ಅಂಗಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು 4 ವರ್ಷದ ಬಾಲಕನ ಹತ್ಯೆ: ಆರೋಪಿಯ ಬಂಧನ
ಆನ್‌ಲೈನ್‌ನಲ್ಲಿ ಅಂಗಾಂಗ ಮಾರಾಟ ಮಾಡಿ ಹಣ ಸಂಪಾದಿಸಲು 4 ವರ್ಷದ ಮಗುವನ್ನು ಕೊಂದು ಮೂತ್ರಪಿಂಡ ಹಾಗೂ ಕಣ್ಣುಗಳನ್ನು ಹೊರತೆಗೆದ ಆಘಾತಕಾರಿ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರೋಪಿ ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತವಾಗಿ ಹಣ ಗಳಿಸುವ ಮಾರ್ಗಗಳಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದ. ಈ ವೇಳೆ ಚಿಕ್ಕ ಮಕ್ಕಳ ಅಂಗಾಂಗಗಳನ್ನು ತೆಗೆದು ಮಾರಾಟ ಮಾಡುವ ಆಲೋಚನೆ ಆತನಲ್ಲಿ ಮೂಡಿತ್ತು ಎಂಬುದು ಗೊತ್ತಾಗಿದೆ.

ರಾಯ್‌ಪುರ, ನವೆಂಬರ್ 09: ಸಾಮಾಜಿಕ ಜಾಲತಾಣಗಳಿಂದ ಪ್ರಭಾವಿತನಾಗಿ ಅಂಗಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಬಂಧಿಕನ ನಾಲ್ಕು ವರ್ಷದ ಮಗುವನ್ನು ಕೊಂದ 27 ವರ್ಷದ ವ್ಯಕ್ತಿಯೊಬ್ಬ, ಮೂತ್ರಪಿಂಡ, ಶ್ವಾಸಕೋಶ ಮತ್ತು ಕಣ್ಣುಗಳನ್ನು ತೆಗೆದಿರುವ ಆಘಾತಕಾರಿ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಬಸುದೇವ ಅಲಿಯಾಸ್ ಟಂಗ್ನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಶ್‌ಪುರ ಜಿಲ್ಲೆಯ ಲೋಧೇನಾಪಾಥ್ ಮಹುವಾ ಗ್ರಾಮದ ಹೊಲವೊಂದರ ನೀರು ತುಂಬಿದ ಗುಂಡಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಮೃತ ಬಾಲಕನನ್ನು ಜಿತೇಂದ್ರ ರಾಮ್ ಎಂದು ಗುರುತಿಸಲಾಗಿದೆ. ನವೆಂಬರ್ 5ರಿಂದ ಬಾಲಕ ನಾಪತ್ತೆಯಾಗಿದ್ದ. ಈ ಸಂಬಂಧ ಆತನ ತಂದೆ ರಾಮ್‌ಜೀತ್ ರಾಮ್ ಸನ್ನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಸದ ನಿಮಿತ್ತ ಸುಮಾರು ಒಂದು ವರ್ಷದ ಹಿಂದೆ ರಾಮ್‌ಜೀತ್ ತನ್ನ ಕುಟುಂಬದೊಂದಿಗೆ ಸನ್ನಾ ಗ್ರಾಮಕ್ಕೆ ಬಂದಿದ್ದರು. ಆಮಾಚುವಾ ನದಿ ಅಣೆಕಟ್ಟಿನ ಸಮೀಪದ ಗುಡಿಸಲಿನಲ್ಲಿ ವಾಸವಾಗಿದ್ದರು. ಶನಿವಾರ ಕುಟುಂಬದ ಸದಸ್ಯರೊಂದಿಗೆ ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾಗ, ಮೆಕ್ಕೆಜೋಳದ ಹೊಲದ ಸಮೀಪವಿರುವ ನೀರು ತುಂಬಿದ ಗುಂಡಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸಿದ ಬಳಿಕ ಸಮೀಪದ ಚಲ್ನಿ ಗೊರ್ರಾಪಾತ್ ಗ್ರಾಮದ ನಿವಾಸಿ ಬಸುದೇವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈತ ದೂರುದಾರ ರಾಮ್‌ಜೀತ್ ಅವರ ತಾಯಿಯ ಕಡೆಯ ಸಂಬಂಧಿ ಎನ್ನಲಾಗಿದೆ.
