Central Cabinet Decision: ಇಂಧನ ಕ್ಷೇತ್ರದಲ್ಲಿ 3.3 ಲಕ್ಷ ಕೋಟಿ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಮುಂದಿನ ದಿನಗಳಲ್ಲಿ ವಿದ್ಯುತ್ ವಿತರಣಾ ಕಂಪನಿಗಳು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಿವೆ ಎಂದು ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದರು.
ದೆಹಲಿ: ಇಂಧನ ಕ್ಷೇತ್ರದ ಸುಧಾರಣೆಗೆ ರೂಪಿಸಿರುವ ₹ 3.3 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಂಧನ ಸಚಿವ ಆರ್.ಕೆ.ಸಿಂಗ್ ಸಂಪುಟ ತೀರ್ಮಾನದ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ವಿದ್ಯುತ್ ವಿತರಣಾ ಕಂಪನಿಗಳು ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಿವೆ ಎಂದು ಹೇಳಿದರು.
ಕುಸುಮ್ ಯೋಜನೆಯಡಿ ರೈತರಿಗೆ ಉಚಿತ ವಿದ್ಯುತ್ ವಿತರಿಸಲಾಗುವುದು. ಎಲ್ಲಾ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವ್ಯವಸ್ಥೆ ಅಳವಡಿಕೆ ಮತ್ತು ದಿನದ 24 ಗಂಟೆ ವಿದ್ಯುತ್ ಪೂರೈಕೆಯ ಗುರಿ ಹೊಂದಲಾಗಿದೆ. ಸ್ಮಾರ್ಟ್ ಮೀಟರ್ ಮೂಲಕ ಪಾರದರ್ಶಕವಾಗಿ ಸ್ಮಾರ್ಟ್ ವ್ಯವಸ್ಥೆ ಜಾರಿ ಮಾಡುತ್ತೇವೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಮೂಲಕ ಮೀಟರ್ ವ್ಯಾಪ್ತಿಗೆ ಸಿಗದೆ ಸೋರಿಕೆಯಾಗುತ್ತಿರುವ ವಿದ್ಯುತ್ ಪತ್ತೆ ಮಾಡಿ, ಸೋರಿಕೆ ತಡೆಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಣ ಮಾಡುತ್ತೇವೆ. ವಿದ್ಯುತ್ ವಿತರಣಾ ಕಂಪನಿಗಳ ನಷ್ಟ ಕಡಿಮೆ ಮಾಡುವುದು ನಮ್ಮ ಉದ್ದೇಶ. ವಿದ್ಯುತ್ ವಿತರಣಾ ಕಂಪನಿಗಳಿಗೆ ಕೇಂದ್ರದಿಂದಲೇ ಹಣ ನೀಡುತ್ತೇವೆ. ತಮ್ಮ ಬಳಿ ಇದ್ದಷ್ಟು ಹಣದಿಂದ ವಿದ್ಯುತ್ ಪೂರೈಕೆಗೆ ರಿಚಾರ್ಜ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ರಿಚಾರ್ಜ್ ಮಾಡದಿದ್ದರೂ ವಿದ್ಯುತ್ ಪೂರೈಕೆ ಸ್ಥಗಿತವಾಗುವುದಿಲ್ಲ ಎಂದು ವಿವರಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಚೆಗಷ್ಟೇ ಘೋಷಿಸಿದ್ದ ಆರ್ಥಿಕ ಸುಧಾರಣಾ ಪ್ಯಾಕೇಜ್ಗೂ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೊರೊನಾ ಬಾಧಿತ ವಲಯಗಳಿಗೆ ಗಮನಾರ್ಹ ಪ್ರಮಾಣದಲ್ಲಿ ಸಾಲ ನೀಡುವ ಹಲವು ಯೋಜನೆಗಳನ್ನು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಬ್ಯಾಂಕ್‌ಗಳು ನೀಡುವ ಸಾಲಕ್ಕೆ ಸರ್ಕಾರವೇ ಖಾತ್ರಿ ನೀಡಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡುವ ಮಹತ್ವಾಕಾಂಕ್ಷಿ ಯೋಜನೆಗೂ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಯೋಜನೆಗೆ ₹ 19 ಸಾವಿರ ಕೋಟಿ ಮಂಜೂರು ಮಾಡಲಾಗುವುದು ಎಂದು ಜಾವಡೇಕರ್ ಹೇಳಿದರು.
(Govt of India Decides to Massive Investment in Electricity Sector)
ಇದನ್ನೂ ಓದಿ: ರಾಘವೇಂದ್ರ ಕೇಂದ್ರ ಸಚಿವ, ವಿಜಯೇಂದ್ರ ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ? ಯಡಿಯೂರಪ್ಪ ಕುಟುಂಬದಲ್ಲಿ ಹೀಗೊಂದು ಲೆಕ್ಕಾಚಾರ…