
ಗುರುಗ್ರಾಮ, ಅಕ್ಟೋಬರ್ 17: ಹರಿಯಾಣದ ಗುರುಗ್ರಾಮ ಜಿಲ್ಲೆಯ ಸೋಹ್ನಾ ವ್ಯಾಪ್ತಿಯ ದೌಲಾ ಗ್ರಾಮದಲ್ಲಿ 34 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಕೈಗಳನ್ನು ಕಟ್ಟಿಹಾಕಲಾಗಿದ್ದು, ಬಾಯಿ ಹಾಗೂ ಮುಖಕ್ಕೆ ಟೇಪ್ ಅಂಟಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೀತು ಎಂಬ 34 ವರ್ಷದ ಮಹಿಳೆ ಕೊಲೆಯಾದಾಕೆ. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನೀತು ಅವರ ಪತಿ ಪ್ರಶಾಂತ್ ತಮ್ಮ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ವಾಪಸಾದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮನೆಗೆ ಬಂದ ಪ್ರಶಾಂತ್ ಅವರಿಗೆ ಮನೆಯ ಸಾಮಾನುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದು ಅನುಮಾನ ಮೂಡಿದೆ. ಮನೆಯನ್ನು ಹುಡುಕಾಡಿದಾಗ ಪತ್ನಿ ನೀತು ಬಾತ್ರೂಮ್ನಲ್ಲಿ ಬಿದ್ದಿರುವುದು ಪತಿಗೆ ತಿಳಿದುಬಂದಿದೆ. ತಕ್ಷಣವೇ ಅವರನ್ನು ಸೋಹ್ನಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ನೀತು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಗ್ರೇಟರ್ ನೋಯ್ಡಾದಲ್ಲಿ ಒಂದೇ ಕುಟುಂಬದ 5 ಮಂದಿ ನಿಗೂಢ ಸಾವು: ಎಲ್ಲರೂ ಕೊನೆಯದಾಗಿ ಸೇವಿಸಿದ್ದು ನೂಡಲ್ಸ್!
ಕಳ್ಳತನದ ಅನುಮಾನ:
ಮನೆಯ ವಸ್ತುಗಳನ್ನು ಅಸ್ತವ್ಯಸ್ತಗೊಳಿಸಿರುವ ರೀತಿಯನ್ನು ನೋಡಿ, ಪೊಲೀಸರು ಕಳ್ಳತನ ಅಥವಾ ದರೋಡೆ ಉದ್ದೇಶದಿಂದ ಈ ಕೊಲೆ ನಡೆದಿರಬಹುದು ಎಂಬ ಕೋನದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಹಂತಕರು ಯಾರು ಮತ್ತು ಕೊಲೆಗೆ ನಿಖರವಾದ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಲವರ್ ಜೊತೆ ಸೇರಿ ಗಂಡನನ್ನು ಕೊಂದು, ಹಾವು ಕಚ್ಚಿತೆಂದ ಮಹಿಳೆಗೆ ಗಲ್ಲು ಶಿಕ್ಷೆ; ಆ ಒಂದು ತಪ್ಪಿಂದ ಬಯಲಾಯ್ತು ರಹಸ್ಯ
ಬೆಳಗ್ಗೆ ಕುಟುಂಬಸ್ಥರು ಶಾಲೆ ಹಾಗೂ ಕೆಲಸಕ್ಕೆ ಹೋದಾಗಿನಿಂದ ಮಧ್ಯಾಹ್ನ ಶವ ಪತ್ತೆಯಾಗುವವರೆಗಿನ ಅವಧಿಯಲ್ಲಿ ನಡೆದ ಘಟನೆಗಳ ಸರಣಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದುಷ್ಕರ್ಮಿಗಳು ಮನೆಗೆ ಹೇಗೆ ನುಗ್ಗಿದ್ದಾರೆ ಮತ್ತು ಹತ್ಯೆಗೆ ಅಸಲಿ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