ಕೊವಿಡ್-19 ಸೋಂಕಿತ ಪತ್ನಿಯನ್ನು ದೂರ ಮಾಡಿದ ಪತಿ; ಮತ್ತೆ ಒಂದಾಗಲು 10 ಲಕ್ಷ ರೂ.ಕೇಳುತ್ತಿದ್ದಾನೆಂದು ಠಾಣೆ ಮೆಟ್ಟಿಲೇರಿದ ನರ್ಸ್
ನನಗೆ ನರ್ಸ್ ವೃತ್ತಿ ಬಿಡಲು ಇಷ್ಟವಿರಲಿಲ್ಲ. ಮಾರ್ಚ್ನಲ್ಲಿ ನಗರದಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ನಾನು ನಿರಂತರವಾಗಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದೆ. ಹಾಗಾಗಿ ಸಹಜವಾಗಿಯೇ ನನಗೆ ಸೋಂಕು ತಗುಲಿತ್ತು ಎಂದು ನರ್ಸ್ ತಿಳಿಸಿದ್ದಾರೆ.
ಅಹ್ಮದಾಬಾದ್: ಕೊರೊನಾ ಕಾಲಿಟ್ಟ ಅದರ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ವೈದ್ಯರು, ನರ್ಸ್ಗಳು, ಪೊಲೀಸರು, ಪೌರ ಕಾರ್ಮಿಕರು. ಇವರನ್ನೆಲ್ಲ ಕೊರೊನಾ ವಾರಿಯರ್ಸ್ ಎಂದೇ ಕರೆಯಲಾಗಿದೆ. ಅಲ್ಲದೆ, ಅವರನ್ನು ಇಡೀ ದೇಶವೇ ಮನಸ್ಫೂರ್ತಿಯಾಗಿ ಹೊಗಳುತ್ತಿದೆ. ಡೆಡ್ಲಿ ಸೋಂಕಿನ ವಿರುದ್ಧ ಹೋರಾಡಿದ ಅವರ ದಿಟ್ಟತನಕ್ಕೆ ಬಹುತೇಕ ಎಲ್ಲರೂ ತಲೆಬಾಗಿದ್ದಾರೆ. ಆದರೆ ಇಲ್ಲೊಬ್ಬ ನರ್ಸ್ ಕೊರೊನಾ ವಿರುದ್ಧ ಹೋರಾಡಿ, ಕೊನೆಗೆ ತಾನೇ ಸೋಂಕಿಗೆ ಒಳಗಾಗಿ, ಇದೀಗ ಪತಿಯಿಂದಲೂ ಹಿಂಸೆ ಅನುಭವಿಸುತ್ತಿದ್ದಾರೆ.
ಗುಜರಾತ್ನ ಅಹ್ಮದಾಬಾದ್ನಲ್ಲಿರುವ ಇಸಾನ್ಪುರದ ನರ್ಸ್ (27) ಪತಿಯ ವಿರುದ್ಧ ಖೋಖ್ರಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದ ಈ ನರ್ಸ್ಗೆ 2020ರ ಏಪ್ರಿಲ್ನಲ್ಲಿ ಕೊವಿಡ್-19 ಸೋಂಕು ತಗುಲಿತ್ತು. ಆ ವೇಳೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿದ್ದ ಪತಿ ಕೈಬಿಟ್ಟಿದ್ದ. ಸೋಂಕು ತಗುಲುತ್ತಿದ್ದಂತೆ ಅವಳನ್ನು ಅನಾಥಳನ್ನಾಗಿ ಮಾಡಿದ್ದ. ಇನ್ನು ನರ್ಸ್ ಗುಣಮುಖರಾದ ಮೇಲೆ ಕೂಡ ಜತೆಗಿರಬೇಕು ಎಂದರೆ 10 ಲಕ್ಷ ರೂ.ಕೊಡಬೇಕು ಎಂದು ಹೇಳುತ್ತಿದ್ದಾನೆ.
