯಾಲಯ, ಆ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ ಕ್ರಮವನ್ನು ಎತ್ತಿಹಿಡಿದು ತೀರ್ಪಿತ್ತಿದೆ. ಈ ಮಹಿಳೆಯ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
2009ರಲ್ಲಿ ಕುಡಿದು ಗಲಾಟೆ ಮಾಡಿದ್ದಳು ಈ ಮಹಿಳೆ
ಆರೋಪಿತ ಮಹಿಳೆಗೆ ತನ್ನ ಪತಿ ನಿಧನದ ಬಳಿಕ ಗ್ರೂಪ್ ಫೋರ್ ಕೆಟಗರಿಯಲ್ಲಿ ಅನುಕಂಪದ ಆಧಾರದ ಮೇಲೆ ಬಿಹಾರ ಭವನದಲ್ಲಿ ಕೆಲಸ ನೀಡಲಾಗಿತ್ತು. 2009ರಲ್ಲಿ ಈಕೆ ಕುಡಿತದ ನಶೆಯಲ್ಲಿ ಗಲಾಟೆ ಮಾಡಿದ್ದಾರೆ. ಬಿಹಾರ ಭವನದಲ್ಲಿ ಇತರರಿಗೆ ತೊಂದರೆ ಕೊಟ್ಟಿದ್ದಾರೆ. ಈ ಕಾರಣಗಳಿಂದ ಈ ಮಹಿಳೆಯನ್ನು ಅಮಾನತುಗೊಳಿಸಿ ತನಿಖೆ ನಡೆಸಲಾಯಿತು.
ಇದನ್ನೂ ಓದಿ: Missing: ಕಂಪನಿಯೊಂದರ ಮುಖ್ಯಸ್ಥ ಎವರೆಸ್ಟ್ ಉತ್ತುಂಗಕ್ಕೆ ಏರಿ ನಾಪತ್ತೆ; ಭಾರತೀಯ ಮೂಲದ ಸಿಂಗಾಪುರ ವ್ಯಕ್ತಿಗಾಗಿ ಹುಡುಕಾಟ
ಈಕೆ ಕೆಲಸಕ್ಕೆ ಸೇರಲು ಸುಳ್ಳು ಪ್ರಮಾಣಪತ್ರಗಳನ್ನು ಸಲ್ಲಿಸಿದ್ದು ತನಿಖೆ ವೇಳೆ ಗೊತ್ತಾಗಿದೆ. ಕೆಲಸಕ್ಕೆ ಸೇರಲು 8ನೇ ತರಗತಿ ಓದಿರುವುದು ಕಡ್ಡಾಯ ಇತ್ತು. ಅದರೆ, ಈಕೆ ಎಂಟನೇ ತರಗತಿ ಓದಿರಲಿಲ್ಲ. ಅದಕ್ಕೆ ಸುಳ್ಳು ದಾಖಲೆ ಸೃಷ್ಟಿಸಿ ಕೊಟ್ಟಿದ್ದರು. ಅದಾದ ಬಳಿಕ ಈಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಈ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಕೋರ್ಟ್ ತೀರ್ಪು ಈ ಮಹಿಳೆಯ ವಿರುದ್ಧವೇ ಬಂದಿದೆ. ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಎಂಟನೇ ತರಗತಿ ಅರ್ಹತೆ ಕಡ್ಡಾಯ ಇರಲಿಲ್ಲ ಎಂದು ಮಹಿಳೆ ಮಾಡಿದ ವಾದವನ್ನು ಕೋರ್ಟ್ ಪುರಸ್ಕರಿಸಲಿಲ್ಲ. ಅಲ್ಲದೇ ಫೋರ್ಜರಿ ಮಾಡುವ ಉದ್ಯೋಗಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಪಂಜಾಬ್ನ ಅಂತರಾಷ್ಟ್ರೀಯ ಗಡಿ ಬಳಿ ಮಾದಕ ವಸ್ತು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್‌ಎಫ್
‘ಕೆಲಸ ಸೇರಲು ಸುಳ್ಳು ದಾಖಲೆ ನೀಡಿದ ಆಪಾದಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇವರು ಉದ್ಯೋಗಿಗಳಾಗಲು ಲಾಯಕ್ಕಾಗಿರುವುದಿಲ್ಲ. ಇಂಥ ವ್ಯಕ್ತಿಗಳಿಗೆ ಯಾವ ಅನುಕಂಪವನ್ನೂ ತೋರಬಾರದು’ ಎಂದು ದೆಹಲಿ ಉಚ್ಚ ನ್ಯಾಯಪೀಠ ತನ್ನ ತೀರ್ಪಿನ ವೇಳೆ ಹೇಳಿದೆ ಎಂದು ಲೈವ್ ಮಿಂಟ್ ಪತ್ರಿಕೆಯಲ್ಲಿ ವರದಿಯಾಗಿದೆ.