Galwan Valley Clash: ಚೀನಾ ಸೈನಿಕರ ಕ್ರೌರ್ಯಕ್ಕೆ ಸಾಕ್ಷಿಯಾದ ಗಾಲ್ವಾನ್​ ಸಂಘರ್ಷಕ್ಕೆ ಒಂದು ವರ್ಷ; ಎಲ್​ಎಸಿಯಲ್ಲಿ ಇಂದಿಗೂ ಹೈ ಅಲರ್ಟ್​

2020ರ ಜೂ.15ರಂದು ಗಲ್ವಾನ್​ ಕಣಿವೆಯ ಪರ್ವತ ಪ್ರದೇಶದ ಕಡಿದಾದ ಭಾಗವಾದ ಪೆಟ್ರೋಲಿಂಗ್​ ಪಾಯಿಂಟ್​ 14ರಲ್ಲಿ ಚೀನಾ ಮತ್ತು ಭಾರತ ಯೋಧರು ಸುಮಾರು 6 ತಾಸು ಹೊಡೆದಾಡಿಕೊಂಡಿದ್ದರು. ಅಂದು ಗುಂಡಿನ ದಾಳಿ ನಡೆದಿರಲಿಲ್ಲ. ಬದಲಿಗೆ ಕೋಲು, ಬಡಿಗೆ, ರಾಡ್​​ಗಳಲ್ಲಿ ಬಡಿದಾಡಿಕೊಂಡಿದ್ದರು.

Galwan Valley Clash: ಚೀನಾ ಸೈನಿಕರ ಕ್ರೌರ್ಯಕ್ಕೆ ಸಾಕ್ಷಿಯಾದ ಗಾಲ್ವಾನ್​ ಸಂಘರ್ಷಕ್ಕೆ ಒಂದು ವರ್ಷ; ಎಲ್​ಎಸಿಯಲ್ಲಿ ಇಂದಿಗೂ ಹೈ ಅಲರ್ಟ್​
ಎಲ್​ಎಸಿ ಬಳಿ ಗಸ್ತು ತಿರುಗುತ್ತಿರುವ ಭಾರತೀಯ ಯೋಧರು (ಸಂಗ್ರಹ ಚಿತ್ರ)
Follow us
TV9 Web
| Updated By: Lakshmi Hegde

Updated on: Jun 15, 2021 | 12:31 PM

ದೆಹಲಿ: ಕಳೆದ ವರ್ಷ ಇದೇ ದಿನ ಅಂದರೆ ಜೂ.15ರಂದು ಗಲ್ವಾನ್​ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟು, ಭಾರತದ ಕಮಾಂಡಿಂಗ್ ಆಫಿಸರ್​ ಕರ್ನಲ್​ ಸಂತೋಷ್​ ಬಾಬು ಸೇರಿ 20 ಯೋಧರು ಹುತಾತ್ಮರಾಗಿದ್ದರು. ಹಾಗೇ, ಚೀನಾದ ಸೈನಿಕರು ಮೃತಪಟ್ಟಿದ್ದರೂ ಆ ದೇಶವಿನ್ನೂ ಎಷ್ಟು ಜನ ಮೃತಪಟ್ಟಿದ್ದಾರೆಂದು ಆ ದೇಶವಿನ್ನೂ ಹೇಳಿಲ್ಲ. ಅಂದಿನ ಘರ್ಷಣೆಯ ಬಳಿಕ ಪೂರ್ವ ಲಡಾಖ್​​ನಲ್ಲಿ ಭಾರತ-ಚೀನಾ ನಡುವೆ ಯುದ್ಧ ಸನ್ನಿವೇಶವೇ ಉಂಟಾಗಿತ್ತು. ತುಂಬ ದಿನಗಳವರೆಗೆ ಚೀನಾ ತನ್ನ ಸೈನ್ಯ ಬಲವನ್ನು ಅಲ್ಲಿ ಹೆಚ್ಚು ಗೊಳಿಸುತ್ತಲೇ ಇತ್ತು. ಅದಕ್ಕೆ ಪ್ರತಿಯಾಗಿ ಭಾರತವೂ ಯೋಧರನ್ನು ನಿಯೋಜಿಸುತ್ತಿತ್ತು. ಅದಾದ ಮೇಲೆ ಎರಡೂ ದೇಶಗಳ ನಡುವೆ 11 ಸುತ್ತಿನ ಮಿಲಿಟರಿ ಹಂತದ ಉನ್ನತ ಮಟ್ಟದ ಮಾತುಕತೆ ಆಗಿದೆ. ಹಾಗೇ, ಶಾಂತಿಯಿಂದ ಇರಲು ಎರಡೂ ದೇಶಗಳು ಒಪ್ಪಿಕೊಂಡಿದ್ದು, ಸದ್ಯದ ಮಟ್ಟಿಗೆ ಒಪ್ಪಿಕೊಂಡಿವೆ. ಆದರೆ ಕಳೆದ ವರ್ಷದಿಂದಲೂ ಲಡಾಖ್​ನಲ್ಲಿ ಸುಮಾರು 50,000 ಸೈನಿಕರನ್ನು ನಿಯೋಜಿಸಿ, ಹೈಅಲರ್ಟ್​​ನಲ್ಲಿಯೇ ಇದೆ.

