ದೆಹಲಿ: ಭಯೋತ್ಪಾದಕರು ಹಿಂದೂಗಳನ್ನು ಪ್ರತ್ಯೇಕಿಸಿ, ಬೆನ್ನಟ್ಟಿ ಹತ್ಯೆ ಮಾಡುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾಶ್ಮೀರದಿಂದ (Jammu Kashmir) ಪಂಡಿತ ಸಮುದಾಯಕ್ಕೆ ಸೇರಿದವರು ಜಮ್ಮುವಿನತ್ತ ವಲಸೆ ಹೋಗುತ್ತಿದ್ದಾರೆ. ಕಳೆದ ಒಂದು ವಾರದಲ್ಲಿಯೇ 100ಕ್ಕೂ ಹೆಚ್ಚು ಕುಟುಂಬಗಳು ಕಾಶ್ಮೀರ ಕಣಿವೆ ತೊರೆದು, ಜಮ್ಮುವಿಗೆ ವಲಸೆ ಬಂದಿವೆ. ಕುಲ್ಗಾಮ್ನಲ್ಲಿ ಶಿಕ್ಷಕಿ ರಜನಿ ಬಾಲಾ ಹತ್ಯೆಯ ನಂತರ ಪಂಡಿತ ಸಮುದಾಯದಲ್ಲಿ ಭೀತಿ ಆವರಿಸಿದ್ದು, ಭದ್ರತೆ ಹೆಚ್ಚಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಬಾರಾಮುಲ್ಲಾದ ಕಾಶ್ಮೀರಿ ಪಂಡಿತ್ ಕಾಲೊನಿಯಲ್ಲಿ ನೆಲೆಸಿದ್ದ 300 ಹಿಂದೂ ಕುಟುಂಬಗಳ ಪೈಕಿ ಅರ್ಧದಷ್ಟು ಜನರು ಈಗಾಗಲೇ ಕಾಶ್ಮೀರ ತೊರೆದಿದ್ದಾರೆ. ಕಳೆದ 26 ದಿನಗಳಲ್ಲಿ 8 ಮಂದಿಯನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ.
ಗುರಿಯಾಗಿಸಿ ಕೊಲ್ಲುವ ಸಂಚು ವಿಫಲಗೊಳಿಸುವುದು ಮತ್ತು ಕಾಶ್ಮೀರಿ ಪಂಡಿತ ಸಮುದಾಯದಲ್ಲಿ ಧೈರ್ಯ ತುಂಬಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆಗೆ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಜಮ್ಮು-ಕಾಶ್ಮೀರದ ಡಿಜಿಪಿ, ಗೃಹ ಇಲಾಖೆ ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಸಹ ಭಾಗವಹಿಸಲಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಬರ್ಬರ ಹತ್ಯೆ
ಕುಲ್ಗಾಂ ಜಿಲ್ಲೆಯ ಶಾಲೆಯ ಹೊರಗೆ ಮಹಿಳಾ ಶಿಕ್ಷಕಿಯೊಬ್ಬರನ್ನು ಕೊಲೆ ಮಾಡಿದ ಬೆನ್ನಲ್ಲೇ ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿ ಶಂಕಿತ ಉಗ್ರಗಾಮಿಗಳು ರಾಜಸ್ಥಾನದ (Rajasthan) ಬ್ಯಾಂಕ್ ಮ್ಯಾನೇಜರ್ ಅನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ದೇಶಾದ್ಯಂತ ಮತ್ತೆ ಸಂಚಲನ ಮೂಡಿಸಿದೆ. ಕುಲ್ಗಾಮ್ನ ಅರೆಹ್ ಮೋಹನ್ಪೋರಾ ಗ್ರಾಮದಲ್ಲಿ ಎಲ್ಲಕಿ ದೇಹತಿ ಬ್ಯಾಂಕ್ನ (ಇಡಿಬಿ) ಹನುಮಾನ್ಗಢದ ವಿಜಯ್ ಕುಮಾರ್ ಎಂದು ಗುರುತಿಸಲಾದ ಬ್ಯಾಂಕ್ ಮ್ಯಾನೇಜರ್ ಮೇಲೆ ಉಗ್ರರು ಗುಂಡಿನ (Terrorist Attack) ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
Published On - 3:29 pm, Thu, 2 June 22