ಕೊವಿಡ್ ಪರೀಕ್ಷೆಯನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು; ಐಸಿಎಂಆರ್​ನಿಂದ ಬಿಡುಗಡೆಯಾಯ್ತು ಹೊಸ ಕಿಟ್

ಸ್ವತಃ ನಮಗೆ ನಾವೇ ಕೊವಿಡ್-19 ಪರೀಕ್ಷೆ ಮಾಡಿಕೊಳ್ಳಬಹುದಾದ ಕೊವಿಸೆಲ್ಫ್ ಎಂಬ ಕಿಟ್ ಒಂದನ್ನು ಐಸಿಎಂಆರ್ ಅನುಮೋದಿಸಿದೆ. ಈ ವಿಧಾನದ ಪರೀಕ್ಷೆಗೆ ಕೇವಲ ಮೂಗಿನ ದ್ರವ ಮಾತ್ರ ಅಗತ್ಯವಾಗಿದೆ.

ಕೊವಿಡ್ ಪರೀಕ್ಷೆಯನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು; ಐಸಿಎಂಆರ್​ನಿಂದ ಬಿಡುಗಡೆಯಾಯ್ತು ಹೊಸ ಕಿಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 21, 2021 | 10:09 AM

ದೆಹಲಿ: ಕೊವಿಡ್-19 ಪರೀಕ್ಷೆಯನ್ನು ನಮಗೆ ನಾವೇ ಮಾಡಿಕೊಳ್ಳಬಹುದು. ಯಾವುದೇ ವೈದ್ಯಕೀಯ ಸಿಬ್ಬಂದಿಯ ಇರುವಿಕೆಯ ಹೊರತಾಗಿ, ಕೊರೊನಾ ಪರೀಕ್ಷೆಯನ್ನು ನಾವೇ ಮಾಡಿಕೊಳ್ಳಬಹುದು. ಈ ನೂತನ ವ್ಯವಸ್ಥೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಇಂದು (ಮೇ 19) ಸೂಚನೆ ನೀಡಿದೆ. ನಮಗೆ ನಾವೇ ಕೊರೊನಾ ಪರೀಕ್ಷೆ ನಡೆಸುವುದು ಹೇಗೆ ಎಂಬ ಬಗ್ಗೆ ಸೂಚನೆ ನೀಡಿದ ಐಸಿಎಂಆರ್ ಕೊವಿಸೆಲ್ಫ್ ಎಂಬ ಕಿಟ್​ನ ಬಗ್ಗೆ ವಿವರಣೆ ನೀಡಿದೆ.

ಸ್ವತಃ ನಮಗೆ ನಾವೇ ಕೊವಿಡ್-19 ಪರೀಕ್ಷೆ ಮಾಡಿಕೊಳ್ಳಬಹುದಾದ ಕೊವಿಸೆಲ್ಫ್ ಎಂಬ ಕಿಟ್ ಒಂದನ್ನು ಐಸಿಎಂಆರ್ ಅನುಮೋದಿಸಿದೆ. ಈ ವಿಧಾನದ ಪರೀಕ್ಷೆಗೆ ಕೇವಲ ಮೂಗಿನ ದ್ರವ ಮಾತ್ರ ಅಗತ್ಯವಾಗಿದೆ. ಈ ವಿಧಾನದ ಮೂಲಕ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಕೊವಿಸೆಲ್ಫ್ ವಿಧಾನದ ಮೂಲಕ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ತಮಗೆ ತಾವೇ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. 2 ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಹಿರಿಯರ ಸಹಾಯದಿಂದ ಈ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.

ಈ ಕಿಟ್ ಲಭ್ಯವಿದೆ ಎಂದು ಎಲ್ಲರೂ ಬೇಕಾಬಿಟ್ಟಿ ಈ ವಿಧಾನ ಬಳಸುವಂತಿಲ್ಲ. ಬದಲಾಗಿ, ಯಾರಲ್ಲಿ ಕೊರೊನಾ ಲಕ್ಷಣ ಇದೆ ಮತ್ತು ಯಾರು ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆಯೋ ಅಂಥವರು ಈ ವಿಧಾನದ ಮೂಲಕ ಕೊರೊನಾ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಕೊವಿಸೆಲ್ಫ್ ಕಿಟ್​ನ್ನು ಬಳಸುವುದು ಹೇಗೆ? ಕೊವಿಸೆಲ್ಫ್ ಕಿಟ್​ನೊಂದಿಗೆ ಅದರ ಮೂಲಕ ಕೊರೊನಾ ಪರೀಕ್ಷೆ ನಡೆಸುವ ವಿಧಾನದ ವಿವರಣೆ ಇರುವ ಮ್ಯಾನುವಲ್ ಕೂಡ ಲಭ್ಯವಿರಲಿದೆ. ಹೆಚ್ಚುವರಿಯಾಗಿ ಐಸಿಎಮ್​ಆರ್, ಪರೀಕ್ಷೆ ನಡೆಸಬೇಕಾದ ವಿಧಾನದ ಹಂತವನ್ನು ವಿಡಿಯೋ ಮೂಲಕವೂ ವಿವರಿಸಿದೆ.

ಈ ಕಿಟ್​ನಲ್ಲಿ ಮೂಗಿನ ದ್ರವ ಸಂಗ್ರಹಿಸುವ ಉಪಕರಣ, ಎಕ್ಸ್​ಟ್ರಾಕ್ಷನ್ ಟ್ಯೂಬ್ ಮತ್ತು ಒಂದು ಟೆಸ್ಟ್ ಕಾರ್ಡ್ ಹೊಂದಿರುವ ಪೌಚ್ ಇರಲಿದೆ.

ಕೊವಿಸೆಲ್ಫ್ ಮೂಲಕ ಪರೀಕ್ಷೆ ನಡೆಸಲು, ಬಳಕೆದಾರರು ಮೈಲ್ಯಾಬ್ (mylab) ಅಪ್ಲಿಕೇಷನ್​ನ್ನು ತಮ್ಮ ಮೊಬೈಲ್​ನಲ್ಲಿ ಹೊಂದಿರಬೇಕಿದೆ. ಮೂಗಿನ ದ್ರವ ಪಡೆದು ಟ್ಯೂಬ್​ಗೆ ಅದನ್ನು ಹಾಕಬೇಕು. ಟ್ಯೂಬ್​ನಲ್ಲಿ ಮೂಗಿನ ದ್ರವ ಇಳಿದುಕೊಳ್ಳುವಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ; ಕೇಂದ್ರ ಆರೋಗ್ಯ ಇಲಾಖೆ ಸೂಚನೆ

Covid Vaccine Guidelines ಕೊವಿಡ್​ನಿಂದ ಚೇತರಿಸಿಕೊಂಡವರು ಮೂರು ತಿಂಗಳ ನಂತರ ಲಸಿಕೆ ತೆಗೆದುಕೊಂಡರೆ ಸಾಕು: ಕೇಂದ್ರ

Published On - 11:27 pm, Wed, 19 May 21