ಅಂದು ಏನಾಯಿತು? 2020ರ ಜೂ.15ರಂದು ಗಲ್ವಾನ್​ ಕಣಿವೆಯ ಪರ್ವತ ಪ್ರದೇಶದ ಕಡಿದಾದ ಭಾಗವಾದ ಪೆಟ್ರೋಲಿಂಗ್​ ಪಾಯಿಂಟ್​ 14ರಲ್ಲಿ ಚೀನಾ ಮತ್ತು ಭಾರತ ಯೋಧರು ಸುಮಾರು 6 ತಾಸು ಹೊಡೆದಾಡಿಕೊಂಡಿದ್ದರು. ಅಂದು ಗುಂಡಿನ ದಾಳಿ ನಡೆದಿರಲಿಲ್ಲ. ಬದಲಿಗೆ ಕೋಲು, ಬಡಿಗೆ, ರಾಡ್​​ಗಳಲ್ಲಿ ಬಡಿದಾಡಿಕೊಂಡಿದ್ದರು. ಈ ಘಟನೆ ನಡೆಯುವ ಎರಡು ದಿನಗಳ ಹಿಂದೆ ಕರ್ನಲ್ ಸಂತೋಷ್ ಬಾಬು ಈ ವಿವಾದಿತ ಪ್ರದೇಶದಲ್ಲಿ ಚೈನೀಸ್​​ ಸೈನಿಕರು ಹಾಕಿದ್ದ ಟೆಂಟ್​​ನ್ನು ನಾಶ ಗೊಳಿಸಿದ್ದರು. ಅದೇ ಜಾಗದಲ್ಲಿ ಭಾರತೀಯ ಸೈನಿಕರು ಜೂ.15ರಂದು ಗಸ್ತು ತಿರುಗುತ್ತಿದ್ದಾಗ ಒಮ್ಮೆಲೇ ಚೀನಿಯರು ದಾಳಿ ನಡೆಸಿದ್ದರು. ಪರಸ್ಪರ ಕೈಕೈ ಮಿಲಾಯಿಸುತ್ತ ಶುರುವಾದ ಹೊಡೆದಾಟ ನಂತರ ತುಂಬ ಗಂಭೀರತೆ ಪಡೆದುಕೊಂಡಿತು. ಎರಡೂ ಸೇನೆಯ 100ಕ್ಕೂ ಹೆಚ್ಚು ಸೈನಿಕರು ಘರ್ಷಣೆಯಲ್ಲಿ ತೊಡಗಿದರು. ಪರಸ್ಪರ ಕಲ್ಲು ತೂರಾಟ ನಡೆಸಿದರು. ಕಬ್ಬಿಣದ ರಾಡ್​​ಗಳು, ದೊಡ್ಡದೊಡ್ಡ ಬಡಿಗೆ ಸೇರಿ ಹಲವು ರೀತಿಯ ಮಾರಕ ಅಸ್ತ್ರಗಳ ಪ್ರಯೋಗವಾಯಿತು.

ಈ ಹೊಡೆದಾಟದಲ್ಲಿ 16ನೇ ಬಿಹಾರ ರೆಜಿಮೆಂಟ್​​ನ 20 ಯೋಧರು ಹುತಾತ್ಮರಾದರು. ಕರ್ನಲ್​ ಸಂತೋಷ್​ ಬಾಬು ಕೂಡ ಉಸಿರುಚೆಲ್ಲಿದರು. ಚೀನಾ ಸೈನಿಕರು ಅತ್ಯಂತ ಕ್ರೂರವಾಗಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಾರೆ. ಬಹುತೇಕರಿಗೆ ಹೊಡೆದಿದ್ದಲ್ಲದೆ, ಬೆಟ್ಟ ಪ್ರದೇಶದಿಂದ ನೂಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಇನ್ನು ಚೀನಾದ 43 ಸೈನಿಕರು ಈ ಘರ್ಷಣೆಯಲ್ಲಿ ಸತ್ತಿದ್ದಾರೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಬೀಜಿಂಗ್​ ಸರ್ಕಾರ ಇದನ್ನು ನಿರಾಕರಿಸಿದೆ. ಮಡಿದವರ ನೈಜ ಸಂಖ್ಯೆಯನ್ನು ತಿಳಿಸಲು ತುಂಬ ದಿನ ಸತಾಯಿಸಿದ ಚೀನಾ ಬಳಿಕ ನಮ್ಮಲ್ಲಿನ ನಾಲ್ವರು ಸೈನಿಕರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ. ಆ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಇಲ್ಲ.

