
ಸೂರತ್, ನವೆಂಬರ್ 2: ಮನೆಯೊಳಗಿನ ಜಗಳ ಹಾಗೂ ಮೊಬೈಲ್ ಅನ್ನು ನೆಲಕ್ಕೆ ಎಸೆದು ಒಡೆದ ಕೋಪಕ್ಕೆ 22 ವರ್ಷದ ಮಗಳೊಬ್ಬಳು ತನ್ನ ತಂದೆಯ ತಲೆಗೆ ಕುಕ್ಕರ್ ಮುಚ್ಚಳದಿಂದ ಹೊಡೆದು, ಕತ್ತಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್ ನಗರದಲ್ಲಿ ನಡೆದಿದೆ. ಅಮ್ರೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಸಾದ್ ಆವಾಸ್ ಎಚ್-5 ಭಾಗದಲ್ಲಿ ಶನಿವಾರ ರಾತ್ರಿ ಈ ಭೀಕರ ಕೃತ್ಯ ನಡೆದಿದೆ. ಮೃತರನ್ನು ರಮೇಶ್ ಸಿಂಗ್ ಕೈಲಾಶ್ ಸಿಂಗ್ ರಜಪೂತ್ ಎಂದು ಗುರುತಿಸಲಾಗಿದ್ದು, ಆರೋಪಿ ಮಗಳನ್ನು 22 ವರ್ಷದ ಕಾಜಲ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯ ಜವಾಬ್ದಾರಿಗಳ ವಿಚಾರವಾಗಿ ತಂದೆ ರಮೇಶ್ ಸಿಂಗ್ ಮಗಳು ಕಾಜಲ್ಗೆ ಬುದ್ಧಿ ಹೇಳಿ ಬೈದಿದ್ದಾರೆ. ಅಲ್ಲದೆ ಆಕೆಯ ಕೈಯಲ್ಲಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ನೆಲಕ್ಕೆ ಎಸೆದು ಒಡೆದು ಹಾಕಿದ್ದಾರೆ. ಮೊಬೈಲ್ ಒಡೆದು ಹೋಗಿದ್ದರಿಂದ ಕೆರಳಿದ ಕಾಜಲ್, ಮನೆಯಲ್ಲಿದ್ದ ನಾನ್‌ಸ್ಟಿಕ್ ಪ್ಯಾನ್ ಮತ್ತು ಪ್ರೆಷರ್ ಕುಕ್ಕರ್ ಮುಚ್ಚಳದಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ನಂತರ ಅಡುಗೆ ಮನೆಯಲ್ಲಿದ್ದ ಕತ್ತಿಯಿಂದ ತಂದೆಯ ಹೊಟ್ಟೆಯ ಭಾಗಕ್ಕೆ ಇರಿದಿದ್ದಾಳೆ.
ಇದನ್ನೂ ಓದಿ: ಜಿಮ್ ಟ್ರೈನರ್ ಜೊತೆ ಸೇರಿ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋದಲ್ಲಿ ಸಂಚು ಬಯಲು
ಈ ಘಟನೆ ನಡೆದಾಗ ರಮೇಶ್ ಸಿಂಗ್ ಅವರ ಪತ್ನಿ ಮಂಜುಬೆನ್ ಹಾಗೂ ಕಿರಿಯ ಮಗಳು ಮನೆಯಲ್ಲಿದ್ದರು. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ತಂದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ರಮೇಶ್ ಸಿಂಗ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಅವರೀಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ಆಂಧ್ರದ ಶಾಲೆಯೊಳಗೇ ಕೊಲೆ ಯತ್ನ; ಪ್ರೀತಿ ನಿರಾಕರಿಸಿದ್ದಕ್ಕೆ ಗರಗಸದಿಂದ 10ನೇ ತರಗತಿ ವಿದ್ಯಾರ್ಥಿನಿಯ ಕುತ್ತಿಗೆ ಸೀಳಿದ ಯುವಕ!
ಈ ಕೃತ್ಯ ಎಸಗಿದ ಆರೋಪಿ ಕಾಜಲ್ ಅನ್ನು ಅಮ್ರೋಲಿ ಪೊಲೀಸರು ಬಂಧಿಸಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಮಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ದಿನನಿತ್ಯದ ಸಣ್ಣಪುಟ್ಟ ವಿಚಾರಕ್ಕೆ ನಡೆದ ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