Fact Check ಅಸನಿ ಚಂಡಮಾರುತದ ನಡುವೆ ಆಂಧ್ರ ಕರಾವಳಿಗೆ ತೇಲಿ ಬಂದಿದ್ದು ಚಿನ್ನದ ರಥವೇ?; ಬಣ್ಣ ಮಾತ್ರ ಬಂಗಾರದ್ದು, ತೇರು ಸ್ಟೀಲಿನದ್ದು

| Updated By: ರಶ್ಮಿ ಕಲ್ಲಕಟ್ಟ

Updated on: May 11, 2022 | 7:32 PM

ಅನೇಕ ವಿಶ್ವಾಸಾರ್ಹ ಮಾಧ್ಯಮಗಳು ಈ ಸಂಗತಿಯನ್ನು ವರದಿ ಮಾಡಿದ್ದು ಮೇ 10 ರಂದು ಶ್ರೀಕಾಕುಳಂನ ಕಡಲತೀರದಲ್ಲಿ ನಿಗೂಢವಾದ "ಚಿನ್ನದ ಬಣ್ಣದ" ರಥವು ದಡಕ್ಕೆ ತೇಲಿ ಬಂದಿದೆ ಎಂದು ಹೇಳಿವೆ

Fact Check ಅಸನಿ ಚಂಡಮಾರುತದ ನಡುವೆ ಆಂಧ್ರ ಕರಾವಳಿಗೆ ತೇಲಿ ಬಂದಿದ್ದು ಚಿನ್ನದ ರಥವೇ?; ಬಣ್ಣ ಮಾತ್ರ ಬಂಗಾರದ್ದು, ತೇರು ಸ್ಟೀಲಿನದ್ದು
ಆಂಧ್ರ ಕಡಲ ತೀರದಲ್ಲಿ ಚಿನ್ನದ ತೇರು
Follow us on

ಆಂಧ್ರಪ್ರದೇಶದಲ್ಲಿ ಅಸನಿ ಚಂಡಮಾರುತವು (cyclone Asani) ಭಾರೀ ಮಳೆಯನ್ನು ಉಂಟುಮಾಡುತ್ತದೆ ಎಂಬ ಸುದ್ದಿಯ ನಡುವೆ, ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂ ತೀರಕ್ಕೆ ಚಿನ್ನದ ತೇರು (chariot made of gold) ತೇಲಿಬಂದಿದೆ ಎಂಬುದು ಸುದ್ದಿಯಾಗಿದೆ. ವೈರಲ್ ವಿಡಿಯೊದಲ್ಲಿ ಜನರು ಸಮುದ್ರದಿಂದ ದಡಕ್ಕೆ ರಥವನ್ನು ಎಳೆಯುತ್ತಿರುವುದನ್ನು ಕಾಣಬಹುದು. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನೇಕ ಜನರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಮುದ್ರದಲ್ಲಿ ಚಿನ್ನದ ರಥ ಕಂಡುಬಂದಿದೆ. ಅಸನಿ ಚಂಡಮಾರುತದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕರಾವಳಿಗೆ ಚಿನ್ನದ ರಥ ತೇಲಿ ಬಂದಿದೆ. ರಥವು ಮಠದ ಆಕಾರದಲ್ಲಿದೆ. ಬಹುಶಃ ಅದು ಥೈಲ್ಯಾಂಡ್ ಅಥವಾ ಮ್ಯಾನ್ಮಾರ್‌ನಿಂದ ತೇಲುತ್ತಾ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಿದೆ ಎಂದು ನೆಟ್ಟಿಗರು ಬರೆದಿದ್ದಾರೆ.



ಫ್ಯಾಕ್ಟ್ ಚೆಕ್

ಅನೇಕ ವಿಶ್ವಾಸಾರ್ಹ ಮಾಧ್ಯಮಗಳು ಈ ಸಂಗತಿಯನ್ನು ವರದಿ ಮಾಡಿದ್ದು ಮೇ 10 ರಂದು ಶ್ರೀಕಾಕುಳಂನ ಕಡಲತೀರದಲ್ಲಿ ನಿಗೂಢವಾದ “ಚಿನ್ನದ ಬಣ್ಣದ” ರಥವು ದಡಕ್ಕೆ ತೇಲಿ ಬಂದಿದೆ ಎಂದು ಹೇಳಿವೆ. ಸ್ಥಳೀಯರು ಚಿನ್ನದ ಬಣ್ಣದ ರಥವನ್ನು ಸಮುದ್ರ ತೀರಕ್ಕೆ ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಆದರೆ ರಥವು ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಎಲ್ಲಿಯೂ ವರದಿಯಾಗಿಲ್ಲ. ಈ ವೈರಲ್ ಸುದ್ದಿ ಬಗ್ಗೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದೆ.

