
ನವದೆಹಲಿ, ಅಕ್ಟೋಬರ್ 14: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಹಾಗೂ ಮತ ಕಳ್ಳತನ ಆರೋಪಗಳ ಕುರಿತು ಸೋಮವಾರ ದೆಹಲಿ ಬೀದಿಗಳಲ್ಲಿ ನಡೆಸಿದ ಬೃಹತ್ ಶಕ್ತಿ ಪ್ರದರ್ಶನದ ನಂತರ, ‘ಇಂಡಿ’ ಮೈತ್ರಿಕೂಟದ ಸಂಸದರು ಮಂಗಳವಾರ ಸಂಜೆ ನವದೆಹಲಿಯ ಸುನಹರಿ ಬಾಗ್ ರಸ್ತೆಯಲ್ಲಿರುವ ರಾಹುಲ್ ಗಾಂಧಿ ಅವರ ಅಧಿಕೃತ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರು. ಸೋಮವಾರದ ಸುಪ್ರೀಂ ಕೋರ್ಟ್ ಮಾರ್ಚ್ ಯಶಸ್ಸಿನ ಬಳಿಕ ಸಂಸದರಲ್ಲಿ ಉತ್ಸಾಹ ಹೆಚ್ಚಾಗಿದ್ದು, ಮುಂದಿನ ಹಂತದ ಕಾರ್ಯತಂತ್ರಗಳನ್ನು ರೂಪಿಸಲು ಈ ಸಭೆ ವೇದಿಕೆಯಾಯಿತು.
ಇತ್ತೀಚಿನ ಸಭೆಗಳಿಗೆ ಗೈರಾಗಿದ್ದ ಕಾರಣಕ್ಕಾಗಿ ಅಪಸ್ವರ ಎದುರಿಸುತ್ತಿದ್ದ ಸಮಾಜವಾದಿ ಪಕ್ಷದ (SP) 22 ಸಂಸದರು ಹಾಗೂ ಉದ್ಧವ್ ಠಾಕ್ರೆ ಬಣದ ಶಿವಸೇನಾ (UBT) ಸಂಸದರು ಈ ಸಭೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಜರಾಗಿ ಮೈತ್ರಿಕೂಟದ ಐಕ್ಯತೆಯನ್ನು ಪ್ರದರ್ಶಿಸಿದರು. ಸಭೆಯಲ್ಲಿ ಸುಮಾರು 40 ದುಂಡುಮೇಜುಗಳ ವ್ಯವಸ್ಥೆ ಮಾಡಲಾಗಿತ್ತು. ಒಂದೇ ಪಕ್ಷದ ನಾಯಕರು ಒಂದೆಡೆ ಕೂರುವ ಬದಲು, ವಿವಿಧ ರಾಜ್ಯಗಳ ಹಾಗೂ ಪಕ್ಷಗಳ ನಾಯಕರನ್ನು ಒಟ್ಟಿಗೆ ಕೂರಿಸಿ ಸಮಾಲೋಚನೆ ನಡೆಸುವಂತೆ ಯೋಜಿಸಲಾಗಿತ್ತು.
ಹಬ್ಬಗಳ ಹಿನ್ನೆಲೆ ತಾತ್ಕಾಲಿಕ ವಿರಾಮ: ದುರ್ಗಾಪೂಜೆ, ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸರಣಿ ಇರುವುದರಿಂದ, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಮುಂದಿನ ಕೆಲ ದಿನಗಳವರೆಗೆ ಯಾವುದೇ ಬೀದಿಗಿಳಿದ ಧರಣಿ ಅಥವಾ ಮೆರವಣಿಗೆಗಳನ್ನು ನಡೆಸದಿರಲು ನಿರ್ಧರಿಸಲಾಯಿತು. ಹಬ್ಬಗಳ ಮುಕ್ತಾಯದ ನಂತರವೇ ಹೊಸ ಆಂದೋಲನ ಶುರುವಾಗಲಿದೆ.
