‘ಅಲ್ಲಿಂದ ಗುಂಡು ಹಾರಿಸಿದ್ರೆ, ಇಲ್ಲಿಂದಲೂ ಗುಂಡು ಸಿಡಿಯುತ್ತೆ’:ಎಚ್ಚರಿಕೆ ಸಂದೇಶ ರವಾನಿಸಿದ ಮೋದಿ

ಭಾರತದ ಆಪರೇಷನ್ ಸಿಂಧೂರಕ್ಕೆ ಪ್ರತಿದಾಳಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನ ದಿಢೀರ್ ಮಂಡಿಯೂರಿದೆ. ಭಾರತದ ದಾಳಿ ಇಲ್ಲಿಗೆ ನಿಲ್ಲಿಸುವಂತೆ ಪಾಕಿಸ್ತಾನ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮೊರೆ ಹೋಗಿದ್ದು, ಬಳಿಕ ಟ್ರಂಪ್ ಮಧ್ಯೆಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆ ಮಾಡಲಾಯ್ತು. ಆದರೂ ಪಾಕ್​ ಕೆಲವೇ ಗಂಟೆಗಳಲ್ಲಿ ಮತ್ತೆ ಭಾರತದ ಮೇಲೆ ಡ್ರೋನ್ ದಾಳಿ ಮಾಡಿ ತನ್ನ ನರಿ ಬುದ್ಧಿ ತೋರಿಸಿದೆ. ಇದರಿಂದ ರೊಚ್ಚಿಗೆದ್ದಿರುವ ಮೋದಿ ಅಮೆರಿಕಾ ಉಪಾಧ್ಯಕ್ಷರಿಗೆ ಕರೆ ಮಾಡಿ ಖಡಕ್ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

‘ಅಲ್ಲಿಂದ ಗುಂಡು ಹಾರಿಸಿದ್ರೆ, ಇಲ್ಲಿಂದಲೂ ಗುಂಡು ಸಿಡಿಯುತ್ತೆ’:ಎಚ್ಚರಿಕೆ ಸಂದೇಶ ರವಾನಿಸಿದ ಮೋದಿ
Jd Vance And Narendra Modi

Updated on: May 11, 2025 | 6:46 PM

ನವದೆಹಲಿ, (ಮೇ 11): ಆಪರೇಷನ್ ಸಿಂಧೂರ್(Operation Sindoor) ಮುಂದುವರೆದಿದೆ ಎಂದು ಭಾರತೀಯ ವಾಯುಪಡೆ(ಐಎಎಫ್​) ಖಚಿತಪಡಿಸುತ್ತಿದ್ದಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ (Narednra Modi) ಸಹ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪಾಕಿಸ್ತಾನ ಮತ್ತೆ ದಾಳಿ ನಡೆಸಿದ್ರೆ ತಕ್ಕ ತಿರುಗೇಟು ನೀಡುತ್ತೇವೆ ಎಂದು ಮೋದಿ, ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್​ಗೆ ತಿಳಿಸಿದ್ದಾರೆ. ಪಾಕ್ ಕದನ ವಿರಾಮ ಉಲ್ಲಂಘಿಸಿದ ಬಳಿಕ ಮೋದಿ, ಅಮೆರಿಕದ ಉಪಾಧ್ಯಕ್ಷರ  ಜೊತೆ ಫೋನ್ ಮೂಲಕ ಮಾತುಕತೆ ನಡೆಸಿದ್ದು, ಒಂದು ವೇಳೆ ಅಲ್ಲಿಂದ (ಪಾಕಿಸ್ತಾನ) ಗುಂಡು ಹಾರಿಸಿದ್ರೆ, ಇಲ್ಲಿಂದಲೂ (ಭಾರತ) ಗುಂಡು ಸಿಡಿಯುತ್ತೆ. ಯಾರ ಮಧ್ಯಸ್ಥಿಕೆ ಕೂಡ ನಮಗೆ ಬೇಕಾಗಿಲ್ಲ ಎಂದು  ಸ್ಪಷ್ಟ ಸಂದೇಶ ನೀಡಿದ್ದಾರೆ.

