ಎಲ್ಗಾರ್ ಪರಿಷದ್ ಪ್ರಕರಣ: ಸ್ಟ್ಯಾನ್ ಸ್ವಾಮಿ ಮೆಡಿಕಲ್ ಚೆಕಪ್ ಮಾಡುವಂತೆ ಜೆಜೆ ಆಸ್ಪತ್ರೆಗೆ ಬಾಂಬೆ ಹೈಕೋಟ್ ನಿರ್ದೇಶನ
ಜೈಲಿನಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ, ದೈಹಿಕ ಅಂತರ ಕಾಯ್ದುಕೊಳ್ಳಲಾರದಷ್ಟು ತುಂಬಿರವ ಜೈಲು ಮತ್ತು ಸ್ವಾಮಿ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಹಿನ್ನೆಲೆಯಲ್ಲಿ ಅವರ ವಕೀಲರು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ಗೆ ಮನವಿ ಮಾಡಿದ್ದರಿಂದ ನ್ಯಾಯಾಲಯವು ಬುಧವಾರದಂದು ವಿಚಾರಣೆ ನಡೆಸಿತು.
ಮುಂಬೈ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸೆರೆವಾಸ ಅನುಭವಿಸುತ್ತಿರುವ 84 ವರ್ಷ ವಯಸ್ಸಿನ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ತಪಾಸಣೆಯನ್ನು ಜೆಜೆ ಆಸ್ಪತ್ರೆಯಲ್ಲಿ ಮಾಡಿಸುವಂತೆ ಬಾಂಬೆ ಹೈಕೋರ್ಟ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಒಬ್ಬ ನರರೋಗ ತಜ್ಞ, ಈಎನ್ಟಿ ಪರಿಣಿತ, ಮೂಳೆ ತಜ್ಞ, ಜನರಲ್ ಫಿಸಿಶಿಯನ್ ಮತ್ತು ಬೇರೆ ಯಾವುದೇ ವೈದ್ಯರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಅವರ ಮೂಲಕ ಗುರುವಾರದಂದು ಸ್ವಾಮಿ ಅವರ ಚೆಕಪ್ ಮಾಡಿಸಿ ಮೇ 21ರಂದು ತನಗೆ ವರದಿ ಸಲ್ಲಿಸುವಂತೆ ಕೋರ್ಟ್ ಜೆಜೆ ಆಸ್ಪತ್ರೆಯ ಡೀನ್ ಅವರಿಗೆ ನಿರ್ದೇಶಿಸಿದೆ.
ಅಕ್ಟೋಬರ್ 2020ರಲ್ಲಿ ಬಂಧನಕ್ಕೊಳಗಾದ ಸ್ವಾಮಿ ಅವರನ್ನು ಪ್ರಸ್ತುತವಾಗಿ ನವಿ ಮುಂಬೈಯಲ್ಲಿರುವ ತಲೋಜಾ ಜೈಲಿನಲ್ಲಿರಿಸಲಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿರುವ ಬಗ್ಗೆ ವರದಿಯಾಗಿದೆ. ನ್ಯಾಯಮೂರ್ತಿ ಎಸ್ಜೆ ಕಠಾವಾಲಾ ಮತ್ತು ನ್ಯಾಯಮೂರ್ತಿ ಎಸ್ ಪಿ ತಾವಡೆ ಅವರನ್ನೊಳಗೊಂಡ ರಜಾ ಪೀಠವು ವೈದ್ಯಕೀಯ ಆಧಾರದ ಮೇಲೆ ತಾನು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾ ಮಾಡಿರುವುದರ ವಿರುದ್ಧ ದಾಖಲಿಸಿರುವ ಮನವಿಯ ವಿಚಾರಣೆ ನಡೆಸಿತು.
ಜೈಲಿನಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ, ದೈಹಿಕ ಅಂತರ ಕಾಯ್ದುಕೊಳ್ಳಲಾರದಷ್ಟು ತುಂಬಿರವ ಜೈಲು ಮತ್ತು ಸ್ವಾಮಿ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಹಿನ್ನೆಲೆಯಲ್ಲಿ ಅವರ ವಕೀಲರು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ಗೆ ಮನವಿ ಮಾಡಿದ್ದರಿಂದ ನ್ಯಾಯಾಲಯವು ಬುಧವಾರದಂದು ವಿಚಾರಣೆ ನಡೆಸಿತು.
