ಭ್ರಷ್ಟಾಚಾರ ಆರೋಪ; ಇಡಿ ಅಧಿಕಾರಿಗಳಿಂದ ಬಂಗಾಳದ ಸಚಿವ ಜ್ಯೋತಿಪ್ರಿಯ ಮಲ್ಲಿಕ್ ಬಂಧನ
ಇಡಿ ದಾಳಿಯ ವೇಳೆ ನಡೆದ ವಿಚಾರಣೆಯಲ್ಲಿ ಜ್ಯೋತಿಪ್ರಿಯ ಮಲ್ಲಿಕ್ ಅವರ ಹೇಳಿಕೆ ಅಸಂಬದ್ಧವಾಗಿತ್ತು. ಇಡಿ ಅಧಿಕಾರಿಗಳು ಕೇಳಿದ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ. ಹೀಗಾಗಿ, ಅವರನ್ನು ಬಂಧಿಸಲಾಗಿದೆ.

ಕೊಲ್ಕತ್ತಾ: ಪಡಿತರ ವಿತರಣೆ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಮಾಜಿ ಆಹಾರ ಸಚಿವ ಹಾಗೂ ಹಾಲಿ ಅರಣ್ಯ ಸಚಿವ ಜ್ಯೋತಿಪ್ರಿಯ ಮಲ್ಲಿಕ್ ಅವರನ್ನು ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯವು ಕೊಲ್ಕತ್ತಾದ ಅವರ ಮನೆಯಲ್ಲಿ 20 ಗಂಟೆಗಳ ಕಾಲ ಸುದೀರ್ಘ ದಾಳಿ ನಡೆಸಿದ ಬಳಿಕ ಜ್ಯೋತಿಪ್ರಿಯ ಮಲ್ಲಿಕ್ ಅವರನ್ನು ಬಂಧಿಸಿದೆ. ಇಂದು ಮಲ್ಲಿಕ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆದರೆ ಅದಕ್ಕೂ ಮುನ್ನ ಇಂದು ಬೆಳಗ್ಗೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಮಾಜಿ ಆಹಾರ ಸಚಿವ ಜ್ಯೋತಿಪ್ರಿಯ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಬೆಳಗ್ಗೆ 8.30ರ ಸುಮಾರಿಗೆ ಸಿಜಿಒ ಸಂಕೀರ್ಣದಿಂದ ಜೋಕಾ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಪರೀಕ್ಷೆಯ ನಂತರ ಅವರನ್ನು ಬ್ಯಾಂಕ್‌ಶಾಲ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು. ಇಡಿ ಅಧಿಕಾರಿಗಳು ವಿಚಾರಣೆಗಾಗಿ ಸಚಿವರ ಕಸ್ಟಡಿಗೆ ಕೋರಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ನಿವಾಸದ ಮೇಲೆ ಇಡಿ ದಾಳಿ
ಇಡಿ ಮೂಲಗಳ ಪ್ರಕಾರ, ಇಡಿ ದಾಳಿಯ ವೇಳೆ ನಡೆದ ವಿಚಾರಣೆಯಲ್ಲಿ ಜ್ಯೋತಿಪ್ರಿಯ ಮಲ್ಲಿಕ್ ಅವರ ಹೇಳಿಕೆ ಅಸಂಬದ್ಧವಾಗಿತ್ತು. ಇಡಿ ಅಧಿಕಾರಿಗಳು ಕೇಳಿದ ಆದಾಯ ಮತ್ತು ವೆಚ್ಚದ ಲೆಕ್ಕಾಚಾರ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ. ಹೀಗಾಗಿ, ಅವರನ್ನು ಬಂಧಿಸಲಾಗಿದೆ.
ಪಡಿತರ ವಿತರಣೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಬಂಧಿಸಿದ ಬಳಿಕ ಅವರನ್ನು ಕೋಲ್ಕತ್ತಾದ ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆದೊಯ್ಯುತ್ತಿದ್ದಾಗ ಸಚಿವರು ತಮ್ಮ ಬಂಧನಕ್ಕೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಾರಣ ಎಂದು ಆರೋಪಿಸಿದ್ದಾರೆ. “ನಾನು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿದ್ದೇನೆ. ಬಿಜೆಪಿ ಅಧಿಕಾರದಲ್ಲಿರುವವರೆಗೆ ಇಂತಹವುಗಳು ನಡೆಯುತ್ತಲೇ ಇರುತ್ತವೆ” ಎಂದು ಅವರು ದೂಷಿಸಿದ್ದಾರೆ.
ಇದನ್ನೂ ಓದಿ: ಸಚಿವರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಟಿಎಂಸಿ ಸಂಸದರನ್ನು ಎಳೆದೊಯ್ದು, ಬಂಧನ
ಜ್ಯೋತಿಪ್ರಿಯ ಮಲ್ಲಿಕ್ ಬಂಗಾಳದ ಹಬ್ರಾ ಕ್ಷೇತ್ರದ ಶಾಸಕರಾಗಿದ್ದಾರೆ. ಪ್ರಸ್ತುತ ಪರಿಸರ ಮತ್ತು ಅರಣ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಬೆಳಗ್ಗೆ ಕೋಲ್ಕತ್ತಾದ ಸಾಲ್ಟ್‌ಲೇಕ್ ಪ್ರದೇಶದಲ್ಲಿರುವ ಜ್ಯೋತಿಪ್ರಿಯ ಮಲ್ಲಿಕ್ ಅವರ ಮನೆಗೆ ಆಗಮಿಸಿ ಇಂದು ಮುಂಜಾನೆ ತೆರಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