AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದ ಶಾಲೆಯೊಳಗೇ ಕೊಲೆ ಯತ್ನ; ಪ್ರೀತಿ ನಿರಾಕರಿಸಿದ್ದಕ್ಕೆ ಗರಗಸದಿಂದ 10ನೇ ತರಗತಿ ವಿದ್ಯಾರ್ಥಿನಿಯ ಕುತ್ತಿಗೆ ಸೀಳಿದ ಯುವಕ!

ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ತರಗತಿಯ ಒಳಗಡೆಯೇ ಮರ ಕತ್ತರಿಸುವ ಯಂತ್ರದಿಂದ ಭೀಕರವಾಗಿ ದಾಳಿ ನಡೆಸಲಾದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಹೇಮಂತ್ ಎಂಬಾತ ಮರ ಕತ್ತರಿಸುವ ಯಂತ್ರದೊಂದಿಗೆ ಶಾಲೆಯ ತರಗತಿ ಕೊಠಡಿಗೆ ಏಕಾಏಕಿ ನುಗ್ಗಿದ್ದಾನೆ. ಮಕ್ಕಳು ಮತ್ತು ಶಿಕ್ಷಕರ ಕಣ್ಣೆದುರಲ್ಲೇ ವಿದ್ಯಾರ್ಥಿನಿಯ ಮುಖ, ತಲೆ ಹಾಗೂ ಬೆನ್ನಿನ ಭಾಗಕ್ಕೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.

ಆಂಧ್ರದ ಶಾಲೆಯೊಳಗೇ ಕೊಲೆ ಯತ್ನ; ಪ್ರೀತಿ ನಿರಾಕರಿಸಿದ್ದಕ್ಕೆ ಗರಗಸದಿಂದ 10ನೇ ತರಗತಿ ವಿದ್ಯಾರ್ಥಿನಿಯ ಕುತ್ತಿಗೆ ಸೀಳಿದ ಯುವಕ!
Andhra Pradesh Murder
ಸುಷ್ಮಾ ಚಕ್ರೆ
|

Updated on: Oct 31, 2026 | 4:38 PM

Share

ಅನಂತಪುರ, ಅಕ್ಟೋಬರ್ 31: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಅತ್ಯಂತ ಆಘಾತಕಾರಿ ಕೃತ್ಯವೊಂದು ನಡೆದಿದೆ. ತರಗತಿ ಕೊಠಡಿಯೊಳಗೇ ನುಗ್ಗಿದ ಯುವಕನೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಮರ ಕತ್ತರಿಸುವ ಗರಗಸದ ಮಷಿನ್​ನಿಂದ ಭೀಕರವಾಗಿ ದಾಳಿ ನಡೆಸಿ, ಆಕೆಯ ಕುತ್ತಿಗೆ ಸೀಳಲು ಯತ್ನಿಸಿರುವ ಘಟನೆ ನಡೆದಿದೆ. ದಾಳಿಗೊಳಗಾದ ವಿದ್ಯಾರ್ಥಿನಿಯು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದು, ಆಕೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಲೆಗೆ ನುಗ್ಗಿ ಕೃತ್ಯ ಎಸಗಿದ ಯುವಕ:

ಶಾಲೆಯಲ್ಲಿ ಕ್ಲಾಸ್ ನಡೆಯುವಾಗಲೇ ಕೊಠಡಿಯೊಳಗೆ ನುಗ್ಗಿದ ಆರೋಪಿ, ನೇರವಾಗಿ ಬಾಲಕಿಯ ಬಳಿ ಹೋಗಿ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೋಡನೋಡುತ್ತಿದ್ದಂತೆಯೇ ಮರ ಕತ್ತರಿಸುವ ಯಂತ್ರದಿಂದ ಆಕೆಯ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯ ಭೀಕರತೆಗೆ ಬಾಲಕಿಯ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಆಳವಾದ ಗಾಯಗಳಾಗಿದ್ದು, ಆಕೆ ರಕ್ತದ ಮಡುವಿನಲ್ಲಿ ಕುಸಿದುಬಿದ್ದಿದ್ದಾಳೆ.

ಇದನ್ನೂ ಓದಿ: ಸೌಜನ್ಯ ಕೊಲೆ ಪ್ರಕರಣ ಮರುತನಿಖೆ: ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ

ತರಗತಿಯಲ್ಲಿ ನಡೆದ ಈ ಭೀಕರ ದೃಶ್ಯದಿಂದಾಗಿ ಸಹಪಾಠಿಗಳು ಹಾಗೂ ಶಿಕ್ಷಕರು ತೀವ್ರ ಆತಂಕಕ್ಕೊಳಗಾಗಿದ್ದು, ಸ್ಥಳದಲ್ಲಿದ್ದವರು ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತಡೆಯಲು ಹೋದ ಇನ್ನೊಬ್ಬ ವಿದ್ಯಾರ್ಥಿನಿಗೂ ಗಾಯ:

ಈ ವೇಳೆ ದಾಳಿಯನ್ನು ತಡೆಯಲು ಯತ್ನಿಸಿದ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ. ಕೃತ್ಯ ಎಸಗಿದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ಬಿಟ್ಟು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಧರ್ಮವೃಂದ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಹೇಮಂತ್‌ನನ್ನು ಬಂಧಿಸಿದ್ದಾರೆ. ಈತ ಸಂತ್ರಸ್ತೆ ವಿದ್ಯಾರ್ಥಿನಿಯ ದೂರದ ಸಂಬಂಧಿಯಾಗಿದ್ದು, ನಾಗಲೂರು ಮೂಲದವನೆಂದು ಗುರುತಿಸಲಾಗಿದೆ.

