198 ಕಿ.ಮೀ ಸ್ಪೀಡ್‌ನಲ್ಲಿ ಕಾರು ಓಡಿಸುತ್ತಾ ಫೇಸ್‌ಬುಕ್ ಲೈವ್ ಮಾಡುತ್ತಿದ್ದಾಗ ಡಂಪರ್‌ಗೆ ಡಿಕ್ಕಿ: ಕ್ಷಣಾರ್ಧದಲ್ಲಿ ಪ್ರಾಣಬಿಟ್ಟ ಚಾಲಕ

ರಾಜಸ್ಥಾನದಲ್ಲಿ ನಡೆದ ಭೀಕರ ಅಪಘಾತದಲ್ಲಿ, ಫೇಸ್‌ಬುಕ್ ಲೈವ್ ಮಾಡುತ್ತಾ 198 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಡಂಪರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಮತ್ತು ವೀಕ್ಷಣೆಗಳ ಗೀಳು ಜೀವಕ್ಕೆ ಮಾರಕವಾಗಬಲ್ಲದು ಎಂದು ಈ ಘಟನೆ ಎತ್ತಿ ತೋರಿಸುತ್ತದೆ. ಅತಿವೇಗದ ಚಾಲನೆ ಮತ್ತು ಮೊಬೈಲ್ ಬಳಕೆ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ. ರಸ್ತೆ ಸುರಕ್ಷತೆ ಅತ್ಯಗತ್ಯ.

198 ಕಿ.ಮೀ ಸ್ಪೀಡ್‌ನಲ್ಲಿ ಕಾರು ಓಡಿಸುತ್ತಾ ಫೇಸ್‌ಬುಕ್ ಲೈವ್ ಮಾಡುತ್ತಿದ್ದಾಗ ಡಂಪರ್‌ಗೆ ಡಿಕ್ಕಿ: ಕ್ಷಣಾರ್ಧದಲ್ಲಿ ಪ್ರಾಣಬಿಟ್ಟ ಚಾಲಕ
ಕಾರು ಅಪಘಾತ
Image Credit source: Tv9 Telugu

Updated on: Sep 16, 2026 | 11:55 AM

ಟೋಂಕ್, ಸೆಪ್ಟೆಂಬರ್ 16: ಸಾಮಾಜಿಕ ಜಾಲತಾಣಗಳಲ್ಲಿ  ಲೈಕ್ ಗಳಿಸುವ ಗೀಳು ಮತ್ತೊಂದು ಅಮಾಯಕ ಜೀವವನ್ನು ಬಲಿಪಡೆದಿದೆ. ರಾಜಸ್ಥಾನದ ಟೋಂಕ್ ಜಿಲ್ಲೆಯ ದಿಯೋಲಿ-ಟೋಂಕ್ ಹೆದ್ದಾರಿಯ ಪಾಲಿಯಾಡಾ ಬಳಿ ಗಂಟೆಗೆ ಬರೋಬ್ಬರಿ 198 ಕಿ.ಮೀ ಅತಿವೇಗದಲ್ಲಿ ಕಾರು ಚಲಾಯಿಸುತ್ತಾ ಫೇಸ್‌ಬುಕ್‌ನಲ್ಲಿ ಲೈವ್ ಮಾಡುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರು ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಪಘಾತದ ಕೊನೆಯ ಕ್ಷಣಗಳು ಫೇಸ್‌ಬುಕ್ ಲೈವ್‌ನಲ್ಲೇ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಘಾತ ಸೃಷ್ಟಿಸಿದೆ.

ಮೃತರನ್ನು ಮಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜನಕ್‌ಪುರ ತೋರ್ಡಿ ಗ್ರಾಮದ ನಿವಾಸಿ, ರೈತ ರಾಜಾರಾಮ್ ಜಾಟ್ (41) ಎಂದು ಗುರುತಿಸಲಾಗಿದೆ. ಇವರು ಇಬ್ಬರು ಮಕ್ಕಳ ತಂದೆಯಾಗಿದ್ದು, ಓರ್ವ ಪುತ್ರ ಪ್ರಸ್ತುತ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ. ರಾಜಾರಾಮ್ ಮಂಗಳವಾರ ಮುಂಜಾನೆ ದಿಯೋಲಿಯಿಂದ ಟೋಂಕ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಮೊಬೈಲ್‌ನಲ್ಲಿ ಫೇಸ್‌ಬುಕ್ ಲೈವ್ ಆನ್ ಮಾಡಿದ್ದರು. ಕಾರಿನ ಸ್ಪೀಡೋಮೀಟರ್‌ನಲ್ಲಿ ವೇಗವು ಗಂಟೆಗೆ 197 ರಿಂದ 198 ಕಿ.ಮೀ ತಲುಪುತ್ತಿರುವುದನ್ನು ಅವರು ಲೈವ್‌ನಲ್ಲಿ ತೋರಿಸುತ್ತಿದ್ದರು.

ಡಂಪರ್ ಟ್ರಕ್‌ಗೆ ಮುಖಾಮುಖಿ ಡಿಕ್ಕಿ: ದುನಿ ಪ್ರದೇಶದ ಪಾಲಿಯಾಡಾ ಸಮೀಪಿಸುತ್ತಿದ್ದಂತೆ ಅತಿಯಾದ ವೇಗದ ಕಾರಣ ವಾಹನದ ಮೇಲಿನ ನಿಯಂತ್ರಣ ತಪ್ಪಿ, ಮುಂಭಾಗದಲ್ಲಿದ್ದ ಡಂಪರ್ ಟ್ರಕ್‌ಗೆ ಕಾರು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ರಾಜಾರಾಮ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಮತ್ತಷ್ಟು ಓದಿ: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ: ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ಒಂದೇ ಊರಿನ ಮೂವರು ದಾರುಣ ಸಾವು

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ: ಈ ಲೈವ್ ವಿಡಿಯೋ ವೈರಲ್ ಆದ ನಂತರ, ಹೆದ್ದಾರಿಗಳಲ್ಲಿ ಇಂತಹ ಅಪಾಯಕಾರಿ ಹುಚ್ಚಾಟಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿದೆ.

ಪೊಲೀಸರ ಖಡಕ್ ಎಚ್ಚರಿಕೆ: ರೀಲ್ಸ್, ಲೈವ್ ವಿಡಿಯೋ ಅಥವಾ ವೇಗದ ಪ್ರದರ್ಶನಕ್ಕಾಗಿ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು ಕೇವಲ ನಿಯಮ ಉಲ್ಲಂಘನೆಯಷ್ಟೇ ಅಲ್ಲದೆ, ಪ್ರಾಣಕ್ಕೆ ತರುವ ನೇರ ಆಹ್ವಾನ ಎಂದು ಸಂಚಾರಿ ಪೊಲೀಸರು ಎಚ್ಚರಿಸಿದ್ದಾರೆ. ಹೆದ್ದಾರಿಗಳಲ್ಲಿ ಅತಿವೇಗ ನಿಯಂತ್ರಿಸಲು ಸ್ಪೀಡ್ ಗನ್ ಮತ್ತು ಸಿಗ್ನಲ್ ಕ್ಯಾಮೆರಾಗಳ ಕಣ್ಗಾವಲನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us