Fact Check: ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುಳ್ಳು ಸುದ್ದಿ ವೈರಲ್

Lahore Airport Fire Fact Check: ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ಇದರಿಂದಾಗಿ ಎಲ್ಲಾ ವಿಮಾನಗಳ ಹಾರಾಟ ರದ್ದುಗೊಂಡಿದೆ ಎನ್ನಲಾಗಿದೆ. ಆದರೆ, ಈ ಹೇಳಿಕೆ ಸುಳ್ಳು ಎಂದು ತನಿಖೆಯಿಂದ ತಿಳಿದುಬಂದಿದೆ. ಮೇ 2024 ರ ಹಳೆಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

Fact Check: ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುಳ್ಳು ಸುದ್ದಿ ವೈರಲ್
Lahore Airport Fire Fact Check

Updated on: Apr 28, 2025 | 12:40 PM

ಬೆಂಗಳೂರು (ಏ. 28): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam Terrorists Attack) ನಂತರ, ಪಾಕಿಸ್ತಾನದ ಲಾಹೋರ್‌ನ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಶನಿವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದ ಕಾರಣ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜನರು ಅಲ್ಲಲ್ಲಿ ಓಡಾಡುತ್ತಿರುವುದು ಕಾಣಬಹುದು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವುದೇನು?:

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಪಾಕಿಸ್ತಾನ ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ. ಎಲ್ಲಾ ವಿಮಾನ ಹಾರಾಟ ಸ್ಥಗಿತ. ಆಟ ಶುರುವಾಗಿದೆ…. ಆಟ ಮುಗಿಯೋ ಹೊತ್ತಿಗೆ ಪಾಕಿಸ್ತಾನದ ಕಥೆನೂ ಮುಗಿದಿರುತ್ತೆ’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಇವರೇ ಹಿಂದೂಗಳನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕರು?
ಬೈಸರನ್ ಕಣಿವೆಯಲ್ಲಿ ಶವಗಳಿರುವ ವೈರಲ್ ಫೋಟೋದ ನಿಜಾಂಶ ಏನು?
ಭಾರತ ಮತ್ತು ಪಾಕಿಸ್ತಾನದ ನಡುವೆ ಭಾರೀ ಗುಂಡಿನ ದಾಳಿ?
ಮಗುವಿನ ಅಜ್ಜನನ್ನು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕೊಂದಿದ್ದಾರೆ?

ಲಾಹೋರ್ ವಿಮಾನ ನಿಲ್ದಾಣದಲ್ಲಿ ನಿಜಕ್ಕೂ ಭಾರಿ ಬೆಂಕಿ ಕಾಣಿಸಿಕೊಂಡಿದೆಯೇ?:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆಗ ಇದೇ ವೈರಲ್ ಹೇಳಿಕೆಯೊಂದಿಗೆ ಅನೇಕ ಸುದ್ದಿ ಮಾಧ್ಯಮ ಕೂಡ ಈ ಕುರಿತು ವರದಿ ಮಾಡಿರುವುದು ಸಿಕ್ಕಿತು. ಇದರ ಮಧ್ಯೆ ಎಕ್ಸ್ ಪೋಸ್ಟ್ ಒಂದು ಕಂಡಿದೆ.

Fact Check: ಇವರೇ ನೋಡಿ ಹಿಂದೂಗಳನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕರು ಎಂದು ಖಜಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ಸ್ ವಿಡಿಯೋ ವೈರಲ್

OsintTV ಎಂಬ ಎಕ್ಸ್ ಖಾತೆಯಲ್ಲಿ ಮೇ 9, 2024 ರಂದು ಇದೇ ವೈರಲ್ ವೀಡಿಯೊದ ಪೂರ್ಣ ಆವೃತ್ತಿ ನಮಗೆ ಸಿಕ್ಕಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಲಾಹೋರ್ ಅಲ್ಲಾಮಾ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಇಡೀ ವಲಸೆ ವ್ಯವಸ್ಥೆಯೇ ನಾಶವಾಗಿದೆ. ಹೊಗೆಯನ್ನು ತೆರವುಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಲಾಹೋರ್‌ಗೆ ಒಳಬರುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ದೇಶಾದ್ಯಂತ ಪರ್ಯಾಯ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು. ಲಾಹೋರ್‌ಗೆ ತೆರಳುತ್ತಿದ್ದ ಶ್ರೀಲಂಕಾದ ಏರ್‌ಲೈನ್ಸ್ ವಿಮಾನವನ್ನು ಮಧ್ಯದಲ್ಲೇ ಹಿಂದಕ್ಕೆ ತಿರುಗಿಸಲಾಯಿತು. ದುಬೈನಿಂದ ಲಾಹೋರ್‌ಗೆ ತೆರಳುತ್ತಿದ್ದ ಎರಡು ವಿಮಾನಗಳನ್ನು ಇಸ್ಲಾಮಾಬಾದ್‌ಗೆ ಕಳುಹಿಸಲಾಯಿತು’’ ಎಂದು ಹೇಳಲಾಗಿದೆ.

 

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ಏಪ್ರಿಲ್ 27, 2025 ರ ಗಲ್ಫ್ ನ್ಯೂಸ್ ವರದಿ ಸಿಕ್ಕಿದೆ. ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು, ಮೇ 2024 ರ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಆ ಸಮಯದಲ್ಲಿ, ಲಾಹೋರ್ ವಿಮಾನ ನಿಲ್ದಾಣದ ವಲಸೆ ಕೌಂಟರ್‌ನ ಮೇಲ್ಛಾವಣಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಣ್ಣ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನಗಳ ಹಾರಾಟಕ್ಕೆ ಅಡ್ಡಿಯಾಯಿತು. ಶನಿವಾರ ಯಾವುದೇ ಬೆಂಕಿ ಅವಘಡ ಅಥವಾ ವಿಮಾನ ರದ್ದತಿ ಸಂಭವಿಸಿಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು ಎಂದು ಇದರಲ್ಲಿ ಬರೆಯಲಾಗಿದೆ.

ಇದರ ಜೊತೆಗೆ ಭಾರತ ಹಾಗೂ ಪಾಕಿಸ್ತಾನದ ಮಾಧ್ಯಮ ಕೂಡ ಮೇ 9, 10 2024 ರಂದು ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇದೇ ವೈರಲ್ ಆಗುತ್ತಿರುವ ವಿಡಿಯೋಕ್ಕೆ ಹೋಲುವ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಬೆಂಕಿ ಕಾಣಿಸಿಕೊಂಡ ಪರಿಣಾಮ ಅನೇಕ ಅಂತರರಾಷ್ಟ್ರೀಯ ವಿಮಾನಗಳು ವಿಳಂಬವಾದವು. ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು ಮತ್ತು ಯಾವುದೇ ಜೀವ ಹಾನಿ ಸಂಭವಿಸಿಲ್ಲ. ವಲಸೆ ಕೌಂಟರ್‌ನ ಸೀಲಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರಿಂದಾಗಿ ವಿಮಾನ ನಿಲ್ದಾಣದ ಕಟ್ಟಡದಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು’’ ಎಂದು ಹೇಳಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವಿಡಿಯೋಗಳು ಮೇ 2024 ರದ್ದಾಗಿವೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