ಸ್ವಾಮಿ ಅವರ ಪರ ವಾದಿಸಿದ ಹಿರಿಯ ವಕೀಲ ಮಿಹಿರ್ ದೇಸಾಯಿ ಅವರು, ತನ್ನ ಕಕ್ಷಿದಾರ ಪಾರ್ಕಿನ್ಸನ್ ಕಾಯಿಲೆಯ ಮುಂದುವರೆದ ಹಂತದಲ್ಲಿದ್ದು, ಅವರಿಗೆ ಶ್ರವಣ ಸಮಸ್ಯೆ ಇದೆ ಮತ್ತು ತಾವಾಗಿಯೇ ಎದ್ದು ನಡೆದಾಡಲಾರರು ಎಂದು ಪೀಠಕ್ಕೆ ತಿಳಿಸಿದರು. ಜೈಲಿನಲ್ಲಿ ಕೊವಿಡ್-19 ಸೋಂಕು ಹಬ್ಬುತ್ತಿರುವುದರಿಂದ ಅವರನ್ನು ಅಲ್ಪಾವಧಿಗೆ ತಾತ್ಕಾಲಿಕ ವೈದ್ಯಕೀಯ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ದೇಸಾಯಿ ಮನವಿ ಮಾಡಿದರು.
ದೇಸಾಯಿ ಕೋರ್ಟಿಗೆ ತಿಳಿಸಿರುವ ಪ್ರಕಾರ ತಲೋಜಾ ಜೈಲಿನಲ್ಲಿ 26 ಮಂದಿಗೆ ಸೋಂಕು ತಗುಲಿದೆ ಮತ್ತು ಸ್ವಾಮಿ ಅವರೊಂದಿಗೆ ಸಹ-ಆರೋಪಿಯಾಗಿ ಇದೇ ಜೈಲಿನಲ್ಲಿರುವವ ಹನಿ ಬಾಬು ಸಹ ಸೋಂಕಿತರಾಗಿದ್ದಾರೆ.
ಆಧಿಕೃತವಾಗಿ ತಲೋಜಾ ಜೈಲಿನ ಸಾಮರ್ಥ್ಯ ಕೇವಲ 2,124 ಬಂಧಿಗಳನ್ನು ಇರಿಸುವಷ್ಟು ಮಾತ್ರ ಆಗಿದೆ ಮತ್ತು ಈ ಸಾಮರ್ಥ್ಯದ 2/3 ಭಾಗ ಅಂದರೆ 1,416 ಜನರನ್ನು ಅಲ್ಲಿ ಇರಿಸಿದರೆ ಮಾತ್ರ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ. ಅದರೆ ಪ್ರಸ್ತುತವಾಗಿ ಜೈಲಿನಲ್ಲಿ 3,251 ಬಂಧಿಗಳನ್ನು ಇರಿಸಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಮೇ 17 ರಂದು ಹೈಕೋರ್ಟಿನಲ್ಲಿ ದೇಸಾಯಿ ಅವರು ದಾಖಲಿಸಿರುವ ಟಿಪ್ಪಣಿಯೊಂದರ ಪ್ರಕಾರ ಸ್ವಾಮಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಹಾಗೂ ಅವರು ನಿಶ್ಶಕ್ತಿ ಮತ್ತು ಜ್ವರದಿಂದ ಬಳಳುತ್ತಿದ್ದಾರೆ. ತಲೋಜಾ ಜೈಲಿನಲ್ಲಿನ ಆಯುರ್ವೇದಿಕ್ ವೈದ್ಯರು ನೀಡುತ್ತಿರುವ ಅಲೋಪೆಥಿಕ್ ಔಷಧವನ್ನು ಅವರು ತೆಗೆದುಕೊಳ್ಳುತ್ತಿದ್ದಾರೆ. ಅವರನ್ನು ಅಲ್ಲೇ ಇರಿಸಿದರೆ ನಿಶ್ಚಿತವಾಗಿಯೂ ಕೊರೊನಾ ಸೋಂಕು ತಗುಲಲಿದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ದೇಸಾಯಿ ಅವರ ಮನವಿಯನ್ನು ವಿರೋಧಿಸಿದರು. ಮೇ 4ರಂದು ರಾಜ್ಯ ಸರ್ಕಾರಕ್ಕೆ ಸ್ವಾಮಿ ಅವರ ಆರೋಗ್ಯದ ಬಗ್ಗೆ ಒಂದು ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದ್ದ ಹೈಕೋರ್ಟ್, ಎನ್ಐಎಗೆ ಸ್ವಾಮಿ ಸಲ್ಲಿಸಿರುವ ಜಾಮಿನು ಮನವಿಗಳಿಗೆ ಉತ್ತರವನ್ನು ದಾಖಲಿಸುವಂತೆ ಹೇಳಿತ್ತು.