ಇಂಡಿಯಾ ಟುಡೇ ಶ್ರೀಕಾಕುಳಂ ಜಿಲ್ಲೆಯ ಜಿಲ್ಲಾಧಿಕಾರಿ ಐಎಎಸ್ ಅಧಿಕಾರಿ ಶ್ರೀಕೇಶ್ ಬಿ ಲತಾಕರ್ ಅವರೊಂದಿಗೆ ಮಾತನಾಡಿದ್ದು, ರಥವು ಚಿನ್ನದಿಂದ ಮಾಡಲಾಗಿಲ್ಲ ಆದರೆ ಚಿನ್ನದ ಬಣ್ಣದ್ದಾಗಿದೆ ಎಂದು ಅವರು  ಸ್ಪಷ್ಟಪಡಿಸಿದ್ದಾರೆ. “ರಥವು ಈಗ ಸ್ಥಳೀಯ ಪೊಲೀಸರ ವಶದಲ್ಲಿದೆ” ಎಂದು ಅವರು ಹೇಳಿರುವುದಾಗಿ ವರದಿ ಮಾಡಿದೆ.

ಹೆಚ್ಚಿನ ದೃಢೀಕರಣಕ್ಕಾಗಿ, ಇಂಡಿಯಾ ಟುಡೇ ರಥವನ್ನು ನೋಡಿದ ಶ್ರೀಕಾಕುಳಂನ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದೆ. ಶ್ರೀಕಾಕುಳಂನ ತೆಕ್ಕಲಿ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಎಂ ವೆಂಕಟ ಗಣೇಶ್ ಅವರು ‘ಇಂಡಿಯಾ ಟುಡೇ’ ಜತೆ ದೂರವಾಣಿ ಮೂಲಕ ಮಾತನಾಡಿದ್ದು , ತನಿಖೆಯ ನಂತರ ಪೊಲೀಸರಿಗೆ “ರಥದಲ್ಲಿ ಚಿನ್ನದಂತಹ ಯಾವುದೇ ಬೆಲೆಬಾಳುವ ಲೋಹ ಪತ್ತೆಯಾಗಿಲ್ಲ. ಇದು ಉಕ್ಕು (ಸ್ಟೀಲ್) ಮತ್ತು ಮರದಿಂದ ಮಾಡಲ್ಪಟ್ಟಿದೆ. ಆದರೆ ಅದರ ಬಣ್ಣ ಮಾತ್ರ ಬಂಗಾರದ್ದು. ಇದನ್ನು ಮತ್ತಷ್ಟು ಪರಿಶೀಲಿಸಲು ನಾವು ಇಂದು ಬಾಂಬ್ ಸ್ಕ್ವಾಡ್ ಅನ್ನು ಕರೆದಿದ್ದೇವೆ ಎಂದು ಹೇಳಿದ್ದಾರೆ.

ಈ ರಥ ಎಲ್ಲಿಂದ ಬಂತು ಎಂಬುದು ಜಿಲ್ಲಾಡಳಿತಕ್ಕೆ ಇನ್ನೂ ಖಚಿತ ಮಾಹಿತಿ ನೀಡಿಲ್ಲ. “ಅದರ ಮೇಲೆ ಕೆಲವು ಶಾಸನಗಳಿವೆ. ಅವುಗಳನ್ನು ಅರ್ಥೈಸಿಕೊಳ್ಳಲು ತಜ್ಞರ ನೆರವು ಪಡೆಯುತ್ತಿದ್ದೇವೆ. ಇದು ನಮಗೆ ಕೆಲವು ಸುಳಿವು ನೀಡಬಹುದು ”ಲತಾಕರ್ ಹೇಳಿದ್ದಾರೆ. ಒಟ್ಟಿನಲ್ಲಿ ವೈರಲ್ ಸುದ್ದಿಯಲ್ಲಿ ಹೇಳಿದಂತೆ ಇದು ಚಿನ್ನದ ರಥ ಅಲ್ಲ. ಚಿನ್ನದ ಬಣ್ಣದ ರಥ ಅಷ್ಟೇ.