RIP Puneeth Rajkumar: ನಟ ಪುನೀತ್ ರಾಜ್​ಕುಮಾರ್ ನಿಧನಕ್ಕೆ ರಾಹುಲ್ ಗಾಂಧಿ ಸೇರಿ ಹಲವು ಗಣ್ಯರ ಸಂತಾಪ

Puneeth Rajkumar: ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಪ್ರಭಾವಿ ನಾಯಕರು ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ. ಬೇಗ ಹೋಗಿಬಿಟ್ಟರು ಎಂದು ಹಲವರು ದುಃಖ ತೋಡಿಕೊಂಡಿದ್ದಾರೆ.

RIP Puneeth Rajkumar: ನಟ ಪುನೀತ್ ರಾಜ್​ಕುಮಾರ್ ನಿಧನಕ್ಕೆ ರಾಹುಲ್ ಗಾಂಧಿ ಸೇರಿ ಹಲವು ಗಣ್ಯರ ಸಂತಾಪ
ಭಾರತದ ಹಲವು ಪ್ರಮುಖ ನಾಯಕರು ಪುನೀತ್
Edited By:

Updated on: Oct 29, 2021 | 5:41 PM

ಬೆಂಗಳೂರು: ಖ್ಯಾತ ನಟ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಪ್ರಭಾವಿ ನಾಯಕರು ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ. ‘ಬಹಳ ಬೇಗ ಹೊರಟುಹೋದರು’ ಎಂದು ರಾಹುಲ್ ಗಾಂಧಿ ಭಾವುಕ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ‘ಕನ್ನಡ ನಟ ಪುನೀತ್ ರಾಜ್​ಕುಮಾರ್ ಅವರ ಕುಟುಂಬ, ಗೆಳೆಯರು ಮತ್ತು ಅಭಿಮಾನಿಗಳಿಗೆ ನನ್ನ ಹೃದಯತುಂಬಿದ ಸಾಂತ್ವನಗಳು, ಅವರು ಬೇಗ ಹೊರಟುಹೋದರು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿಧನ; ಕ್ಷಣಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ

ಪುನೀತ್ ಅಭಿನಯದ ಹಲವು ಚಿತ್ರಗಳು ಇತರ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿತ್ತು. ಹೀಗಾಗಿ ಹಲವು ರಾಜ್ಯಗಳಲ್ಲಿಯೂ ಪುನೀತ್​ಗೆ ಅಭಿಮಾನಿಗಳಿದ್ದಾರೆ.

‘ಪುನೀತ್ ರಾಜ್​ಕುಮಾರ್​ ನಿಧನದಿಂದ ನನಗೆ ತುಂಬಾ ದುಃಖವಾಗಿದೆ. ಕನ್ನಡ ಸಿನಿಮಾದ ಪ್ರಮುಖ ನಟ ಅವರು. ಅವರ ಕುಟುಂಬಕ್ಕೆ ನನ್ನ ಹೃದಯತುಂಬಿದ ಸಾಂತ್ವನಗಳು’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪುನಿತ್ ನಿಧನದ ನಂತರ ಟ್ವೀಟ್ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನದ ಸುದ್ದಿ ತಿಳಿದು ಬೇಸರವಾಯಿತು. ನಮ್ಮ ಮತ್ತು ರಾಜ್​ಕುಮಾರ್ ಕುಟುಂಬದ ನಡುವೆ ಹಲವು ದಶಕಗಳ ಒಡನಾಟವಿದೆ. ವೈಯಕ್ತಿಕವಾಗಿಯೂ ಇದು ನನಗೆ ದೊಡ್ಡ ನಷ್ಟ. ತಾರಾ ನಟನಾಗಿದ್ದರೂ ವಿನಯವನ್ನು ಎಂದಿಗೂ ಕಳೆದುಕೊಂಡಿರಲಿಲ್ಲ. ನನ್ನ ತಂದೆ ನಿಧನರಾದಾಗ ಪುನೀತ್ ಮನೆಗೆ ಭೇಟಿ ನೀಡಿ ಗೌರವಿಸಿದ್ದು ಇಂದಿಗೂ ನನಗೆ ನೆನಪಿದೆ. ಕನ್ನಡ ಸಿನಿಮಾರಂಗ ದೊಡ್ಡ ಪ್ರತಿಭಾವಂತ ನಟನನ್ನು ಕಳೆದುಕೊಂಡಿದೆ. ಪುನೀತ್ ಅವರ ಕುಟುಂಬ ಹಾಗೂ ಕರ್ನಾಟಕದ ಜನರಿಗೆ ನನ್ನ ಸಂತಾಪಗಳು’ ಎಂದು ಟ್ವೀಟ್ ಮಾಡಿದ್ದಾರೆ.

‘ಪುನೀತ್ ರಾಜ್​ಕುಮಾರ್ ಅವರ ಅಕಾಲಿಕ ಮರಣದಿಂದ ಆಘಾತವಾಯಿತು. ಇದು ಕನ್ನಡ ಸಿನಿಮಾರಂಗಕ್ಕೆ ದೊಡ್ಡ ನಷ್ಟ. ಪುನೀತ್ ರಾಜ್​ಕುಮಾರ್ ಅವರ ಕುಟುಂಬ, ಗೆಳೆಯರು ಮತ್ತು ಅಭಿಮಾನಿಗಳಿಗೆ ಸಾಂತ್ವನ ಹೇಳುತ್ತೇ’ ಎಂದು ಆಂಧ್ರ ಪ್ರದೇಶದ ವಿರೋಧ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಭಾರತ ಸರ್ಕಾರದ ಅಧೀನದಲ್ಲಿರುವ ನ್ಯಾಷನಲ್ ಫಿಲಂ ಆಕ್ರೈವ್ ಆಫ್ ಇಂಡಿಯಾ (ಎನ್​ಎಫ್​ಎಐ) ಪುನೀತ್ ರಾಜ್​ಕುಮಾರ್ ಚಿಕ್ಕ ಹುಡುಗನಿದ್ದಾಗಿನ ಚಿತ್ರ ಟ್ವೀಟ್ ಮಾಡಿದೆ. ‘ಕನ್ನಡ ಚಿತ್ರರಂಗದ ಜನಪ್ರಿಯ ನಟ ಪುನೀತ್ ರಾಜ್​ಕುಮಾರ್, ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದರು’ ಎಂದು ಹೇಳಿದೆ.

ಇದನ್ನೂ ಓದಿ: ದೊಡ್ಡವರಿಗಷ್ಟೇ ಅಲ್ಲ ಮಕ್ಕಳಿಗೂ ಅಪ್ಪು ಅಚ್ಚುಮೆಚ್ಚು: ಪುನೀತ್ ರಾಜ್​ಕುಮಾರ್ ಬಾಲ ನಟನಾಗಿ ಅಭಿನಯಿಸಿದ್ದ 10 ಚಿತ್ರಗಳಿವು
ಇದನ್ನೂ ಓದಿ: Puneeth Rajkumar: ‘ದೇವರು ಇವರೆಲ್ಲರಿಗೂ ಒಳ್ಳೆಯದು ಮಾಡಲಿ’; ಇದು ವೇದಿಕೆ ಮೇಲೆ ಪುನೀತ್​ ಕೊನೆಯ ಮಾತು

Published On - 5:33 pm, Fri, 29 October 21