ಯುದ್ಧದ ವಾತಾವರಣ ಆಗಿನ್ನೂ ಭಾರತದಲ್ಲಿ ಕೊರೊನಾ ಮೊದಲ ಅಲೆಯ ಸಂದರ್ಭ ಇತ್ತು. ಈ ಮಧ್ಯೆ ಚೀನಾದ ಉಪಟಳವೂ ಹೆಚ್ಚಾಗಿತ್ತು. ಪದೇಪದೆ ಕಾಲುಕೆರೆದು ಘರ್ಷಣೆಗೆ ನಿಲ್ಲುತ್ತಲೇ ಇದ್ದರು. ಅದರಲ್ಲೂ ಗಲ್ವಾನ್​ ಕಣಿವೆ ಸಂಘರ್ಷದ ಬಳಿಕ ಎರಡೂ ದೇಶಗಳ ನಡುವೆ ಅಕ್ಷರಶಃ ಯುದ್ಧದ ಸನ್ನಿವೇಶ ಉಂಟಾಗಿತ್ತು. ನಾವು ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಭಾರತ ತೊಡೆತಟ್ಟಿ ನಿಂತಿತ್ತು. ನಂತರ ಭಾರತ ಮತ್ತು ಚೀನಾದ ಮಿಲಿಟರಿ ನಿಯೋಗಗಳು ಪರಸ್ಪರ ರಾಜಿ ಮಾತುಕತೆ ಪ್ರಾರಂಭಿಸಿದವು. ಗಡಿವಿವಾದವನ್ನು ಪರಿಹರಿಸಲು ಕಾರ್ಪ್ಸ್​ ಕಮಾಂಡರ್​ ಮಟ್ಟದಲ್ಲಿ ಶಾಂತಿ ಮಾತುಕತೆ ನಡೆದವು. ಸದ್ಯ ಇಲ್ಲಿನ ಗಡಿಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹಾರ ಮಾಡಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿದ್ದರೂ, ಅಲ್ಲಿ ತಮ್ಮ ಸೈನ್ಯ ಬಲವನ್ನು ತಗ್ಗಿಸಿಲ್ಲ.

ಚೀನಾ ಚಟುವಟಿಕೆ ಮೇಲೆ ಸದಾ ಗಮನ ಸಂಘರ್ಷ ನಡೆದ ಬಳಿಕ ಲಡಾಖ್​ ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್​ಎಸಿ) ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಭಾರತೀಯ ಸೇನಾ ಮುಖ್ಯಸ್ಥ ಜನರಲ್​ ಎಂಎಂ ನರವಾಣೆ ನಾವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧ ಎಂದಿದ್ದರು. ಹಾಗೇ ಕಳೆದ ತಿಂಗಳೂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಎಲ್​ಎಸಿ ಉದ್ದಕ್ಕೂ ನಮ್ಮ ಸೈನಿಕರು ಹೈ ಅಲರ್ಟ್​​ನಲ್ಲಿಯೇ ಇದ್ದಾರೆ. ಚೀನಾದ ಪೀಪಲ್ಸ್​ ಲಿಬರೇಶನ್​ ಆರ್ಮಿ ಮೇಲೆ ಒಂದು ಕಣ್ಣಿಟ್ಟಿದ್ದೇವೆ ಎಂದು ಹೇಳಿದ್ದಾರೆ.

 ಇದನ್ನೂ ಓದಿ: ಪಶ್ಚಿಮ ಬಂಗಾಳದ ಮುಂದಿನ ವಿಧಾನಸಭಾ ಚುನಾವಣೆವರೆಗೆ ಟಿಎಂಸಿ ಜತೆ ಇರಲಿದ್ದಾರೆ ಪ್ರಶಾಂತ್ ಕಿಶೋರ್

India China clashes at Galwan Valley of Ladakh Timeline of the face-off and post developments