ಈ ಮಹಿಳೆ ಮಣಿನಗರದ ಎಲ್ಜಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. 2020ರ ಫೆಬ್ರವರಿ 4ರಂದು ವಿವಾಹ ಆಗಿತ್ತು. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ಪತಿ ಹಾಗೂ ಆತನ ಕುಟುಂಬದಿಂದ ದೌರ್ಜನ್ಯ ಶುರುವಾಗಿತ್ತು. ನರ್ಸ್ ಕೆಲಸ ಬಿಟ್ಟುಬಿಡು ಎಂದು ಸದಾ ಕಿರುಕುಳ ನೀಡುತ್ತಿದ್ದರು. ಕೊರೊನಾ ಸೋಂಕು ಎಲ್ಲೆಡೆ ಹಬ್ಬುತ್ತಿದೆ. ನೀನು ಆಸ್ಪತ್ರೆಗೆ ಹೋಗಿ ಅದನ್ನು ನಮ್ಮ ಮನೆಗೆ ತರುತ್ತೀಯಾ ಎಂದು ಕೂಗಾಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನನಗೆ ನರ್ಸ್ ವೃತ್ತಿ ಬಿಡಲು ಇಷ್ಟವಿರಲಿಲ್ಲ. ಮಾರ್ಚ್ನಲ್ಲಿ ನಗರದಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ನಾನು ನಿರಂತರವಾಗಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದೆ. ಹಾಗಾಗಿ ಸಹಜವಾಗಿಯೇ ನನಗೆ ಸೋಂಕು ತಗುಲಿತ್ತು. ಆಗ ನನ್ನ ಪತಿ ನನ್ನನ್ನು ಸೇರಿಸಲಿಲ್ಲ. ತವರುಮನೆಯಿಂದ 10 ಲಕ್ಷ ತಂದರೆ ಮಾತ್ರ ನಮ್ಮ ಮನೆಗೆ ಸೇರಿಸುತ್ತೇನೆ. ನನ್ನೊಂದಿಗೆ ಇರಲು ಅವಕಾಶ ಕೊಡುತ್ತೇನೆ ಎಂದು ಹೇಳಿದ ಎಂದು ಆರೋಪಿಸಿದ್ದಾರೆ.
ಈ ಜಗಳದಲ್ಲಿ ನನ್ನ ಕುಟುಂಬದವರೂ ಹಸ್ತಕ್ಷೇಪ ಮಾಡಿದರು. ಇಬ್ಬರಿಗೂ ರಾಜಿ ಮಾಡಲು ಪ್ರಯತ್ನಿಸಿದರು. ಆದರೆ ನನ್ನ ಪತಿಯ ಸಹೋದರಿ ಮತ್ತೊಮ್ಮೆ ಕೊವಿಡ್-19 ಟೆಸ್ಟ್ಗೆ ಒಳಗಾಗಿ, ಹೊಸ ವರದಿ ತರುವಂತೆ ಹೇಳಿದಳು. ನಾನು ಮತ್ತೆ ಟೆಸ್ಟ್ ಮಾಡಿಸಿಕೊಳ್ಳಲು ಒಪ್ಪಲಿಲ್ಲ. ಈ ಕಾರಣಕ್ಕೆ ನನ್ನ ಪತಿ ಹಾಗೂ ಕುಟುಂಬದವರು ನನ್ನ ಬಳಿ ವಿಚ್ಛೇದನ ಕೊಡುವಂತೆ ಒತ್ತಾಯಿಸುತ್ತಿದ್ದಾರೆ ಎಂದೂ ನರ್ಸ್ ಹೇಳಿದ್ದಾರೆ. ಕಳೆದ 6 ತಿಂಗಳಿಂದಲೂ ಪತಿ ನನ್ನ ಬಳಿ ಬಂದಿಲ್ಲ ಎಂದು ಹೇಳಿರುವ ಆಕೆ, ಪತಿ ಮತ್ತು ಅವರ ಕುಟುಂಬದ ವಿರುದ್ಧ ವರದಕ್ಷಿಣೆ, ದೌರ್ಜನ್ಯದ ದೂರನ್ನೂ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ಸೀಸನ್ಗೆ ಬಿಗ್ ಬಾಸ್ ನಿರೂಪಕ ಚೇಂಜ್; ಹೊಸ ನಟನ ಹುಡುಕಾಟದಲ್ಲಿ ವಾಹಿನಿ
ಸ್ಟಾರ್ ನಟಿಯರಿಗೆ ಕಿಸ್ ಮಾಡಿ ತೊಂದರೆಗೆ ಸಿಲುಕಿದ್ದ ಇಮ್ರಾನ್ ಹಷ್ಮಿ! ತಪ್ಪು ಒಪ್ಪಿಕೊಂಡ ನಟ