ಐಸ್‌ಕ್ರೀಮ್‌ ಬಾಕ್ಸ್‌ನಲ್ಲಿ ಶವ, ಸೋಂಕಿತ ಸತ್ತ 48 ಗಂಟೆ ನಂತರ ಅಂತ್ಯಕ್ರಿಯೆ

  • TV9 Web Team
  • Published On - 15:58 PM, 2 Jul 2020
ಐಸ್‌ಕ್ರೀಮ್‌ ಬಾಕ್ಸ್‌ನಲ್ಲಿ ಶವ, ಸೋಂಕಿತ ಸತ್ತ 48 ಗಂಟೆ ನಂತರ ಅಂತ್ಯಕ್ರಿಯೆ
ಸಾಂದರ್ಭಿಕ ಚಿತ್ರ

ಕೊಲ್ಕತಾ: ಕೊರೊನಾ ಸೋಂಕಿತರ ಮತ್ತು ಸಾವಿನ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚಾಗ್ತಾನೇ ಇದೆ. ಇದು ಅದ್ಯಾವ ಮಟ್ಟಿಗೆ ಅಂದ್ರೆ ಕೊರೊನಾದಿಂದ ಸಾವನ್ನಪ್ಪಿದವರನ್ನ ಅಂತ್ಯಕ್ರಿಯೆ ಮಾಡಲು ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಬಂದಿದೆ. ಇಂಥದ್ದೇ ಒಂದು ಮನಮಿಡಿಯುವ ಘಟನೆ ಕೊಲ್ಕತಾದಲ್ಲಿ ಬೆಳಕಿಗೆ ಬಂದಿದೆ.

ಹೌದು ಕೊಲ್ಕತಾದಲ್ಲಿ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ 71 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಸಾವನ್ನಪ್ಪಿದ್ದ. ಆದ್ರೆ ಆತನ ಕೋವಿಡ್‌ ಟೆಸ್ಟ್‌ ವರದಿ ಬರೋವರೆಗೂ ಮೃತನ ಡೆತ್‌ ಸರ್ಟಿಫಿಕೇಟ್‌ ಕೊಡಲು ಕೋಲ್ಕತಾ ನಗರ ಪಾಲಿಕೆ ನಿರಾಕರಿಸಿದೆ. ಹೀಗಾಗಿ ಅಂತ್ಯಕ್ರಿಯೆ ಕಾರ್ಯವೂ ವಿಳಂಬವಾಗಿದೆ.

ಶವಾಗಾರದಲ್ಲಿ ಜಾಗ ಇಲ್ಲದೇ ಐಸ್‌ಕ್ರೀಮ್‌ ಬಾಕ್ಸ್‌ನಲ್ಲಿ ಶವ
ಹೀಗಾಗಿ ಮನೆಯಲ್ಲಿಯೇ ಶವ ಕೊಳೆಯಲು ಶುರುವಾಗಿದೆ. ಆಗ ನಗರದಲ್ಲಿನ ಶವಾಗಾರದಲ್ಲಿ ಮೃತದೇಹವನ್ನಿಡಲು ಸಂಬಂಧಿಕರು ಪ್ರಯತ್ನಿಸಿದ್ದಾರೆ. ಅದ್ರೆ ಎಲ್ಲಿಯೂ ಅವರಿಗೆ ಸ್ಥಳಾವಕಾಶ ಸಿಕ್ಕಿಲ್ಲ. ಕೊನೆಗೆ ಅವರೇ ಒಂದು ಐಸ್‌ ಕ್ರೀಮ್‌ ಫ್ರೀಜರ್‌ ತಂದು ಅದರಲ್ಲಿ ಶವವನ್ನ ಇಟ್ಟಿದ್ದಾರೆ.

48 ಗಂಟೆ ಕಾಯಿಸಿದ ಅಧಿಕಾರಿಗಳು
ಇದಾದ ನಂತರ ವ್ಯಕ್ತಿಯ ಕೋವಿಡ್‌ ಟೆಸ್‌ ವರದಿ ಬಂದಿದ್ದು, ಕೊರೊನಾ ಸೋಂಕಿನಿಂದಲೇ ಸಾವನ್ನಪ್ಪಿರೋದು ಖಚಿತಪಟ್ಟಿದೆ. ಆಗ ಸ್ಥಳೀಯ ಪೊಲೀಸರಿಗೆ ಮತ್ತು ಆರೋಗ್ಯಾಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ಕುಟುಂಬಸ್ಥರು ತಿಳಿಸಿದ್ದಾರೆ. ಆದ್ರೆ ಯಾವುದೇ ಅಂಬ್ಯುಲೆನ್ಸ್‌ ಖಾಲಿ ಇಲ್ಲ, ಸ್ವಲ್ಪ ಕಾಯಿರಿ ಅಂತಾ ಕೈ ಎತ್ತಿದ್ದಾರೆ. ಆದ್ರೂ ಸಂಬಂಧಿಕರು ಕರೆ ಮೇಲೆ ಕರೆ ಮಾಡಿದಾಗ ಸುಮಾರು 48 ಗಂಟೆಗಳ ನಂತರ ಅಂದ್ರೆ ಬುಧವಾರ ಅಧಿಕಾರಿಗಳು ಬಂದು ಮೃತದೇಹವನ್ನ ಕೊಂಡೊಯ್ದಿದ್ದಾರೆ.

ಅಂದರೆ ಸೋಮವಾರ ಸತ್ತ ವ್ಯಕ್ತಿಯ ಮೃತ ದೇಹವನ್ನ ಬುಧವಾರ ಅಂತ್ಯಕ್ರಿಯೆ ನಡೆಸಿದ್ದಾರೆ. ಅಂತಿಮವಾಗಿ ಮೃತ ದೇಹವನ್ನ ತೆಗದುಕೊಂಡು ಹೋಗಿ ಅಪಾರ್ಟ್‌ಮೆಂಟ್‌ನ್ನು ಸ್ಯಾನಿಟೈಸ್‌ ಮಾಡಲು 50 ಗಂಟೆಗಳಾಗಿವೆ. ಅಲ್ಲಿಯವರೆಗೂ ಕುಟುಂಬ ಸದಸ್ಯರು ಪಟ್ಟ ಪಾಡು ಅಷ್ಟಿಷ್ಟಲ್ಲ.