
ಮುಂಬೈ, ಸೆಪ್ಟೆಂಬರ್ 21: ಐಐಟಿ ಬಾಂಬೆಯ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಪರೀಕ್ಷೆ ವೇಳೆ ಚಾಟ್‌ಜಿಪಿಟಿ ಬಳಸುತ್ತಿದ್ದಾಗ ಸಿಕ್ಕಿಬಿದ್ದು, ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ತೀವ್ರ ಆಕ್ರೋಶದ ನಡುವೆಯೇ, ಈ ಪ್ರಕರಣದ ಕೇಂದ್ರಬಿಂದುವಾಗಿರುವ ಪ್ರೊಫೆಸರ್ ಸೂರ್ಯನಾರಾಯಣ ದುಲ್ಲಾ ಅವರಿಗೆ ಐಐಟಿ ಬಾಂಬೆ ಬೋಧಕರ ವೇದಿಕೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇಂದು ಐಐಟಿ ಬಾಂಬೆ ಫ್ಯಾಕಲ್ಟಿ ಫೋರಂ ಕ್ಯಾಂಪಸ್ ಒಳಗೆ ಬೃಹತ್ ಮೆರವಣಿಗೆ ನಡೆಸಿತು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಸಾಹಿಲ್ ವಾಕೋಡೆ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿರುವ ಪ್ರೊ. ದುಲ್ಲಾ ಅವರ ಬೆಂಬಲಾರ್ಥವಾಗಿ ನಡೆದ ಈ ಮೆರವಣಿಗೆಯಲ್ಲಿ ಸಂಸ್ಥೆಯ ಸುಮಾರು 750 ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.
ಏನಿದು ಘಟನೆ?:
ಸೆಪ್ಟೆಂಬರ್ 18ರಂದು ಪರೀಕ್ಷೆಯೊಂದರಲ್ಲಿ ಚಾಟ್‌ಜಿಪಿಟಿ ಬಳಸುತ್ತಿದ್ದಾಗ ಸಿಕ್ಕಿಬಿದ್ದ ಕೆಲವು ಗಂಟೆಗಳ ನಂತರ ಸಾಹಿಲ್ ವಾಕೋಡೆ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದನು. ಮುಂಬೈ ಪೊಲೀಸರು ಶನಿವಾರ ರಾತ್ರಿ ಈ ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಿದ್ದು, ತನಿಖೆಯ ಭಾಗವಾಗಿ ಪ್ರೊಫೆಸರ್ ಸೇರಿದಂತೆ ಇತರರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
IIT Bombay faculty hold a solidarity march in support of Prof. Suryanarayana Doolla. #IIT #IITBombayProtest pic.twitter.com/dmStdftBm6
— Deepak Singh (@SinghDeepakUP) September 21, 2026
ಮೃತ ವಿದ್ಯಾರ್ಥಿಯ ಪೋಷಕರು ಕ್ಯಾಂಪಸ್ ಆಡಳಿತ ಮಂಡಳಿಯಿಂದ ಕಿರುಕುಳ ಮತ್ತು ಜಾತಿ ಆಧಾರಿತ ತಾರತಮ್ಯ ನಡೆದಿದೆ ಎಂದು ಆರೋಪಿಸಿ ನೀಡಿದ ದೂರಿನ ಆಧಾರದ ಮೇಲೆ ಪ್ರೊ. ದೂಳ್ಳಾ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ. ಐಐಟಿ ಬಾಂಬೆಯ ಎನರ್ಜಿ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಮೃತ ವಿದ್ಯಾರ್ಥಿಯು, ಶುಕ್ರವಾರ ಸಂಜೆ ಕ್ಯಾಂಪಸ್‌ನಲ್ಲಿ ನಡೆದ ಪರೀಕ್ಷೆಗೆ ಸಂಬಂಧಿಸಿದ ಘಟನೆಯ ಕೆಲವೇ ಗಂಟೆಗಳ ನಂತರ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದನು. ಈ ಘಟನೆಯ ನಂತರ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರೊ. ಸೂರ್ಯನಾರಾಯಣ ದುಲ್ಲಾ ಅವರನ್ನು ಬೆಂಬಲಿಸಿ ಬೋಧಕ ವೃಂದದಿಂದ ಈ ಮೆರವಣಿಗೆ ನಡೆದಿದೆ.
