ಹೈದರಾಬಾದ್‌ನಲ್ಲಿ 26/11 ಮಾದರಿಯ ದಾಳಿ ಬೆದರಿಕೆ, ನಗರಾದ್ಯಂತ ಪೊಲೀಸರ ಕಟ್ಟೆಚ್ಚರ

ಹೈದರಾಬಾದ್‌ನಲ್ಲಿ 26/11 ಮುಂಬೈ ಮಾದರಿ ದಾಳಿಯ ಇ-ಮೇಲ್ ಬೆದರಿಕೆ ಬಂದಿದೆ. ಕಾಚಿಗುಡ ರೈಲು ನಿಲ್ದಾಣ ಮತ್ತು ಹೋಟೆಲ್ ಟೂರಿಸ್ಟ್ ಪ್ಲಾಜಾ ಗುರಿ ಎಂದು ಹೇಳಲಾಗಿದೆ. ಪೊಲೀಸರು ನಗರಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇದು ಸುಳ್ಳು ಬೆದರಿಕೆಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದು, ಸಾರ್ವಜನಿಕರು ಆತಂಕ ಪಡದಂತೆ ಮನವಿ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.

ಹೈದರಾಬಾದ್‌ನಲ್ಲಿ 26/11 ಮಾದರಿಯ ದಾಳಿ ಬೆದರಿಕೆ, ನಗರಾದ್ಯಂತ ಪೊಲೀಸರ ಕಟ್ಟೆಚ್ಚರ
ಪೊಲೀಸ್ -ಸಾಂದರ್ಭಿಕ ಚಿತ್ರ
Image Credit source: PTI

Updated on: Nov 23, 2026 | 7:21 AM

ಹೈದರಾಬಾದ್, ನವೆಂಬರ್ 23:ಹೈದರಾಬಾದ್‌ನಲ್ಲಿ ನವೆಂಬರ್ 26ರಂದು 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾದರಿಯಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕಾಚಿಗುಡ ರೈಲು ನಿಲ್ದಾಣ ಮತ್ತು ಅಲ್ಲಿನ ಹೋಟೆಲ್ ಟೂರಿಸ್ಟ್ ಪ್ಲಾಜಾವನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟ ನಡೆಸುವುದಾಗಿ ಇ-ಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ದಾಳಿಗಳಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಬಹುದು ಎಂದೂ ಸಂದೇಶದಲ್ಲಿ ಹೇಳಲಾಗಿದೆ.

ನವೆಂಬರ್ 21ರಂದು ಹೈದರಾಬಾದ್ ಪೊಲೀಸರಿಗೆ ಈ ಇಮೇಲ್ ಬಂದಿದ್ದು, ಅದನ್ನು ಕಳುಹಿಸಿದವರು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಇತ್ತೀಚೆಗೆ ಲಷ್ಕರ್ ಉಗ್ರ ಲತೀಫ್ ಭಟ್ ಹತ್ಯೆಯಾದ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ದಾಳಿ ನಡೆಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

Loading...

ಎರಡು ಪ್ರಮುಖ ಸ್ಥಳಗಳಿಗೆ ಬೆದರಿಕೆ

ಇಮೇಲ್‌ನಲ್ಲಿ ಕಾಚಿಗುಡ ರೈಲು ನಿಲ್ದಾಣ ಮತ್ತು ಹೋಟೆಲ್ ಟೂರಿಸ್ಟ್ ಪ್ಲಾಜಾದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ನವೆಂಬರ್ 26ರಂದೇ 2008ರ ಮುಂಬೈ ದಾಳಿಯ ಮಾದರಿಯಲ್ಲಿ ಹೈದರಾಬಾದ್‌ನಲ್ಲೂ ದಾಳಿ ನಡೆಸುವುದಾಗಿ ಸಂದೇಶದಲ್ಲಿ ಹೇಳಲಾಗಿದೆ.