ಇದನ್ನೂ ಓದಿ: ಜಿಮ್ ಟ್ರೈನರ್ ಜೊತೆ ಸೇರಿ ಪತಿಯ ಕೊಲೆ ಮಾಡಿದ ಪತ್ನಿ; ಸಿಸಿಟಿವಿ ವಿಡಿಯೋದಲ್ಲಿ ಸಂಚು ಬಯಲು

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಹೇಮಂತ್ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ತನ್ನಿಂದ ದೂರವಿರುವಂತೆ ಹಾಗೂ ಈ ವಿಷಯವನ್ನು ಹೆತ್ತವರಿಗೆ ತಿಳಿಸುವುದಾಗಿ ವಿದ್ಯಾರ್ಥಿನಿ ಆತನಿಗೆ ಎಚ್ಚರಿಕೆ ನೀಡಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ, ಶಾಲೆಯ ತರಗತಿಯೊಳಗೇ ಈ ಭೀಕರ ದಾಳಿ ನಡೆಸಿದ್ದಾನೆ. ಶಾಲೆಯ ಆವರಣದಲ್ಲೇ ನಡೆದ ಈ ಘಟನೆಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಠಿಣ ಎಚ್ಚರಿಕೆ:

ಈ ಘಟನೆಯ ಕುರಿತು ತೀವ್ರ ದಿಗ್ಭ್ರಮೆ ಮತ್ತು ಆಕ್ರೋಶ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಸಂತ್ರಸ್ತೆಗೆ ಅತ್ಯುತ್ತಮ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ಚಂದ್ರಬಾಬು ನಾಯ್ಡು: “ರಾಪ್ತಾಡು ಶಾಲೆಯ ತರಗತಿಯಲ್ಲೇ 10ನೇ ತರಗತಿಯ ಬಾಲಕಿಯ ಮೇಲೆ ನಡೆದ ಈ ಬರ್ಬರ ದಾಳಿಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಶಾಲೆಗೆ ನುಗ್ಗಿ ಹೆಣ್ಣುಮಕ್ಕಳ ಮೇಲೆ ದಾಳಿ ಮಾಡುವ ರಾಕ್ಷಸರಿಗೆ ನಮ್ಮ ಸಮಾಜದಲ್ಲಿ ಜಾಗವಿಲ್ಲ. ಸಂತ್ರಸ್ತೆಯ ಚಿಕಿತ್ಸೆಯನ್ನು ನಾನು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಈ ಕೃತ್ಯ ಎಸಗಿದ ನರಾಧಮನಿಗೆ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸರಿಗೆ ಸ್ಪಷ್ಟ ಆದೇಶ ನೀಡಿದ್ದೇನೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್​ ಬಾಂಬ್​! ಖಾಲಿ ಪೈಪ್ ಪತ್ತೆ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್​ ಬಾಂಬ್​! ಖಾಲಿ ಪೈಪ್ ಪತ್ತೆ
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?
ಯಶಸ್​​ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಮೋಸ? ಸುದೀಪ್ ಕ್ಲಾಸ್
ಯಶಸ್​​ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಮೋಸ? ಸುದೀಪ್ ಕ್ಲಾಸ್
ವಿಜಯಪುರ ವಿಮಾನ ನಿಲ್ದಾಣ ಜೊತೆಗೆ ಪೈಲಟ್ ಟ್ರೈನಿಂಗ್ ಶಾಲೆ ಆರಂಭಕ್ಕೆ ಪ್ಲಾನ್
ವಿಜಯಪುರ ವಿಮಾನ ನಿಲ್ದಾಣ ಜೊತೆಗೆ ಪೈಲಟ್ ಟ್ರೈನಿಂಗ್ ಶಾಲೆ ಆರಂಭಕ್ಕೆ ಪ್ಲಾನ್
ಕಾಗೋಡು ತಿಮ್ಮಪ್ಪಗೆ ಡಿಕೆಶಿ​ ವಿಡಿಯೋ ಕಾಲ್​​: ಆರೋಗ್ಯ ವಿಚಾರಿಸಿದ ಸಿಎಂ
ಕಾಗೋಡು ತಿಮ್ಮಪ್ಪಗೆ ಡಿಕೆಶಿ​ ವಿಡಿಯೋ ಕಾಲ್​​: ಆರೋಗ್ಯ ವಿಚಾರಿಸಿದ ಸಿಎಂ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