ಇದನ್ನೂ ಓದಿ: ವಿದ್ಯಾರ್ಥಿ ಆತ್ಮಹತ್ಯೆ, ಐಐಟಿ ಬಾಂಬೆ ಡೀನ್ ಪ್ರೊ. ಸೂರ್ಯನಾರಾಯಣ್ ಅಮಾನತು, ಹೇಳಿಕೆಗೆ ಕ್ಷಮೆ ಕೋರಿದ ಆಡಳಿತ
ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೋಧಕರ ವೇದಿಕೆಯು, ಪ್ರೊ. ದುಲ್ಲಾ ಅವರನ್ನು ಐಐಟಿ ಬಾಂಬೆಯಿಂದ ಅಮಾನತುಗೊಳಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದೆ ಮತ್ತು ಅವರನ್ನು ಸಮರ್ಥಿಸಿಕೊಂಡಿದೆ. “ಐಐಟಿ ಬಾಂಬೆಯ ಬೋಧಕರ ವೇದಿಕೆಯು ನಮ್ಮ ಸಹೋದ್ಯೋಗಿ ಪ್ರೊ. ಸೂರ್ಯನಾರಾಯಣ ದುಲ್ಲಾ ಅವರೊಂದಿಗೆ ಬಲವಾಗಿ ನಿಲ್ಲುತ್ತದೆ. ನಾವು ಈ ಕೆಳಗಿನ ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇವೆ. ಮಾಧ್ಯಮಗಳಲ್ಲಿ ಬಂದಿರುವ ಹಲವು ವರದಿಗಳಂತೆ ಪ್ರೊ. ಸೂರ್ಯನಾರಾಯಣ ದುಲ್ಲಾ ಅವರನ್ನು ಐಐಟಿ ಬಾಂಬೆಯ ಸೇವೆಯಿಂದ ಅಮಾನತುಗೊಳಿಸಿಲ್ಲ. ಅವರು ಸಂಸ್ಥೆಯ ಗೌರವಾನ್ವಿತ ಬೋಧಕ ಸದಸ್ಯರಾಗಿ ಮುಂದುವರಿಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
STORY | IIT Bombay student suicide: Faculty Forum comes out in support Prof Doolla, rues ‘vilification’
The Faculty Forum of IIT Bombay on Monday said it “stands strongly” with Prof Suryanarayana Doolla, who was removed from the post of Dean (Administrative Affairs) with… pic.twitter.com/DTPweHKsng
— Press Trust of India (@PTI_News) September 21, 2026
ಸೆಪ್ಟೆಂಬರ್ 18ರಂದು ನಡೆದ ದುರದೃಷ್ಟಕರ ಘಟನೆಯ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ಅವರನ್ನು ಸಂಸ್ಥೆಯ ‘ಆಡಳಿತಾತ್ಮಕ ವ್ಯವಹಾರಗಳ ಡೀನ್’ ಹುದ್ದೆಯ ಕರ್ತವ್ಯಗಳಿಂದ ತಾತ್ಕಾಲಿಕವಾಗಿ ಮುಕ್ತಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರೊ. ದುಲ್ಲಾ ಅವರನ್ನು ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ನೀಡಲಾಗುವ ‘ಬೋಧನಾ ಶ್ರೇಷ್ಠತಾ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದ ಅತ್ಯಂತ ಗೌರವಾನ್ವಿತ ಬೋಧಕರೆಂದು ಬೋಧಕರ ಒಕ್ಕೂಟ ಬಣ್ಣಿಸಿದೆ. ಜೊತೆಗೆ ‘ವಿದ್ಯಾರ್ಥಿ ವ್ಯವಹಾರಗಳ ಡೀನ್’ ಆಗಿ ಅವರು ವಿದ್ಯಾರ್ಥಿಗಳ ಕಲ್ಯಾಣಕ್ಕೆ ನೀಡಿದ ಕೊಡುಗೆಗಳನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. “ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುಳ್ಳು ಮತ್ತು ದಾರಿ ತಪ್ಪಿಸುವ ವರದಿಗಳಿಂದ ನಮ್ಮ ಸಹೋದ್ಯೋಗಿಯ ಗೌರವಕ್ಕೆ ಕಳಂಕ ತಂದಿರುವುದು ನಮಗೆ ತೀವ್ರ ನೋವು ಉಂಟುಮಾಡಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