ಮತ್ತಷ್ಟು ಓದಿ:
ಪ್ರತಿಭಟನೆ ವೇಳೆ ಗರ್ಭಿಣಿ ಪತ್ರಕರ್ತೆಯ ತಳ್ಳಿದ ರಾಹುಲ್ ಗಾಂಧಿ, ಆಸ್ಪತ್ರೆಗೆ ದಾಖಲು
ಸಿಜೆಪಿ ಮತ್ತು ಎಎಪಿಯಿಂದ ಅಂತರ: ಜಂತರ್ ಮಂತರ್ನಲ್ಲಿ ಗಲಾಟೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಚಟುವಟಿಕೆಗಳಿಂದ ಇಂಡಿ ಬ್ಲಾಕ್ ಅಧಿಕೃತವಾಗಿ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿತು. ಇದರ ಜೊತೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (AAP) ಮೈತ್ರಿಕೂಟದ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿರುವ ಬಗ್ಗೆಯೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಉತ್ತರ ಪ್ರದೇಶದಲ್ಲಿ ನಗೀನಾ ಸಂಸದ ಹಾಗೂ ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಮೈತ್ರಿಕೂಟದ ಒಳಗೆ ಸೇರಿಸಿಕೊಳ್ಳುವುದಕ್ಕೆ ಸಮಾಜವಾದಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ದೆಹಲಿ ಪೊಲೀಸರು ಜಂತರ್ ಮಂತರ್ನಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿ, ದುಬಾರಿ ಬಾಡಿಗೆಯ ರಾಮಲೀಲಾ ಮೈದಾನ ಸೇರಿದಂತೆ 3 ಪರ್ಯಾಯ ಸ್ಥಳಗಳನ್ನು ನಿಗದಿಪಡಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಹಾಗೂ ರಾಜಕೀಯವಾಗಿ ಎದುರಿಸಲು ನಾಯಕರು ಒಮ್ಮತದ ನಿರ್ಧಾರ ಕೈಗೊಂಡರು.
ಎಡಪಂಥೀಯ ನಾಯಕಿ ನೇಹಾ ಬೋರಾ ಪ್ರಭಾವ ಮತ್ತು ರಾಜಕೀಯ ಊಹಾಪೋಹ
ಸಭೆಯಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ನಾಯಕಿ ನೇಹಾ ಬೋರಾ ಅವರ ಉಪಸ್ಥಿತಿ ತೀವ್ರ ಗಮನ ಸೆಳೆಯಿತು. ಸೋಮವಾರದ ಪ್ರತಿಭಟನೆಯಲ್ಲಿ ಟ್ರಕ್ ಮೇಲೆ ಪ್ರಿಯಾಂಕಾ ಗಾಂಧಿ ಪಕ್ಕದಲ್ಲೇ ನಿಂತು ಗಮನ ಸೆಳೆದಿದ್ದ ನೇಹಾ ಬೋರಾ ಅವರಿಗೆ, ಹೈ ಟೀ ಸಭೆಯಲ್ಲೂ ವಿಶೇಷ ಪ್ರಾಮುಖ್ಯತೆ ನೀಡಲಾಯಿತು.
ಮಾಜಿ ಜೆಎನ್ಯು ನಾಯಕ ಕನ್ಹಯ್ಯಾ ಕುಮಾರ್ ಸಿಪಿಐ ತೊರೆದು ಕಾಂಗ್ರೆಸ್ ಸೇರಿದ ಮಾದರಿಯಲ್ಲೇ, ಪ್ರಭಾವಿ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಕೂಡ ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂಬ ರಾಜಕೀಯ ಊಹಾಪೋಹಗಳು ಈ ಸಭೆಯ ಬೆನ್ನಲ್ಲೇ ಬಲವಾಗಿ ಕೇಳಿಬರುತ್ತಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