ಆಪರೇಷನ್ ಸಿಂಧೂರ್​​ನ ಮೊದಲ ದಿನವೇ ಭಾರತ ಸೋತಿತ್ತು; ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ವಿವಾದಾತ್ಮಕ ಹೇಳಿಕೆ

Operation Sindoor: ಪಹಲ್ಗಾಮ್ ದಾಳಿಯ ವಿರುದ್ಧ ಭಾರತ ಆಪರೇಷನ್ ಸಿಂಧೂರ್‌ ಆರಂಭಿಸಿದ ಮೊದಲ ದಿನವೇ ಭಾರತ ಸೋತಿತ್ತು ಎಂಬ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ವಿವಾದಕ್ಕೀಡಾಗಿದ್ದಾರೆ. ಆಪರೇಷನ್ ಸಿಂಧೂರ್‌ನ ಮೊದಲ ದಿನದಂದು ಭಾರತೀಯ ಮಿಲಿಟರಿ ವಿಮಾನಗಳನ್ನು ಪಾಕ್ ಪಡೆಗಳು ಹೊಡೆದುರುಳಿಸಿದವು ಎಂದು ಹೇಳಿದ ನಂತರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಬಿಜೆಪಿ ಹಾಗೂ ಎನ್​ಡಿಎ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಆಪರೇಷನ್ ಸಿಂಧೂರ್​​ನ ಮೊದಲ ದಿನವೇ ಭಾರತ ಸೋತಿತ್ತು; ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ವಿವಾದಾತ್ಮಕ ಹೇಳಿಕೆ
Prithviraj Chavan

Updated on: Dec 17, 2025 | 3:36 PM

ಮುಂಬೈ, ಡಿಸೆಂಬರ್ 17: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ (Operation Sindoor) ಆರಂಭಿಸಲಾಗಿತ್ತು. ಈ ಕಾರ್ಯಾಚರಣೆಯ ಬಗ್ಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ನೀಡಿರುವ ಹೇಳಿಕೆಯು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಆಪರೇಷನ್ ಸಿಂಧೂರ್ ಆರಂಭಿಸಿದ ಮೊದಲ ದಿನವೇ ಭಾರತ ಸೋಲನ್ನು ಅನುಭವಿಸಿತು ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರೂ ಅವರು ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.

“ನಾನು ಯಾವುದೇ ತಪ್ಪು ಹೇಳಿಲ್ಲ ಮತ್ತು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸಂವಿಧಾನವು ನನಗೆ ಪ್ರಶ್ನಿಸುವ ಹಕ್ಕನ್ನು ನೀಡಿದೆ” ಎಂದು ಪೃಥ್ವಿರಾಜ್ ಚವಾಣ್ ಹೇಳಿದ್ದಾರೆ. ಆಪರೇಷನ್ ಸಿಂಧೂರ್‌ನ ಮೊದಲ ದಿನದಂದೇ ಭಾರತ ಸೋತಿತು ಎಂಬ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಆಪರೇಷನ್ ಸಿಂಧೂರ್​​ನ ಮೊದಲ ದಿನದಂದು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಯಿತು ಮತ್ತು ಭಾರತವನ್ನು ಸಂಪೂರ್ಣವಾಗಿ ಸೋಲಿಸಲಾಯಿತು ಎಂದು ಚವಾಣ್ ಹೇಳಿದ್ದಾರೆ.


ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಪ್ರಧಾನಿ ಮೋದಿ ನಮಗೆ ಪೂರ್ತಿ ಸ್ವಾತಂತ್ರ್ಯ ನೀಡಿದ್ದರು; ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

“ಆಪರೇಷನ್ ಸಿಂಧೂರ್‌ನ ಮೊದಲ ದಿನದಂದೇ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಮೇ 7ರಂದು ನಡೆದ ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಯಿತು. ಭಾರತದ ವಾಯುಪಡೆ ಸಂಪೂರ್ಣವಾಗಿ ನೆಲಸಮವಾಗಿತ್ತು. ನಮ್ಮ ಒಂದೇ ಒಂದು ವಿಮಾನವೂ ಹಾರಲಿಲ್ಲ” ಎಂದು ಚವಾಣ್ ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಶ್ರೀಕೃಷ್ಣನ ಸಂದೇಶವನ್ನು ಅನುಸರಿಸಿದೆವು; ಕುರುಕ್ಷೇತ್ರದಲ್ಲಿ ಸಚಿವ ರಾಜನಾಥ್ ಸಿಂಗ್

“ಇತ್ತೀಚೆಗೆ, ಆಪರೇಷನ್ ಸಿಂಧೂರ್ ಸಮಯದಲ್ಲಿ, ಮಿಲಿಟರಿಯ ಒಂದು ಕಿಲೋಮೀಟರ್ ಚಲನೆಯೂ ಇರಲಿಲ್ಲ. ಎರಡು ಅಥವಾ ಮೂರು ದಿನಗಳಲ್ಲಿ ಕೇವಲ ವೈಮಾನಿಕ ಯುದ್ಧ ಮತ್ತು ಕ್ಷಿಪಣಿ ಯುದ್ಧ ನಡೆಯಿತು. ಭವಿಷ್ಯದಲ್ಲಿಯೂ ಸಹ ಯುದ್ಧಗಳು ಅದೇ ರೀತಿಯಲ್ಲಿ ನಡೆಯುತ್ತವೆ. ಹಾಗಿದ್ದ ಮೇಲೆ ನಾವು ನಿಜವಾಗಿಯೂ 12 ಲಕ್ಷ ಸೈನಿಕರ ಸೈನ್ಯವನ್ನು ನಿರ್ವಹಿಸುವ ಅಗತ್ಯವಿದೆಯೇ? ಅಷ್ಟು ದೊಡ್ಡ ಸೇನಾಪಡೆ ನಮಗೆ ನಿಜಕ್ಕೂ ಅನಿವಾರ್ಯವೇ? ನಾವು ಅವರನ್ನು ಬೇರೆ ಏನಾದರೂ ಕೆಲಸ ಮಾಡುವಂತೆ ಮಾಡಬಹುದಲ್ಲವೇ?” ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