ತಲೋಜಾ ಜೈಲು ಅಧಿಕಾರಿಗಳು ಸ್ವಾಮಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರಿಗೆ ಹೆಚ್ಚು ಪೋಷಕಾಂಶವುಳ್ಳ ಆಹಾರ, ಸ್ನಾನಕ್ಕೆ ಬಿಸಿನೀರು, ಮತ್ತು ಇಬ್ಬರು ಸಹಾಯಕರನ್ನು ನೀಡಲಾಗಿದೆ ಎಂದು ಹೇಳಿದ್ದರು. ಅವರಿಗೆ ಹಾಸಿಗೆ , ಬೆಡ್ಶೀಟ್, ತಲೆದಿಂಬು, ವಾಕರ್, ವಾಕಿಂಗ್ ಸ್ಟಿಕ್, ಕಮೋಡ್ ಒದಗಿಸಲಾಗಿದ್ದು, ಮಾನಸಿಕ ತಜ್ಞರು ಅವರನ್ನು ನಿಯಮಿತವಾಗಿ ತಪಾಸಣೆ ಮಾಡುತ್ತಿದ್ದಾರೆ ಎಂದು ಜೈಲು ಅಧಿಕಾರಿಗಳು ಹೇಳಿದ್ದರು.
ಆದರೆ, ಅವರ ಹೇಳಿಕೆಗಳ ಸತ್ಯತೆಯನ್ನು ಪ್ರಶ್ನಿಸಿದ ಮಿಹಿರ್ ದೇಸಾಯಿ, ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಸ್ವಾಮಿ ಅವರಿಗಿರುವ ಹೊಟ್ಟೆನೋವು ಮತ್ತು ಸ್ಪಾಂಡಿಲೈಟಿಸ್ ಬಗ್ಗೆ ಉಲ್ಲೇಖವೇ ಇಲ್ಲವೆಂದು ಹೇಳಿದರು.
ಎರಡೂ ಪಕ್ಷಗಳ ವಾದಗಳಲ್ಲಿನ ಹುರುಳನ್ನು ಅರ್ಥ ಮಾಡಿಕೊಳ್ಳಲು ಹೈಕೋರ್ಟ್ ಸ್ವಾಮಿ ಅವರು ಆರೋಗ್ಯ ತಪಾಸಣೆ ಮಾಡಿ ಶುಕ್ರವಾರ ಬೆಳಗ್ಗೆ 11 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಹೇಳಿದೆ.
‘ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡುವ ಸೌಲಭ್ಯವಿದ್ದರೆ ಸ್ವಾಮಿಯವರನ್ನು ಮೇ 21 ರಂದು ಕೋರ್ಟಿನ ಮುಂದೆ ಹಾಜರುಪಡಿಸಿ,’ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಬಂಧಿತ ಆರೋಪಿ ರೋನಾ ವಿಲ್ಸನ್ ಲ್ಯಾಪ್ಟಾಪ್ ಹ್ಯಾಕ್ ಮಾಡಿಲ್ಲ ಎಂದ ಎನ್ಐಎ
Published On - 12:09 am, Thu, 20 May 21