ದೆಹಲಿ: 2013 ರಲ್ಲಿ ಯುಪಿಎ (UPA) ಸರ್ಕಾರವು ತಂದಿದ್ದ ಸುಗ್ರೀವಾಜ್ಞೆ (ordinance) ತಪ್ಪಿತಸ್ಥ ಜನಪ್ರತಿನಿಧಿಗಳನ್ನು ಸದನದಿಂದ ತಕ್ಷಣವೇ ಅನರ್ಹಗೊಳಿಸುವುದರಿಂದ ರಕ್ಷಿಸಲು ಇರುವುದಾಗಿತ್ತು. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (4) ಅನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪನ್ನು ಅಮಾನ್ಯಗೊಳಿಸಲು ಯುಪಿಎ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತ್ತು. ಇದರ ಪ್ರಕಾರ ಜನಪ್ರತಿನಿಧಿಗಳು ಅನರ್ಹಗೊಳ್ಳುವುದನ್ನು ಮೂರು ತಿಂಗಳ ಕಾಲ ತಡೆಯಲು ಅವಕಾಶವಿತ್ತು. 2013ರ ಸೆಪ್ಟೆಂಬರ್ 28ರಂದು ಈ ಕುರಿತು ಹಿರಿಯ ನಾಯಕ ಅಜಯ್ ಮಾಕೇನ್ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಅಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ರಾಹುಲ್ ಗಾಂಧಿ (Rahul Gandhi), ಈ ಸುಗ್ರೀವಾಜ್ಞೆ ಅಸಂಬದ್ಧ ಎಂದು ಅದರ ಪ್ರತಿಯನ್ನು ಹರಿದುಹಾಕಿದ್ದರು. ಇದಾದ ನಂತರ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಸುಗ್ರೀವಾಜ್ಞೆಯನ್ನು ವಾಪಸ್ ಪಡೆದಿತ್ತು. ಇದೀಗ ಹತ್ತು ವರ್ಷಗಳ ನಂತರ, ಗುರುವಾರ ಸೂರತ್ ನ್ಯಾಯಾಲಯದಿಂದ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆ ಅನುಭವಿಸಿ ಅನರ್ಹರಾಗಿರುವ ರಾಹುಲ್ ಗಾಂಧಿಗೆ ಆ ಸುಗ್ರೀವಾಜ್ಞೆ ಇರುತ್ತಿದ್ದರೆ ಉಪಕಾರ ಆಗುತ್ತಿತ್ತು.
“ಮೋದಿ ಸರ್ನೇಮ್” ಪ್ರಕರಣದಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿದ ನಂತರ ಸಂಸತ್ತು ಶುಕ್ರವಾರ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ನ್ಯಾಯಾಲಯವು ರಾಹುಲ್ ಗಾಂಧಿಯ ಜಾಮೀನನ್ನು ಶ್ಯೂರಿಟಿಯ ಮೇಲೆ ಅನುಮೋದಿಸಿತ್ತು ಮತ್ತು ಉನ್ನತ ನ್ಯಾಯಾಲಯಗಳನ್ನು ಸಂಪರ್ಕಿಸಲು ಅವರಿಗೆ 30 ದಿನಗಳ ಕಾಲ ಶಿಕ್ಷೆಯನ್ನು ತಡೆದಿದೆ.
ಹಿರಿಯ ವಕೀಲ ಮತ್ತು ಸಾಂವಿಧಾನಿಕ ಕಾನೂನು ತಜ್ಞ ರಾಕೇಶ್ ದ್ವಿವೇದಿ ಅವರು ಕ್ರಮವಾಗಿ ಲಿಲಿ ಥಾಮಸ್ ಮತ್ತು ಲೋಕ ಪ್ರಹರಿ ವಿಷಯಗಳಲ್ಲಿ ಸುಪ್ರೀಂಕೋರ್ಟ್‌ನ 2013 ಮತ್ತು 2018 ರ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಜನಪ್ರತಿನಿಧಿ ಕಾಯಿದೆ ಅಡಿಯಲ್ಲಿ ಜನಪ್ರತಿನಿಧಿಗಳು ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಿಕ್ಷೆಯ ಅಮಾನತು ಮತ್ತು ಶಿಕ್ಷೆಯ ತಡೆ ಅಗತ್ಯ ಎಂದಿದ್ದಾರೆ.
2013ರಲ್ಲಿ, ಲಿಲಿ ಥಾಮಸ್ ವಿರುದ್ಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಕರಣದಲ್ಲಿ ಜನಪ್ರತಿನಿಧಿ ಕಾಯಿದೆ (ಆರ್‌ಪಿ ಆಕ್ಟ್) ನ ಸೆಕ್ಷನ್ 8 (4) ಅನ್ನು ರದ್ದುಪಡಿಸಿದ ಉನ್ನತ ನ್ಯಾಯಾಲಯವು ಅಪರಾಧಿ ಜನಪ್ರತಿನಿಧಿಗಳಿಗೆ ಅಧಿಕಾರದಲ್ಲಿ ಉಳಿಯುವ ಅಧಿಕಾರವನ್ನು ನೀಡಿತು. ಅಪರಾಧ ನಿರ್ಣಯವಾದ ಮೂರು ತಿಂಗಳೊಳಗೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು. ಅದೇ ವರ್ಷದಲ್ಲಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಸರ್ಕಾರವು ಸುಪ್ರೀಂಕೋರ್ಟ್ ತೀರ್ಪನ್ನು ತಪ್ಪಿಸಲು ಪ್ರಯತ್ನಿಸಿತು.
ಆರ್‌ಪಿ ಕಾಯಿದೆಯ ನಿಬಂಧನೆಯ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ.ನಂತರ ಆರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ
28 ಸೆಪ್ಟೆಂಬರ್ 2013 ರಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಸುಗ್ರೀವಾಜ್ಞೆಯನ್ನು ವಿರೋಧಿಸಿದ್ದು,ಪ್ರತಿಭಟನೆಯ ಸಂಕೇತವಾಗಿ ಸುಗ್ರೀವಾಜ್ಞೆಯನ್ನು ಹರಿದು ಹಾಕಿದರು.
ಮಾಧ್ಯಮ ಸಂವಾದದ ಸಂದರ್ಭದಲ್ಲಿ, ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ಹರಿದು ಹಾಕಿದ ರಾಹುಲ್, ಸುಗ್ರೀವಾಜ್ಞೆ ಬಗ್ಗೆ ನನ್ನ ಅಭಿಪ್ರಾಯವನ್ನು ನಾನು ನಿಮಗೆ ಹೇಳುತ್ತೇನೆ. ಇದು ಸಂಪೂರ್ಣ ಅಸಂಬದ್ಧ ಮತ್ತು ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅದನ್ನು ಹರಿದು ಬಿಸಾಡಬೇಕು ಎಂದಿದ್ದರು.
ಒಂದು ವೇಳೆ ಆ ಸುಗ್ರೀವಾಜ್ಞೆಗೆ ರಾಹುಲ್ ವಿರೋಧ ವ್ಯಕ್ತಪಡಿಸದೇ ಇದ್ದಿದ್ದರೆ ಇಂದು ಅವರಿಗೆ ಮೂರು ತಿಂಗಳ ಅವಕಾಶ ಸಿಗುತ್ತಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Fri, 24 March 23