NHAI: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಮಿಳುನಾಡು ಸಹಕಾರ ನೀಡುತ್ತಿಲ್ಲ ಎಂಬುದು ಸರಿಯಲ್ಲ; ಗಡ್ಕರಿಗೆ ಸ್ಟಾಲಿನ್
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಮಿಳುನಾಡು ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಸತ್ತಿಗೆ ನೀಡಿದ ಲಿಖಿತ ಉತ್ತರಲ್ಲಿ ಉಲ್ಲೇಖಿಸಿದ್ದು ದುರದೃಷ್ಟಕರ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.
ಚೆನ್ನೈ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ತಮಿಳುನಾಡು (Tamil Nadu) ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸಂಸತ್ತಿಗೆ ನೀಡಿದ ಲಿಖಿತ ಉತ್ತರಲ್ಲಿ ಉಲ್ಲೇಖಿಸಿದ್ದು ದುರದೃಷ್ಟಕರ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. ಗಡ್ಕರಿ ನೀಡಿರುವ ಮಾಹಿತಿ ಸತ್ಯವಲ್ಲ ಎಂದು ಅವರು ಕೇಂದ್ರ ಸರ್ಕಾರಕ್ಕೆ ಶನಿವಾರ ಪತ್ರ ಬರೆದಿದ್ದಾರೆ. ಚೆನ್ನೈಯಿಂದ ರಾಣಿಪೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು (ಎನ್ಎಚ್ 4) ವಿಸ್ತರಣೆ ಮಾಡಬೇಕು ಎಂಬ ಬಗ್ಗೆ ಲೋಕಸಭೆಯಲ್ಲಿ ಸಂಸದ ದಯಾನಿಧಿ ಮಾರನ್ ಇತ್ತೀಚೆಗೆ ಪ್ರಸ್ತಾಪಿಸಿದ್ದರು. ಅದಕ್ಕೆ ಗಡ್ಕರಿ ಉತ್ತರ ನೀಡಿದ್ದರು.
ರಾಷ್ಟ್ರೀಯ ಹೆದ್ದಾರಿಯು (ಎನ್ಎಚ್ 4) ಚೆನ್ನೈ ನಗರದಿಂದ ಕಂಚಿಪುರಂ, ವೆಲ್ಲೋರ್, ರಾಣಿಪೇಟ್, ಹೊಸೂರು ಹಾಗೂ ಕೃಷ್ಣಗಿರಿಯನ್ನು ಸಂಪರ್ಕಿಸುವಲ್ಲಿ ಬಹು ಮುಖ್ಯವಾದದ್ದಾಗಿದೆ. ರಸ್ತೆಯ ಸ್ಥಿತಿ ತುಂಬಾ ಕೆಟ್ಟಾಗಿದೆ. ಪರಿಣಾಮವಾಗಿ ಇತ್ತಿಚೆಗೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡುವಾಗ ರೈಲಿನ ಮೂಲಕ ಪ್ರಯಾಣಿಸಿದ್ದೆ. ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ವಿಚಾರವಾಗಿ ನಿಮ್ಮ ಉತ್ತರದಿಂದ ನಿರಾಶರಾಗಿದ್ದೇವೆ ಎಂದು ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Narendra Modi: ಯೋಗದೊಂದಿಗೆ ಸಂಯೋಗದಿಂದ ಫಿಸಿಯೋಥೆರಪಿಯ ಶಕ್ತಿ ಹೆಚ್ಚಿದೆ; ಪ್ರಧಾನಿ ಮೋದಿ
ತಮಿಳುನಾಡು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಉಲ್ಲೇಖಿಸಿರುವ ಸ್ಟಾಲಿನ್, ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ತಮಿಳುನಾಡು ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಬಿಂಬಿಸಲಾಗುತ್ತಿರುವುದು ದುರದೃಷ್ಟಕರ ಎಂದು ಉಲ್ಲೇಖಿಸಿದ್ದಾರೆ. ಕೇಂದ್ರ ಸಚಿವರು ನೀಡಿರುವ ಉತ್ತರ ನಿಜವಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡ ಯೋಜನೆಗಳ ನಡುವೆ ತಾರತಮ್ಯ ಮಾಡದೆ ಎಲ್ಲಾ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚೆನ್ನೈ ಪೋರ್ಟ್ನಿಂದ ಮದುರವೋಯಲ್ ಎಲಿವೇಟೆಡ್ ಎಕ್ಸ್ಪ್ರೆಸ್ ವೇ ಯೋಜನೆ ಬಗ್ಗೆ ಪರಾಮರ್ಶೆ ನಡೆಸಲಾಗಿದ್ದು, ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದೂ ಅವರು ಕೇಂದ್ರಕ್ಕೆ ಭರವಸೆ ನೀಡಿದ್ದಾರೆ. ನಮ್ಮ ಸಂಸದರು ಮಾಡಿರುವ ನಿರ್ದಿಷ್ಟ ವಿನಂತಿಯನ್ನು ಪರಿಶೀಲಿಸಲು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಗಡ್ಕರಿಗೆ ಸ್ಟಾಲಿನ್ ಮನವಿ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