ಬಿಎಸ್ಪಿ ಅಭ್ಯರ್ಥಿಗೆ ಹಣದ ಆಮಿಷ ಒಡ್ಡಿದ ಆರೋಪ; ಕೇರಳ ಬಿಜೆಪಿ ಅಧ್ಯಕ್ಷನ ವಿರುದ್ಧ ಎಫ್ಐಆರ್
ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ. ನಾವು ನಾಮಪತ್ರ ಹಿಂಪಡೆಯುವಂತೆ ಯಾರಿಗೂ ಹೇಳಿಲ್ಲ. ಹಣ ಕೊಡುತ್ತೇವೆ ಎಂದೂ ಆಸೆ ತೋರಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ತಿರುವನಂತಪುರ: ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಬಿಎಸ್ಪಿ ಅಭ್ಯರ್ಥಿಗೆ ನಾಮಪತ್ರ ಹಿಂಪಡೆಯಲು ಹಣದ ಆಮಿಷ ಒಡ್ಡಿದ್ದಾರೆ ಎಂಬ ಆರೋಪದಡಿ ಈ ಪ್ರಕರಣ ದಾಖಲಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರ ಈ ಆರೋಪ ಮಾಡಿದ್ದಾರೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಕೆ.ಸುಂದರ ಸ್ಪರ್ಧಿಸಿದ್ದರು. ಹಾಗೇ ಬಿಜೆಪಿಯಿಂದ ಕೆ.ಸುರೇಂದ್ರನ್ ಕಣಕ್ಕೆ ಇಳಿದಿದ್ದರು. ತಾನೇ ಗೆಲ್ಲಬೇಕು ಎಂಬ ಕಾರಣಕ್ಕೆ ನನಗೆ ಹಣ, ಮನೆಯ ಆಮಿಷ ತೋರಿದ್ದಾರೆಂದು ಕೆ.ಸುಂದರ್ ಆರೋಪಿಸಿದ್ದಾರೆ. ನಾಮಪತ್ರ ಹಿಂಪಡೆದರೆ 2.5 ಲಕ್ಷ ರೂಪಾಯಿ ಮತ್ತು ಒಂದು ಸ್ಮಾರ್ಟ್ ಫೋನ್ ಕೊಡುತ್ತೇನೆ ಎಂದು ಹೇಳಿದ್ದರು. ಹಾಗೇ, ಈ ಕ್ಷೇತ್ರದಲ್ಲಿ ತಾನು ಗೆದ್ದರೆ, 15 ಲಕ್ಷ ರೂ. ಜತೆ ಕರ್ನಾಟಕದಲ್ಲಿ ಒಂದು ಮನೆ, ವೈನ್ ಶಾಪ್ ಕೊಡಿಸುತ್ತೇನೆ ಎಂದೂ ಭರವಸೆ ನೀಡಿದ್ದರು. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಯಾರೂ ನನಗೆ ಕರೆ ಮಾಡಲಿಲ್ಲ ಎಂದು ಸುಂದರ್ ತಿಳಿಸಿದ್ದಾರೆ.
ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ. ನಾವು ನಾಮಪತ್ರ ಹಿಂಪಡೆಯುವಂತೆ ಯಾರಿಗೂ ಹೇಳಿಲ್ಲ. ಹಣ ಕೊಡುತ್ತೇವೆ ಎಂದೂ ಆಸೆ ತೋರಿಸಿಲ್ಲ. ಕೆ.ಸುಂದರ್ ಅವರ್ಯಾಕೆ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂಬುದನ್ನೂ ಅವರೇ ಈ ಹಿಂದೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸಿಪಿಐ(ಎಂ) ಅಥವಾ ಐಯುಎಂಎಲ್ ಪಕ್ಷಗಳ ಒತ್ತಡದಿಂದಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂಬುದು ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಹೇಳಿದ್ದಾರೆ. ಕೇರಳದಲ್ಲಿ ಈ ಬಾರಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. 2016ರಲ್ಲಿ ಗೆದ್ದಿದ್ದ ನೆಮಾಮ್ ಕ್ಷೇತ್ರವೂ ಈ ಬಾರಿ ಕೈಜಾರಿದೆ. ಇನ್ನೂ ಈ ವಿಧಾನಸಭಾ ಚುನಾವಣೆಯಲ್ಲಿ ಕೇರಳ ಬಿಜೆಪಿ ಘಟಕ ಅಪಾರ ಪ್ರಮಾಣದಲ್ಲಿ ಕಪ್ಪುಹಣ ವಿನಿಯೋಗಿಸಿದೆ ಎಂಬ ಟೀಕೆಯೂ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಪ್ರತಿಷ್ಠಿತ ಕಾಲೇಜುಗಳಲ್ಲಿ ಹೆಚ್ಚಿದ ಸೀಟು ಬೇಡಿಕೆ
Published On - 1:40 pm, Mon, 7 June 21