ಅಮೆರಿಕ ಉಪಾಧ್ಯಕ್ಷರ ಜೊತೆ ಏನೇನು ಮಾತನಾಡಿದ್ದಾರೆ ಎನ್ನುವ ಮಾಹಿತಿ ಟಿವಿ9ಗೆ ಕೇಂದ್ರ ಸರ್ಕಾರದ ಉನ್ನತ ಮೂಲಗಳಿಂದ ತಿಳಿಬಂದಿದ್ದು. ಕಾಶ್ಮೀರದ ಬಗ್ಗೆ ಭಾರತ ಸ್ಪಷ್ಟವಾದ ನಿಲುವನ್ನು ಹೊಂದಿದೆ. ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆದುಕೊಳ್ಳುವುದೇ ಈಗ ಉಳಿದಿರುವ ಒಂದೇ ವಿಷಯ. ಈಗ ಮಾತನಾಡಲು ಬೇರೆ ಏನು ಉಳಿದಿಲ್ಲ. ಪಾಕಿಸ್ತಾನ ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದ್ರೆ ನಾವು ಸಹ ಮಾತನಾಡಬಹುದು. ನಮಗೆ ಬೇರೆ ಯಾವುದೇ ವಿಷಯದ ಉದ್ದೇಶವಿಲ್ಲ. ನಾವು ಯಾರ ಮಧ್ಯಸ್ಥಿಕೆಯನ್ನು ಬಯಸಲ್ಲ ಮತ್ತು ಭಾರತಕ್ಕೆ ಅದರ ಅಗತ್ಯವು ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಇದನ್ನೂ ಓದಿ
ಆಪರೇಷನ್ ಸಿಂದೂರ: ಭಾರತ ಸಾಧಿಸಿದ್ದೇನು?
ಅಮೆರಿಕದ ಮಧ್ಯಪ್ರವೇಶ ಭಾರತಕ್ಕೆ ಇಷ್ಟವಾಗಲಿಲ್ಲವಾ?
ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಐಎಎಫ್
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ

ಇದನ್ನೂ ಓದಿ: Operation Sindoor: ಪಿಕ್ಚರ್ ಅಭಿ ಬಾಕಿ ಹೈ.. ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಐಎಎಫ್

ಉಗ್ರರನ್ನ ಪಾಕ್​ ನಮಗೆ ಹಸ್ತಾಂತರ ಮಾಡಬೇಕು. ಅದರ ಬಗ್ಗೆ ಮಾತಾಡಲು ಸಿದ್ಧರಿದ್ದರೆ ಚರ್ಚೆಗೆ ರೆಡಿ. ಅದು ಬಿಟ್ಟರೆ ಮಾತನಾಡಲು ಬೇರೇನೂ ಉಳಿದಿಲ್ಲ. ಕಾಶ್ಮೀರ ವಿವಾದ ಬಗೆಹರಿಸಲು ಯಾರ ಮಧ್ಯಸ್ಥಿಕೆ ಬೇಡ. ಯಾರ ಮಧ್ಯಸ್ಥಿಕೆ ಕೂಡ ನಮಗೆ ಬೇಕಾಗಿಲ್ಲ ಎಂದು ಪ್ರಧಾನಿ ಮೋದಿ, ಫೋನ್​ ಮೂಲಕ ಜೆ.ಡಿ.ವ್ಯಾನ್ಸ್​ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಭಯೋತ್ಪಾದನೆ ವಿರುದ್ಧ ಭಾರತ ರಾಜಿಯಾಗುವುದಿಲ್ಲ. ಪಾಕಿಸ್ತಾನ ದಾಳಿ ಮಾಡಿದ್ರೆ ಭಾರತ ಪ್ರತಿದಾಳಿ ಮಾಡುತ್ತದೆ ಎಂದು ನರೇಂದ್ರ ಮೋದಿ, ಜೆ.ಡಿ.ವ್ಯಾನ್ಸ್ ಮೂಲಕ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.