Gurugram Roof Collapse: ಗುರುಗ್ರಾಮದಲ್ಲಿ ಅಪಾರ್ಟ್ಮೆಂಟ್ ಮೇಲ್ಛಾವಣಿ ಕುಸಿತ; ನಾಲ್ವರು ಸಾವು, ಹಲವರು ನಾಪತ್ತೆ
ಗುರುವಾರ ಸಂಜೆ 5.30ರ ಸುಮಾರಿಗೆ ಡೈನಿಂಗ್ ಏರಿಯಾದ ಸೀಲಿಂಗ್ ಆರನೇ ಮಹಡಿಯಿಂದ ನೆಲಮಹಡಿಗೆ ಕುಸಿದಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಗುರುಗ್ರಾಮ: ಸೆಕ್ಟರ್ 109ರಲ್ಲಿನ ಕಾಂಡೋಮಿನಿಯಂನಲ್ಲಿನ 6ನೇ ಮಹಡಿಯ ಫ್ಲಾಟ್‌ನ ಸೀಲಿಂಗ್ ಕುಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಗುರುಗ್ರಾಮ್‌ನ ಚಿಂಟೆಲ್ಸ್ ಪ್ಯಾರಾಡಿಸೊ ಕಾಂಡೋಮಿನಿಯಂನಲ್ಲಿ ನಿನ್ನೆ ಸಂಜೆ ಬಹು ಮಹಡಿಗಳ ಸೀಲಿಂಗ್ ಕುಸಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ. ನಾಲ್ವರು ನಿವಾಸಿಗಳ ಸಾವನ್ನು ಪೊಲೀಸರು ದೃಢಪಡಿಸಿದ್ದಾರೆ ಮತ್ತು ಕನಿಷ್ಠ ನಾಲ್ಕು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅವಶೇಷಗಳನ್ನು ತೆರವುಗೊಳಿಸಲು ಇನ್ನೂ ಕೆಲವು ಗಂಟೆಗಳಾದರೂ ಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತ ಕೆ.ಕೆ.ರಾವ್ ಹೇಳಿದ್ದಾರೆ. ಅವಶೇಷಗಳನ್ನು ತೆಗೆದುಹಾಕುವಲ್ಲಿ ರಕ್ಷಣಾ ತಂಡಗಳು ದೊಡ್ಡ ಸವಾಲನ್ನು ಎದುರಿಸುತ್ತಿವೆ. ಈ ಘಟನೆಯ ತನಿಖೆಗಾಗಿ ನಾವು ತಂಡಗಳನ್ನು ರಚಿಸಿದ್ದೇವೆ. ಈ ದುರಂತಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಅವಶೇಷಗಳಲ್ಲಿ ಸಿಲುಕಿರುವ ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದೆ. ಆತನನ್ನು ಹೊರಗೆ ಕರೆತರಲು ಆತನೊಂದಿಗೆ ರಕ್ಷಣಾ ಸಿಬ್ಬಂದಿ ಮಾತನಾಡುತ್ತಿದ್ದಾರೆ ಎಂದು ರಕ್ಷಣಾ ತಂಡ ತಿಳಿಸಿದೆ. ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಗುರುವಾರ ಸಂಜೆ 5.30ರ ಸುಮಾರಿಗೆ ಡೈನಿಂಗ್ ಏರಿಯಾದ ಸೀಲಿಂಗ್ ಆರನೇ ಮಹಡಿಯಿಂದ ನೆಲಮಹಡಿಗೆ ಕುಸಿದಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. 18 ಅಂತಸ್ತಿನ ಅಪಾರ್ಟ್ಮೆಂಟ್ನ 7ನೇ ಮಹಡಿಯಲ್ಲಿ ನವೀಕರಣ ಕಾರ್ಯ ನಡೆಯುತ್ತಿತ್ತು. ಈ ವೇಳೆ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ: Aircraft Crash: ಪೆರುವಿನಲ್ಲಿ ಪ್ರವಾಸಿಗರಿದ್ದ ವಿಮಾನ ಪತನ; 7 ಪ್ರಯಾಣಿಕರ ದುರಂತ ಅಂತ್ಯ
Published On - 3:47 pm, Fri, 11 February 22