ಅಂತ್ಯೋದಯ ರೇಷನ್ ಕಾರ್ಡುದಾರರಿಗೆ ಆಯುಷ್ಮಾನ್ ಕಾರ್ಡ್ ನೀಡಲು ಸರ್ಕಾರ ನಿರ್ಧಾರ
ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದ್ದು ಇಲ್ಲಿಯವರೆಗೆ ಆಯುಷ್ಮಾನ್ ಕಾರ್ಡ್ ಇಲ್ಲದೇ ಇದ್ದರೆ ಅಂಥವರು ಜುಲೈ 20ರವರೆಗೆ ಅರ್ಜಿ ಸಲ್ಲಿಸಬಹುದು.
ದೆಹಲಿ: ಅಂತ್ಯೋದಯ ರೇಷನ್ ಕಾರ್ಡ್ (Antyodaya ration card) ಹೊಂದಿರುವವರಿಗೆ ಶುಭ ಸುದ್ದಿ. ಅದೇನೆಂದರೆ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸಹಾಯ ಮಾಡುವ ಆಯುಷ್ಮಾನ್ ಕಾರ್ಡ್ (Ayushman card) ನೀಡಲು ಸರ್ಕಾರ ನಿರ್ಧರಿಸಿದೆ. ಆಯುಷ್ಮಾನ್ ಕಾರ್ಡ್ ಮಾಡಿಸುವುದಕ್ಕಾಗಿ ಸರ್ಕಾರವು ಜಿಲ್ಲೆ ಮತ್ತು ತಹಶಿಲ್ಗಳಲ್ಲಿರುವ ಕಮ್ಯುನಿಟಿ ಹೆಲ್ತ್ ಸೆಂಟರ್ಗಳಲ್ಲಿ ಅಭಿಯಾನ ನಡೆಸಲಿದೆ. ಈ ಅಭಿಯಾನ ಮೂಲಕ ಎಲ್ಲ ಅಂತ್ಯೋದಯ ಕಾರ್ಡುದಾರರಿಗೆ ಆಯುಷ್ಮಾನ್ ಕಾರ್ಡ್ ಸಿಗುವಂತೆ ಮಾಡಲಾಗುತ್ತದೆ. ಜುಲೈ 20ರವರೆಗೆ ಈ ಅಭಿಯಾನ ನಡೆಯಲಿದೆ. ಇದರೊಂದಿಗೆ ಈ ಸೌಲಭ್ಯಗಳನ್ನು ಜನ್ ಸುವಿಧಾ ಕೇಂದ್ರಗಳಲ್ಲೂ ಆರಂಭಿಸಲು ಸರ್ಕಾರ ಆದೇಶಿಸಿದೆ. ಅಂತ್ಯೋದಯ ರೇಷನ್ ಕಾರ್ಡ್ ತೋರಿಸುವ ಮೂಲಕ ಜನ್ ಸುವಿಧಾ ಕೇಂದ್ರಗಳಲ್ಲಿಯೂ ಆಯುಷ್ಮಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಎಲ್ಲ ಅಂತ್ಯೋದಯ ಕಾರ್ಡುದಾರರಿಗೆ ಆಯುಷ್ಮಾನ್ ಕಾರ್ಡ್ ನೀಡುವಂತೆ ಆದೇಶಿಸಿದೆ. ಈ ಅಭಿಯಾನವು ಜುಲೈ 20ರ ವರೆಗೆ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ.
ಆಯುಷ್ಮಾನ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಹೇಗೆ?
ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದ್ದು ಇಲ್ಲಿಯವರೆಗೆ ಆಯುಷ್ಮಾನ್ ಕಾರ್ಡ್ ಇಲ್ಲದೇ ಇದ್ದರೆ ಅಂಥವರು ಜುಲೈ 20ರವರೆಗೆ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕ ಸೇವಾ ಕೇಂದ್ರ, ಆಯುಷ್ಮಾನ್ ಪ್ಯಾನೆಲ್ ಅಥವಾ ಜಿಲ್ಲಾಸ್ಪತ್ರೆಯೊಂದಿಗೆ ಇರುವ ಖಾಸಗಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹೋಗಿ ಅಲ್ಲಿ ಅಂತ್ಯೋದಯ ರೇಷನ್ ಕಾರ್ಡ್ ತೋರಿಸುವ ಮೂಲಕ ಆಯುಷ್ಮಾನ್ ಕಾರ್ಡ್ ಪಡೆಯಬಹುದು. ಪ್ರಸ್ತುತ ಹೊಸ ಆಯುಷ್ಮಾನ್ ಕಾರ್ಡ್ ಗಳನ್ನು ಸರ್ಕಾರ ಮಾಡುತ್ತಿಲ್ಲ. ಈಗಾಗಲೇ ಈ ಯೋಜನೆಯಲ್ಲಿರುವವರ ಹೆಸರಲ್ಲಿ ಮಾತ್ರ ಈಗ ಕಾರ್ಡ್ ಗಳನ್ನು ನೀಡಲಾಗುತ್ತದೆ. ಆರೋಗ್ಯ ಸಮಸ್ಯೆ ಬಂದಾದ ಅಂತ್ಯೋದಯ ಕಾರ್ಡುದಾರರು ಆಸ್ಪತ್ರೆ ಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಜಿಲ್ಲಾ ವಿತರಣಾ ಅಧಿಕಾರಿಗೆ ಸರ್ಕಾರ ನಿರ್ದೇಶನ ನೀಡಿದೆ.
ಅಂತ್ಯೋದಯ ಕಾರ್ಡ್ ಯಾರಿಗೆ ಲಭಿಸುತ್ತದೆ?
ಬಿಪಿಎಲ್ ಅಥವಾ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಂತ್ಯೋದಯ ರೇಷನ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಈ ಕಾರ್ಡುದಾರರಿಗೆ 35 ಕೆಜಿ ಗೋಧಿ ಮತ್ತು ಅಕ್ಕಿ ನೀಡಲಾಗುತ್ತದೆ. ಗೋಧಿ ಕೆಜಿಗೆ 2 ರೂ ಮತ್ತು ಅಕ್ಕಿ ಕೆಜಿಗೆ 3ರೂನಂತೆ ನೀಡಲಾಗುತ್ತದೆ.