
ಲಕ್ನೋ, ಸೆಪ್ಟೆಂಬರ್ 27: ಉತ್ತರ ಪ್ರದೇಶದ ಝಾನ್ಸಿ ಮೂಲದ ವ್ಯಕ್ತಿಯೊಬ್ಬರು ಸುಮಾರು ಎರಡು ದಶಕಗಳ ಹಿಂದೆ ಪಶ್ಚಿಮ ಬಂಗಾಳಕ್ಕೆ ತೆರಳಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ 20 ವರ್ಷಗಳ ನಂತರ ತಮ್ಮ ಮುಸ್ಲಿಂ ಪತ್ನಿಯೊಂದಿಗೆ ಹುಟ್ಟೂರಿಗೆ ಮರಳಿ, ಕಾನೂನುಬದ್ಧ ಪ್ರಕ್ರಿಯೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಝಾನ್ಸಿಯ ರಕ್ಸಾ ಠಾಣಾ ವ್ಯಾಪ್ತಿಯ ರಾಜಪುರ ಗ್ರಾಮದ ನಿವಾಸಿ ರಾಜ್‌ಕುಮಾರ್, 20 ವರ್ಷಗಳ ಹಿಂದೆ ಉದ್ಯೋಗ ಹುಡುಕಿಕೊಂಡು ಪಶ್ಚಿಮ ಬಂಗಾಳದ ಮಾಲ್ಡಾಗೆ ತೆರಳಿದ್ದರು. ಅಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೇಳೆ, ಒತ್ತಡಕ್ಕೆ ಮಣಿದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ‘ರಫೀಕ್’ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ನಂತರ ಅಲ್ಲಿಯ ಮಹಿಳೆ ಅಫ್ಸಾರಿ ಖಾತುನ್ ಅವರನ್ನು ವಿವಾಹವಾಗಿ, ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ಸರ್ಕಾರಿ ದಾಖಲೆಗಳನ್ನೂ ರಫೀಕ್ ಹೆಸರಿನಲ್ಲೇ ಪಡೆದುಕೊಂಡಿದ್ದರು. ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.
ಇತ್ತೀಚೆಗೆ ರಾಜ್‌ಕುಮಾರ್ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸ್ವಗ್ರಾಮವಾದ ರಾಜಪುರಕ್ಕೆ ಮರಳಿದ್ದರು. ಆದರೆ, ಮುಸ್ಲಿಂ ಸಂಪ್ರದಾಯದೊಂದಿಗೆ ಬಂದಿದ್ದರಿಂದ ಆರಂಭದಲ್ಲಿ ಗ್ರಾಮಸ್ಥರು ಹಾಗೂ ಸ್ವಂತ ಸಂಬಂಧಿಕರು ಅವರನ್ನು ಕುಟುಂಬಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಇದರಿಂದ ಮನನೊಂದ ದಂಪತಿ, ಮರಳಿ ಹಿಂದೂ ಧರ್ಮ ಸ್ವೀಕರಿಸಲು ಅನುಮತಿ ಕೋರಿ ಝಾನ್ಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ (DM) ಔಪಚಾರಿಕ ಅರ್ಜಿ ಸಲ್ಲಿಸಿದ್ದರು.
ಮತ್ತಷ್ಟು ಓದಿ: ಪ್ರೇಮ ಸಂಬಂಧವೋ? ಲವ್ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?
ಜಿಲ್ಲಾಡಳಿತ ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಝಾನ್ಸಿಯ ಐತಿಹಾಸಿಕ ಸಿದ್ಧೇಶ್ವರ ದೇವಸ್ಥಾನದಲ್ಲಿ ‘ಘರ್ ವಾಪ್ಸಿ’ ಸಮಾರಂಭವನ್ನು ಆಯೋಜಿಸಲಾಯಿತು. ಪ್ರಧಾನ ಅರ್ಚಕ ಪಂಡಿತ್ ರಾಜೀವ್ ಪಾಠಕ್ ನೇತೃತ್ವದಲ್ಲಿ ಶುದ್ಧೀಕರಣ ಪೂಜೆ ಮತ್ತು ಹವನ ನಡೆಸಲಾಯಿತು. ದಂಪತಿಗೆ ಗಂಗಾಜಲ ಹಾಗೂ ಪಂಚಗವ್ಯದ ಮೂಲಕ ಶುದ್ಧೀಕರಣ ವಿಧಿಗಳನ್ನು ಪೂರೈಸಿ, ರಾಜ್‌ಕುಮಾರ್‌ಗೆ ಯಜ್ಞೋಪವೀತ (ಜನಿವಾರ) ಧಾರಣೆ ಮಾಡಲಾಯಿತು.
