ಉಚ್ಚಾಟನೆ ಮಾಡಿದರೆ ಮುಂದಿನ ಬಾರಿ ದೊಡ್ಡ ಜನಾದೇಶದೊಂದಿಗೆ ಲೋಕಸಭೆಗೆ ಮತ್ತೆ ಬರುವೆ: ಮಹುವಾ ಮೊಯಿತ್ರಾ
ತಮ್ಮ ವರದಿಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸುವುದಾಗಿ ನೈತಿಕ ಸಮಿತಿ ಅಧ್ಯಕ್ಷ ವಿನೋದ್ ಸೋಂಕರ್ ಹೇಳಿದ್ದಾರೆ. ವರದಿಯನ್ನು ಪ್ರಕಟಿಸಲು ಸ್ಪೀಕರ್ ಆದೇಶಿಸಬಹುದು. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ, ಸಮಿತಿಯ ಅಧ್ಯಕ್ಷರು ಸದನದಲ್ಲಿ ವರದಿಯನ್ನು ಮಂಡಿಸುತ್ತಾರೆ ಮತ್ತು ನಂತರ ಅದರ ಮೇಲೆ ಚರ್ಚೆ ನಡೆಯಲಿದೆ.
ದೆಹಲಿ ನವೆಂಬರ್ 09: ಪ್ರಶ್ನೆಗಾಗಿ ನಗದು ಪ್ರಕರಣದ (Cash For Query) ಬಗ್ಗೆ ತನಿಖೆ ನಡೆಸುತ್ತಿರುವ ಲೋಕಸಭೆಯ ನೈತಿಕ ಸಮಿತಿಯ (Lok Sabha Ethics Committee) ವರದಿಯ ಆಧಾರದ ಮೇಲೆ ತನ್ನನ್ನು ಈಗ ಉಚ್ಚಾಟಿಸಿದರೂ ದೊಡ್ಡ ಜನಾದೇಶದೊಂದಿಗೆ ಮುಂದಿನ ಬಾರಿ ಲೋಕಸಭೆಗೆ ಮರಳುವೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ(Mahua Moitra) ಹೇಳಿದ್ದಾರೆ. ನೈತಿಕ ಸಮಿತಿಯು 6:4 ಮತಗಳಲ್ಲಿ ಅಂಗೀಕರಿಸಿದ 500 ಪುಟಗಳ ವರದಿಗೆ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ ಇದು ಕಾಂಗರೂ ಕೋರ್ಟ್‌ನಲ್ಲಿ ಪೂರ್ವ ನಿಗದಿತ ಪಂದ್ಯ. “ಭಾರತಕ್ಕೆ ಇದು ಸಂಸದೀಯ ಪ್ರಜಾಪ್ರಭುತ್ವದ ಸಾವು” ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳನ್ನು ನೈತಿಕ ಸಮಿತಿಯು ತುಂಬಾ ಗಂಭೀರವಾಗಿ ಪರಿಗಣಿಸಿದೆ. ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಎತ್ತಿದ್ದ ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದನ್ನು ಉದ್ಯಮಿ ದರ್ಶನ್ ಹಿರಾನಂದಾನಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಹಿರಾನಂದಾನಿ ಅವರೊಂದಿಗೆ ಸಂಸತ್ತಿನ ಲಾಗಿನ್ ಅನ್ನು ಹಂಚಿಕೊಂಡಿರುವ ಬಗ್ಗೆ ಮಹುವಾ ಕೂಡಾ ಒಪ್ಪಿಕೊಂಡಿದ್ದಾರೆ. ಈ ರೀತಿ ಮಾಡಿದ್ದಕ್ಕಾಗಿ ಮಹುವಾ ಅವರನ್ನು ಲೋಕಸಭೆಯಿಂದ ಹೊರಹಾಕುವಂತೆ ನೈತಿಕ ಸಮಿತಿ ಶಿಫಾರಸು ಮಾಡಿದೆ. ಮಹುವಾ ಮೊಯಿತ್ರಾ ಇಲ್ಲದಿದ್ದಾಗ ದುಬೈನಿಂದ 47 ಬಾರಿ ಲಾಗಿನ್‌ಗಳನ್ನು ಬಳಸಲಾಗಿದೆ ಎಂದು ವರದಿಗಳು ತಿಳಿಸಿವೆ.
ನೈತಿಕ ಸಮಿತಿಯು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೆಹದ್ರಾಯಿ ಅವರ ಹೇಳಿಕೆಗಳನ್ನು ದಾಖಲಿಸಿದೆ. ನವೆಂಬರ್ 2 ರಂದು ಮಹುವಾ ಮೊಯಿತ್ರಾ ಅವರನ್ನು ವಿಚಾರಣೆಗೊಳಪಡಿಸಲಾಯಿತು, ಅಲ್ಲಿ ಅಸಭ್ಯ ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದರಿಂದ ಕಿರುಕುಳವನ್ನು ಎದುರಿಸಿದ್ದೇನೆ ಎಂದು ಮಹುವಾ ಹೇಳಿಕೊಂಡಿದ್ದಾರೆ. ಗುರುವಾರ ಸಮಿತಿಯ ನಾಲ್ವರು ವಿರೋಧ ಪಕ್ಷದ ಸದಸ್ಯರು ಕರಡು ವರದಿಯನ್ನು ವಿರೋಧಿಸಿದ್ದು ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. ದರ್ಶನ್ ಹಿರಾನಂದನಿಗೆ ಸಮನ್ಸ್ ನೀಡಿಲ್ಲ ಎಂದು ವರದಿಗೆ ಅಸಮ್ಮತಿ ಸೂಚಿಸಿದ್ದಾರೆ.
ಇದನ್ನೂ ಓದಿ: ಮಹುವಾ ಮೊಯಿತ್ರಾ ರಾಜಕೀಯದ ಬಲಿಪಶು, ಆಕೆ ಹೋರಾಡಬಲ್ಲಳು: ಅಭಿಷೇಕ್ ಬ್ಯಾನರ್ಜಿ
ಮಹುವಾ ಮೊಯಿತ್ರಾ ಲೋಕಸಭೆಯಿಂದ ಉಚ್ಚಾಟನೆ?
ತಮ್ಮ ವರದಿಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸುವುದಾಗಿ ನೈತಿಕ ಸಮಿತಿ ಅಧ್ಯಕ್ಷ ವಿನೋದ್ ಸೋಂಕರ್ ಹೇಳಿದ್ದಾರೆ. ವರದಿಯನ್ನು ಪ್ರಕಟಿಸಲು ಸ್ಪೀಕರ್ ಆದೇಶಿಸಬಹುದು. ಸಂಸತ್ತಿನ ಮುಂದಿನ ಅಧಿವೇಶನದಲ್ಲಿ, ಸಮಿತಿಯ ಅಧ್ಯಕ್ಷರು ಸದನದಲ್ಲಿ ವರದಿಯನ್ನು ಮಂಡಿಸುತ್ತಾರೆ ಮತ್ತು ನಂತರ ಅದರ ಮೇಲೆ ಚರ್ಚೆ ನಡೆಯಲಿದೆ. ಆನಂತರ ಸದಸ್ಯರ ಉಚ್ಚಾಟನೆಯ ಸರ್ಕಾರದ ನಿರ್ಣಯದ ಮೇಲೆ ಮತ ಚಲಾಯಿಸಲಾಗುವುದು. ಆಗ ಮಾತ್ರ ಮಹುವಾ ಮೊಯಿತ್ರಾ ಅವರ ಉಚ್ಚಾಟನೆ ಪರಿಣಾಮಕಾರಿಯಾಗಿರುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