ಆದರೆ, ಈ ಬೆದರಿಕೆ ನಿಜವಾಗಿಯೂ ಲಷ್ಕರ್ ಸಂಘಟನೆಯಿಂದ ಬಂದಿದೆಯೇ ಅಥವಾ ಯಾರಾದರೂ ಸಂಘಟನೆಯ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಮೇಲ್‌ನ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಫ್ಲೈದುಬೈ ವಿಮಾನದಲ್ಲಿ ಮಚ್ಚಾರ್ ಮೇಲೆ ನಡೆದ ದಾಳಿ ರೀತಿಯೇ ಮತ್ತೊಂದು ದಾಳಿ ಸಾಧ್ಯತೆ! ಅಮೆರಿಕದ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ

ರೈಲು ನಿಲ್ದಾಣ, ಹೋಟೆಲ್‌ಗಳಲ್ಲಿ ತಪಾಸಣೆ

ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸ್ ವಿಶೇಷ ಶಾಖೆ ಹಿರಿಯ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ. ಕಾಚಿಗುಡ ರೈಲು ನಿಲ್ದಾಣ ಮತ್ತು ಹೋಟೆಲ್ ಟೂರಿಸ್ಟ್ ಪ್ಲಾಜಾ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಪೊಲೀಸರು ಅನುಮಾನಿತ ಸ್ಥಳಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ತಂಡಗಳ ಮೂಲಕ ತಪಾಸಣೆ ನಡೆಸಿದ್ದಾರೆ. ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಹೋಟೆಲ್‌ಗಳು, ಧಾರ್ಮಿಕ ಸ್ಥಳಗಳು, ಜನದಟ್ಟಣೆ ಇರುವ ಪ್ರದೇಶಗಳು ಮತ್ತು ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿಯೂ ನಿಗಾ ಹೆಚ್ಚಿಸಲಾಗಿದೆ.

ಅನುಮಾನಾಸ್ಪದ ವ್ಯಕ್ತಿಗಳು, ವಾರಸುದಾರರಿಲ್ಲದ ವಸ್ತುಗಳು, ವಾಹನಗಳು ಮತ್ತು ಅಸಹಜ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ. ಗಸ್ತು ಹೆಚ್ಚಿಸುವುದರ ಜೊತೆಗೆ ಇತರ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆಯೂ ನಿರ್ದೇಶನ ನೀಡಲಾಗಿದೆ.

ಬೆದರಿಕೆ ಇಮೇಲ್ ಸುಳ್ಳಾಗಿರುವ ಸಾಧ್ಯತೆ: ಪೊಲೀಸರು

ಈ ನಡುವೆ, ಬೆದರಿಕೆ ಇಮೇಲ್ ಪ್ರಾಥಮಿಕವಾಗಿ ಸುಳ್ಳು ಬೆದರಿಕೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆದರಿಕೆ ಬಂದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

ಹೈದರಾಬಾದ್ ಪೊಲೀಸ್ ಆಯುಕ್ತರು ಸಾರ್ವಜನಿಕರು ಆತಂಕಪಡಬಾರದು ಮತ್ತು ಪರಿಶೀಲಿಸದ ಸುದ್ದಿಗಳನ್ನು ನಂಬಬಾರದು ಅಥವಾ ಹರಡಬಾರದು ಎಂದು ಮನವಿ ಮಾಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿ ಅಥವಾ ವಾರಸುದಾರರಿಲ್ಲದ ವಸ್ತು ಕಂಡುಬಂದರೆ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಸದ್ಯ ಪೊಲೀಸರು ಇಮೇಲ್ ಕಳುಹಿಸಿದವರನ್ನು ಪತ್ತೆಹಚ್ಚುವ ಮತ್ತು ಬೆದರಿಕೆಯ ಹಿಂದಿನ ಉದ್ದೇಶವನ್ನು ತಿಳಿಯುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆದರಿಕೆಯ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us