ಪೂಜೆಯ ನಂತರ ರಾಜ್‌ಕುಮಾರ್ ತಮ್ಮ ಮೂಲ ಹೆಸರನ್ನು ಮರಳಿ ಪಡೆದರೆ, ಪತ್ನಿ ಅಫ್ಸಾರಿ ಖಾತುನ್ ಅವರು ‘ಅನಿತಾ’ ಎಂದು ಹೊಸ ಹಿಂದೂ ಹೆಸರನ್ನು ಸ್ವೀಕರಿಸಿದರು. ನನ್ನ ಪತಿಯ ಸಂತೋಷವೇ ನನ್ನ ಸಂತೋಷ, ಅವರೊಂದಿಗೆ ನೆಮ್ಮದಿಯಿಂದ ಬದುಕಲು ನಾನೇ ಸ್ವಯಂಪ್ರೇರಿತವಾಗಿ ಈ ನಿರ್ಧಾರ ತೆಗೆದುಕೊಂಡೆ ಎಂದು ಅನಿತಾ ತಿಳಿಸಿದ್ದಾರೆ.
झाँसी से आस्था, परंपरा और सांस्कृतिक जड़ों से दोबारा जुड़ने की एक बेहद भावुक और चर्चा में रहने वाली खबर सामने आई है। लगभग 18 वर्ष पूर्व रोज़गार और काम की तलाश में बंगाल गए युवक ने अब सपरिवार अपने मूल धर्म में लौटने का निर्णय लिया है। विधि-विधान से पूजन-अर्चन और धार्मिक अनुष्ठान… pic.twitter.com/B5bDAw9qVd
— Arun (आज़ाद) Chahal 🇮🇳 (@ArunAzadchahal) September 26, 2026
ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ: ಉತ್ತರ ಪ್ರದೇಶದಲ್ಲಿ ಕಟ್ಟುನಿಟ್ಟಾದ ಮತಾಂತರ ವಿರೋಧಿ ಕಾಯ್ದೆ ಜಾರಿಯಲ್ಲಿದೆ. ಯಾವುದೇ ವ್ಯಕ್ತಿ ಧರ್ಮ ಬದಲಾಯಿಸಲು ಅಥವಾ ಮರಳಿ ಸ್ವಧರ್ಮಕ್ಕೆ ಮರಳಲು ಕನಿಷ್ಠ 60 ದಿನಗಳ ಮುನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಅವರಿಗೆ ಅಧಿಕೃತ ಘೋಷಣಾಪತ್ರ ಸಲ್ಲಿಸಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಸಾಮಾಜಿಕ ಒಪ್ಪಿಗೆ: ವಿಶ್ವ ಹಿಂದೂ ಪರಿಷತ್ (VHP) ಮತ್ತು ಸನಾತನ ಏಕತಾ ಸಂಘಟನೆಯ ಮುಖಂಡರು ಮಧ್ಯಪ್ರವೇಶಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ನಂತರ, ಗ್ರಾಮಸ್ಥರು ಕುಟುಂಬವನ್ನು ಯಾವುದೇ ಭೇದಭಾವವಿಲ್ಲದೆ ಗ್ರಾಮದ ಮುಖ್ಯವಾಹಿನಿಗೆ ಸೇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.
ದಾಖಲೆಗಳ ತಿದ್ದುಪಡಿ ಪ್ರಕ್ರಿಯೆ: ಧಾರ್ಮಿಕ ವಿಧಿವಿಧಾನಗಳ ಜತೆಗೆ, ದಂಪತಿ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಮಕ್ಕಳ ಶಾಲಾ ದಾಖಲೆಗಳಲ್ಲಿ ಹೆಸರು ಮತ್ತು ಧರ್ಮವನ್ನು ಬದಲಾಯಿಸಲು ಗೆಜೆಟ್ ಅಧಿಸೂಚನೆಗೆ ಅರ್ಜಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