ದೆಹಲಿ: ಕೊರೊನಾ ಎರಡನೇ ಅಲೆಯಿಂದ ಈಗಷ್ಟೇ ದೇಶ ಚೇತರಿಸಿಕೊಳ್ಳುತ್ತಿದೆ. ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಸಾಗುತ್ತಿದ್ದು, ಕೆಲವೆಡೆ ಲಾಕ್ಡೌನ್ ನಿಯಮಾವಳಿಗಳು ಇನ್ನೂ ಸಂಪೂರ್ಣ ಸಡಿಲಿಕೆ ಆಗಿಲ್ಲ. ಅಷ್ಟರಲ್ಲಾಗಲೇ ಕೊರೊನಾ ಮೂರನೇ ಅಲೆಯ ಬಗ್ಗೆ ಮಾತುಗಳು ಕೇಳಿಬಂದಿದೆ. ಈ ಬಗ್ಗೆ ಐಎಮ್ಎ ಮುಖ್ಯಸ್ಥರು ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಕೊರೊನಾ ಮೂರನೇ ಅಲೆ ಸಂಭವದ ಕಾರಣದಿಂದ ಉತ್ಸವ, ಜಾತ್ರೆ, ಹಬ್ಬ ಹರಿದಿನಗಳು ಇಂತಹ ಸಮಾರಂಭಗಳನ್ನು ಆಯೋಜಿಸುವುದು ಅಪಾಯ ತಂದೊಡ್ಡಬಹುದು ಎಂದು ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಜೆ.ಎ. ಜಯಲಾಲ್ ಉತ್ಸವ, ಹಬ್ಬ- ಹರಿದಿನಗಳ ಆಚರಣೆಯಿಂದ ಕೊರೊನಾ ಹೆಚ್ಚುವ ಅಪಾಯವಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಸೇರಿ ನಡೆಸುವಂತಹ ಯಾವುದೇ ಸಭೆ, ಸಮಾರಂಭದ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಜಯಲಾಲ್ ಹೇಳಿದ್ದಾರೆ.
ಒಡಿಶಾದ ಪುರಿ ಜಗನ್ನಾಥ ಹಾಗೂ ಗುಜರಾತ್ನ ಅಹಮದಾಬಾದ್ನಲ್ಲಿ ವಾರ್ಷಿಕ ರಥೋತ್ಸವ ಕಾರ್ಯಕ್ರಮ ನಡೆದ ಬೆನ್ನಲ್ಲೇ ಜಯಲಾಲ್ ಈ ಹೇಳಿಕೆ ನೀಡಿದ್ದಾರೆ. ಇಲ್ಲಿ ರಥೋತ್ಸವವು ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆಯೇ ನಡೆದಿತ್ತು.
ಶಿವನ ಕನ್ವರ್ ಯಾತ್ರೆ ನಡೆಸುವುದನ್ನು ಕೊರೊನಾ ಮೂರನೇ ಅಲೆ ಸಾಧ್ಯತೆಯ ಕಾರಣದಿಂದ ನಿಲ್ಲಿಸುವಂತೆ ಸೂಚಿಸಲಾಗಿದೆ. ಕಳೆದ ಬಾರಿಯ ಕನ್ವರ್ ಯಾತ್ರೆ ಕೊರೊನಾ ಕಾರಣದಿಂದ ನಡೆದಿರಲಿಲ್ಲ. ಶಿವನ ಭಕ್ತರು, ಕನ್ವರಿಯಾ ಎಂದು ಕರೆಯಲ್ಪಡುವವರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಉತ್ತರ ಪ್ರದೇಶ, ದೆಹಲಿ, ಪಂಜಾಬ್, ಹರ್ಯಾಣ ಹಾಗೂ ಹಿಮಾಚಲ ಪ್ರದೇಶದ ಜನರು ಬಹುಸಂಖ್ಯೆಯಲ್ಲಿ ಇಲ್ಲಿ ಪಾಲ್ಗೊಳ್ಳುತ್ತಾರೆ.
ಪ್ರತಿ ವರ್ಷ ಸುಮಾರು ಮೂರು ಕೋಟಿ ಕನ್ವರಿಯಾ ಭಕ್ತರು, 15 ದಿನದ ಅವಧಿಯಲ್ಲಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹರಿದ್ವಾರ, ಗೋಮುಖ್, ಗಂಗೋತ್ರಿ ಮುಂತಾದ ಕಡೆಗಳಲ್ಲಿ ನದಿಯ ಪವಿತ್ರ ಜಲ ಸಂಗ್ರಹಿಸಿ ಸಮೀಪದ ಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಈ ಯಾತ್ರೆಯ ಆಯೋಜಿಸುವ ಬಗ್ಗೆ ಉತ್ತರಾಖಂಡ್ ಮುಖ್ಯಮಂತ್ರಿ ಪುಶ್ಕರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಜನರ ಜೀವಕ್ಕೆ ಅಪಾಯ ಆಗದಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆ ಆಗಿದೆ. ಕನ್ವರ್ ಯಾತ್ರೆಯ ಕಾರಣದಿಂದ ಕೊರೊನಾ ಹೆಚ್ಚಳವಾಗಿ ಜನರು ಸಾಯುವುದನ್ನು ದೇವರೂ ಇಷ್ಟಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Sabarimala Temple: ಜು.17ರಿಂದ 5 ದಿನ ಬಾಗಿಲು ತೆರೆಯಲಿರುವ ಶಬರಿಮಲೆ ದೇಗುಲ; ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ
ಸಚಿವ ಸಂಪುಟದಲ್ಲಿ ಮಂತ್ರಿಗಳ ಸಂಖ್ಯೆ ಹೆಚ್ಚಾಗಿದೆ; ಕೊರೊನಾ ಲಸಿಕೆ ಸಂಖ್ಯೆ ಏರಿಕೆಯಾಗಿಲ್ಲ: ರಾಹುಲ್ ಗಾಂಧಿ ಟೀಕೆ
Published On - 4:10 pm, Mon, 12 July 21