
ಹೈದರಾಬಾದ್, ಜೂನ್ 08: ಶತಮಾನಗಳಷ್ಟು ಹಳೆಯದಾದ ಕಾಚಿಗುಡ ರೈಲು ನಿಲ್ದಾಣದ ಮುಂಭಾಗವು ಅತ್ಯಾಧುನಿಕ ಶಾಶ್ವತ ವಿದ್ಯುತ್ ದೀಪಾಲಂಕಾರದಿಂದ (Kacheguda Facade Lighting) ಶೃಂಗಾರಗೊಂಡಿದೆ. ಈ ವಿದ್ಯುತ್ ದೀಪಾಲಂಕಾರವನ್ನು ಸೋಮವಾರ (ಜೂ.9) ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ (Kishn Reddy) ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಐತಿಹಾಸಿಕ ಕಾಚಿಗುಡ ರೈಲು ನಿಲ್ದಾಣಕ್ಕೆ 2.3 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ಈ ವಿದ್ಯುತ್ ದೀಪಗಳು ರೈಲು ನಿಲ್ದಾಣ ಮುಂಭಾಗದ ಸೌಂದರ್ಯವನ್ನು ಹೆಚ್ಚಿಸಿವೆ. ಈ ದೀಪಾಲಂಕಾರದಿಂದ ಸಾರ್ವಜನಿಕರು ತಮ್ಮ ಸಾಂಸ್ಕೃತಿಕ ಮತ್ತು ಐತಿಹಾಸಿಕ ಕಟ್ಟಡದ ಮಹತ್ವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲಿದ್ದಾರೆ.
ಕಾಚಿಗುಡ ರೈಲು ನಿಲ್ದಾಣವನ್ನು 1916ರಲ್ಲಿ ನಿಜಾಮರ ಕಾಲದಲ್ಲಿ ಗೋಥಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಂತಹ ಐತಿಹಾಸಿಕ ರೈಲು ನಿಲ್ದಾಣಕ್ಕೆ 785 ಲೈಟಿಂಗ್ ಫಿಕ್ಸ್ಚರ್ಸ್ಗಳಿಂದ ಅಲಂಕಾರ ಮಾಡಲಾಗಿದೆ. ಈ ವಿದ್ಯುತ್ ದೀಪಗಳು ನಿಲ್ದಾಣದ ಭವ್ಯ ವಾಸ್ತುಶಿಲ್ಪ ಮತ್ತು ಪರಂಪರೆಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ.
ಕಾಚಿಗುಡ ರೈಲು ನಿಲ್ದಾಣ ನಗರದ ಮಧ್ಯ ಭಾಗದಲ್ಲಿದೆ. ಅಲ್ಲದೆ, ಹೈದರಾಬಾದ್ನ ಪ್ರಮುಖ ಟರ್ಮಿನಲ್ಗಳಲ್ಲಿ ಒಂದಾಗಿದ್ದು, ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುತ್ತಾರೆ. ವಿದ್ಯುತ್ ದೀಪಾಲಂಕಾರದಿಂದ ಈ ರೈಲು ನಿಲ್ದಾಣದ ಐತಿಹಾಸಿಕ ಮಹತ್ವ ಬಗ್ಗೆ ಜನರು ತಿಳಿದುಕೊಳ್ಳಲು ಮುಂದಾಗುತ್ತಾರೆ ಮತ್ತು ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಕಾಚಿಗುಡ ರೈಲು ನಿಲ್ದಾಣವು ಹಸಿರು ರೈಲು ನಿಲ್ದಾಣವಾಗಿದೆ. ಹಸಿರು ಇಂಧನ ಬಳಕೆಯ ಮೂಲಕ ಪರಿಸರ ಸುಸ್ಥಿರತೆಗೆ ಅದರ ಬದ್ಧತೆಗಾಗಿ ರೈಲು ನಿಲ್ದಾಣಕ್ಕೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ಸ್ (IGBC) ಪ್ಲಾಟಿನಂ ರೇಟಿಂಗ್ ನೀಡಿದೆ. ಇಷ್ಟೇ ಅಲ್ಲದೆ, ಇದನ್ನು ಇಂಧನ ದಕ್ಷತೆಯುಳ್ಳ ರೈಲು ನಿಲ್ದಾಣ ಎಂದೂ ಭಾರತೀಯ ರೈಲ್ವೆ ಗುರುತಿಸಿದೆ. ಗಮನಾರ್ಹವಾಗಿ, ಇದು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ರೈಲು ನಿಲ್ದಾಣವಾಗಿದೆ.
ಇದನ್ನೂ ನೋಡಿ: ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಇದಲ್ಲದೆ, ಅಮೃತ್ ಭಾರತ್ ಯೋಜನೆಯಡಿಯಲ್ಲಿ, ಈ ನಿಲ್ದಾಣವನ್ನು 421.66 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದು ಮತ್ತು ಸಾಂಪ್ರದಾಯಿಕ ಪರಂಪರೆಯನ್ನು ಸಂರಕ್ಷಿಸುವುದು ಮುಖ್ಯ ಗುರಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 pm, Sun, 8 June 25