
ನವದೆಹಲಿ, ಆಗಸ್ಟ್ 13: 2026ರ ಆಗಸ್ಟ್ 15ರಂದು ನಡೆಯಲಿರುವ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯು ಈ ಬಾರಿ ಹಲವು ಐತಿಹಾಸಿಕ ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೇಳಿಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಲಿದ್ದು, ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಷ್ಟ್ರೀಯ ಗೀತೆಯ 150 ವರ್ಷಗಳ ಸಂಭ್ರಮವನ್ನು ದೇಶ ಆಚರಿಸುತ್ತಿರುವ ಹಿನ್ನೆಲೆ, ಕೆಂಪುಕೋಟೆಯಲ್ಲಿ ನಡೆಯುವ ಮುಖ್ಯ ಸಮಾರಂಭದಲ್ಲಿ ಮೊದಲ ಬಾರಿಗೆ ‘ವಂದೇ ಮಾತರಂ’ ಗಾಯನ ನಡೆಯಲಿದೆ.
ಸ್ವಾತಂತ್ರ್ಯದ ಬಳಿಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 1947ರ ಆಗಸ್ಟ್ 16ರಂದು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು. ನಂತರ ಪ್ರಧಾನಿ ಧ್ವಜಾರೋಹಣ ಹಾಗೂ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಸಂಪ್ರದಾಯ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಭಾಗವಾಗಿದೆ.
ಇದನ್ನೂ ಓದಿ: ಇವರೇ ನೋಡಿ ತಿರಂಗಾದ ರೂವಾರಿ ಪಿಂಗಳಿ ವೆಂಕಯ್ಯ; ಇಲ್ಲಿದೆ ತ್ರಿವರ್ಣ ಧ್ವಜ ಹುಟ್ಟಿದ ಕಥೆ
ಈ ಬಾರಿಯ ಆಚರಣೆಯು ‘150 ವರ್ಷಗಳ ವಂದೇ ಮಾತರಂ’ ಹಾಗೂ ‘ವಿಕಸಿತ ಭಾರತಕ್ಕಾಗಿ ಯುವಶಕ್ತಿ’ ಎಂಬ ಎರಡು ಪ್ರಮುಖ ವಿಷಯಗಳನ್ನು ಕೇಂದ್ರಬಿಂದುವಾಗಿಟ್ಟುಕೊಳ್ಳಲಾಗಿದೆ. ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಪ್ರದರ್ಶನಗಳು, ಯುವಜನರ ಪಾಲ್ಗೊಳ್ಳುವಿಕೆ, ಪುಷ್ಪಾಲಂಕಾರ ಮತ್ತು ದೇಶಭಕ್ತಿಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
2026ರ ಸ್ವಾತಂತ್ರ್ಯ ದಿನಾಚರಣೆಯ ಮತ್ತೊಂದು ಪ್ರಮುಖ ಅಂಶ ‘ಯುವಶಕ್ತಿ’ ಆಗಿದೆ. 2047ರಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಲಿರುವ ಹಿನ್ನೆಲೆಯಲ್ಲಿ, ದೇಶದ ಅಭಿವೃದ್ಧಿಯಲ್ಲಿ ಯುವಜನರ ಕೊಡುಗೆಯನ್ನು ಸರ್ಕಾರ ವಿಶೇಷವಾಗಿ ಗುರುತಿಸುತ್ತಿದೆ. ವಿಜ್ಞಾನ, ನಾವೀನ್ಯತೆ, ಶಿಕ್ಷಣ, ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಸ್ವಯಂಸೇವಾ ಕಾರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವಕರಿಗೆ ಗೌರವ ಸಲ್ಲಿಸಲಾಗುತ್ತದೆ.
ಈ ಬಾರಿಯ ಸಮಾರಂಭಕ್ಕೆ 2026ರ ಅಂತರರಾಷ್ಟ್ರೀಯ ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಒಲಿಂಪಿಯಾಡ್‌ನಲ್ಲಿ ಪದಕ ಗೆದ್ದ 19 ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಇದಲ್ಲದೆ, ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು 5,000 ವಿಶೇಷ ಅತಿಥಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ನಾವೀನ್ಯತೆಯ ಸಾಧಕರು, ಉದ್ಯಮಿಗಳು, ವಿಜ್ಞಾನಿಗಳು, ಕಾರ್ಮಿಕರು, ಸ್ವಯಂಸೇವಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.