ಗಢ್ಚಿರೌಲಿ ಸ್ಫೋಟ ಪ್ರಕರಣ: ಮಾವೋವಾದಿ ನಾಯಕನಿಗೆ ಬಾಂಬೆ ಹೈಕೋರ್ಟ್ ಜಾಮೀನು
Gadchiroli Blast Case ಸತ್ಯನಾರಾಯಣ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಅವರ ಪತ್ನಿ ದಿವಂಗತ ನಿರ್ಮಲಾ ಉಪ್ಪುಗಂಟಿ ಅವರೂ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಮುಂಬೈ: 2019ರ ಗಢ್ಚಿರೌಲಿ ಸ್ಫೋಟ (Gadchiroli Blast Case) ಪ್ರಕರಣದಲ್ಲಿ 72ರ ಹರೆಯದ ಆರೋಪಿ ಮಾವೋವಾದಿ ಸತ್ಯನಾರಾಯಣ ರಾಣಿಗೆ ಬಾಂಬೆ ಹೈಕೋರ್ಟ್ (Bombay High Court) ಶುಕ್ರವಾರ ಜಾಮೀನು ನೀಡಿದೆ. 2019 ಮೇ 1ರಂದು ಮಹಾರಾಷ್ಟ್ರದ ವಿದರ್ಭಾ ಪ್ರದೇಶದಲ್ಲಿರುವ ಗಢ್ಚಿರೌಲಿಯಲ್ಲಿ ನಡೆಸಿದ ಸ್ಫೋಟದಲ್ಲಿ ತ್ವರಿತ ಪ್ರತಿಕ್ರಿಯೆ ತಂಡ (QRT)ದ 15 ಸೆಕ್ಯುರಿಟಿ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಬಲಿಯಾಗಿದ್ದರು. ಈ ಪ್ರಕರಣ ಬಗ್ಗೆ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿ ರೇವತಿ ಮೊಹಿತೆ ದೇರೆ ಮತ್ತು ವಿಜಿ ಬಿಶ್ತ್, ಸತ್ಯನಾರಾಯಣ ಅವರಿಗೆ ಜಾಮೀನು ನೀಡಿದೆ. ಸತ್ಯನಾರಾಯಣ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಅವರ ಪತ್ನಿ ದಿವಂಗತ ನಿರ್ಮಲಾ ಉಪ್ಪುಗಂಟಿ ಅವರೂ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇವರಿಬ್ಬರನ್ನು 2019ರಲ್ಲಿ ಬಂಧಿಸಲಾಗಿತ್ತು. ಉಪ್ಪುಗಂಟಿ ಏಪ್ರಿಲ್ ತಿಂಗಳಲ್ಲಿ ಕ್ಯಾನ್ಸರ್ ನಿಂದ ಸಾವಿಗೀಡಾಗಿದ್ದರು. ವಕೀಲರಾದ ಯುಗ್ ಚೌಧರಿ ಮತ್ತು ಪಯೋಶಿ ರಾಯ್ ಮೂಲಕ ಸತ್ಯನಾರಾಯಣ ಅವರು ಜಾಮೀನು ಅರ್ಜಿ ಸಲ್ಲಿಸಿದ್ದು ತನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ, ಈಗಾಗಲೇ ಮೂರು ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರಿಂದ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಮೊದಲಿಗೆ ಈ ಪ್ರಕರಣವನ್ನು ಗಢ್ಚಿರೌಲಿ ಪೊಲೀಸರು ವಿಚಾರಣೆ ನಡೆಸಿದ್ದು ನಂತರ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು. ರಾಣಿ ಅವರು ಈ ಸ್ಫೋಟಕ್ಕೆ ಸಂಚುರೂಪಿಸಿದ ಸಭೆಯ ಭಾಗವಾಗಿದ್ದರು. ಸ್ಫೋಟ ನಡೆಸುವುದಕ್ಕಿಂತ ಒಂದು ವರ್ಷ ಮೊದಲು ಸಂಚು ರೂಪಿಸಿದ್ದು ಈ ಸಭೆಯಲ್ಲಿ ಸರಿಸುಮಾರು 300 ನಕ್ಸಲ್ ಸದಸ್ಯರು ಭಾಗಿಯಾಗಿದ್ದರು. 20189ರಲ್ಲಿ ರಕ್ಷಣಾ ಸಿಬ್ಬಂದಿ 40 ನಕ್ಸಲರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಈ ಸ್ಫೋಟ ನಡೆಸಲಾಗಿತ್ತು.
ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ಹತ್ಯೆ ಮತ್ತು ಅಪರಾಧ ಸಂಚು ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.