ಇದನ್ನೂ ಓದಿ: ಮದುವೆಗೆ ಸಿಂಗಾಪುರದಿಂದ ಬಂದಿದ್ದ ವ್ಯಕ್ತಿಯ ದಾರುಣ ಹತ್ಯೆ; ಪಾರ್ಕಿಂಗ್ ವಿಷಯಕ್ಕೆ ಗುಂಡಿಕ್ಕಿ ಕೊಂದ ಪಕ್ಕದ ಮನೆಯವ
ತ್ವರಿತವಾಗಿ ಹಣ ಸಂಪಾದಿಸಲು ಕೊಲೆ!
ವಿಚಾರಣೆ ವೇಳೆ ಬಸುದೇವ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ದಿನಗೂಲಿ ಕೆಲಸದಿಂದ ಬರುತ್ತಿದ್ದ ಆದಾಯ ಸಾಲುತ್ತಿರಲಿಲ್ಲ. ಹೀಗಾಗಿ ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಗಿದ್ದಾನೆ. ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತವಾಗಿ ಹಣ ಗಳಿಸುವ ಮಾರ್ಗಗಳಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದ. ಈ ವೇಳೆ ಚಿಕ್ಕ ಮಕ್ಕಳ ಅಂಗಾಂಗಗಳನ್ನು ತೆಗೆದು ಮಾರಾಟ ಮಾಡುವ ಆಲೋಚನೆ ಆತನಲ್ಲಿ ಮೂಡಿತ್ತು ಎಂಬುದು ಗೊತ್ತಾಗಿದೆ.
ಇದರ ಭಾಗವಾಗಿ ನವೆಂಬರ್ 5ರಂದು ಬಸುದೇವ ಬಾಲಕನನ್ನು ಪುಸಲಾಯಿಸಿ ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದಾನೆ. ಬಳಿಕ ಮದ್ಯ ಮತ್ತು ಕೋಳಿ ಮಾಂಸ ಖರೀದಿಸಿ ಬಾಲಕನಿಗೆ ಮದ್ಯ ಕುಡಿಸಿದ್ದಾನೆ ಎನ್ನಲಾಗಿದೆ. ಮದ್ಯದ ಅಮಲಿನಿಂದ ಬಾಲಕ ನಿದ್ರೆಗೆ ಜಾರಿದ ಬಳಿಕ ಆರೋಪಿ ಚಾಕುವಿನಿಂದ ಆತನ ಕತ್ತು ಸೀಳಿದ್ದಾನೆ. ನಂತರ ಬಾಲಕನ ದೇಹವನ್ನು ಸೀಳಿ ಮೂತ್ರಪಿಂಡ, ಶ್ವಾಸಕೋಶ ಮತ್ತು ಕಣ್ಣುಗಳನ್ನು ಹೊರತೆಗೆದು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಇರಿಸಿದ್ದ. ಬಳಿಕ ಶವವನ್ನು ಕಂಬಳಿಯಲ್ಲಿ ಸುತ್ತಿ ಚೀಲದೊಳಗೆ ತುಂಬಿ ಹೊಲದಲ್ಲಿದ್ದ ನೀರು ತುಂಬಿದ ಗುಂಡಿಗೆ ಎಸೆದು, ಅದರ ಮೇಲೆ ಮಣ್ಣು ಹಾಕಿ ಮುಚ್ಚಿದ್ದಾನೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




