One Nation, One Time: ಇನ್ನು 180 ದಿನದಲ್ಲಿ ದೇಶಾದ್ಯಂತ ‘ಭಾರತೀಯ ಪ್ರಮಾಣಿತ ಸಮಯ’ ಜಾರಿ, ISTಗೆ ಸಿದ್ಧತೆ

Indian Standard Time: ದೇಶಾದ್ಯಂತ ಏಕರೂಪ ಹಾಗೂ ನಿಖರ ಸಮಯ ಅನುಸರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತೀಯ ಪ್ರಮಾಣಿತ ಸಮಯಕ್ಕೆ ಸಂಬಂಧಿಸಿದ ಹೊಸ ನಿಯಮಗಳು 180 ದಿನಗಳಲ್ಲಿ ಜಾರಿಗೆ ಬರಲಿದ್ದು, NavIC ಆಧಾರಿತ ಸ್ವದೇಶಿ ಸಮಯ ಮೂಲ ಬಳಕೆಗೆ ಒತ್ತು ನೀಡಲಾಗಿದೆ.

One Nation, One Time: ಇನ್ನು 180 ದಿನದಲ್ಲಿ ದೇಶಾದ್ಯಂತ ‘ಭಾರತೀಯ ಪ್ರಮಾಣಿತ ಸಮಯ’ ಜಾರಿ, ISTಗೆ ಸಿದ್ಧತೆ
IST ಜಾರಿ ಸಿದ್ಧತೆ ಬಗ್ಗೆ ಸಚಿವ ಜೋಶಿ ಮಾಹಿತಿ
Image Credit source: PTI

Updated on: Aug 31, 2026 | 9:51 AM

ಮುಖ್ಯಾಂಶಗಳು

  • 180 ದಿನಗಳಲ್ಲಿ ಹೊಸ IST ನಿಯಮ ಜಾರಿ
  • ವಿದೇಶಿ ಸಮಯ ಮೂಲ ಅವಲಂಬನೆ ಕಡಿಮೆ
  • ಬೆಂಗಳೂರಿನಲ್ಲಿ IST ಪ್ರಸರಣ ವ್ಯವಸ್ಥೆ ಪ್ರದರ್ಶನ

ನವದೆಹಲಿ, ಆಗಸ್ಟ್ 31: ದೇಶಾದ್ಯಂತ ಏಕರೂಪ ಹಾಗೂ ನಿಖರವಾದ ಸಮಯ ಅನುಸರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ನು 180 ದಿನಗಳ ಅವಧಿಯಲ್ಲಿ ‘ಭಾರತೀಯ ಪ್ರಮಾಣಿತ ಸಮಯ (IST)’ಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಸರ್ಕಾರಿ ಇಲಾಖೆ, ಸಂಸ್ಥೆಗಳು ಹಾಗೂ ವಿವಿಧ ವಲಯಗಳು ಅಗತ್ಯ ತಾಂತ್ರಿಕ ಬದಲಾವಣೆ ಮಾಡಿಕೊಳ್ಳಬೇಕಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ (Department of Consumer Affairs) ಆಗಸ್ಟ್ 27ರಂದು ‘ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು-2026’ ಅಧಿಸೂಚನೆ ಹೊರಡಿಸಿದೆ. ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 180 ದಿನಗಳ ಬಳಿಕ ಈ ನಿಯಮಗಳು ಜಾರಿಗೆ ಬರಲಿವೆ.

ವಿದೇಶಿ ಸಮಯ ಮೂಲಗಳ ಮೇಲಿನ ಅವಲಂಬನೆ ಕಡಿಮೆ

ಪ್ರಸ್ತುತ ಹಲವು ಡಿಜಿಟಲ್ ಹಾಗೂ ತಾಂತ್ರಿಕ ವ್ಯವಸ್ಥೆಗಳು ವಿದೇಶಿ ಉಪಗ್ರಹ ಆಧಾರಿತ ಸಮಯ ಮೂಲಗಳನ್ನು ಬಳಸುತ್ತಿವೆ. ಹೊಸ ವ್ಯವಸ್ಥೆಯ ಮೂಲಕ ಸ್ವದೇಶಿ ಉಪಗ್ರಹ ಸಂಚರಣೆ ವ್ಯವಸ್ಥೆ NavIC ಸೇರಿದಂತೆ ಅನುಮೋದಿತ ಭಾರತೀಯ ಸಮಯ ಮೂಲಗಳನ್ನು ಬಳಸಿಕೊಂಡು ನಿಖರವಾದ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡಲು ಸರ್ಕಾರ ಮುಂದಾಗಿದೆ.

ಇದರಿಂದ ದೇಶದ ವಿವಿಧ ವಲಯಗಳಲ್ಲಿ ಒಂದೇ ನಿಖರ ಸಮಯವನ್ನು ಉಲ್ಲೇಖಿಸುವ ವ್ಯವಸ್ಥೆ ಬಲಪಡಲಿದೆ. ಬ್ಯಾಂಕಿಂಗ್, ಡಿಜಿಟಲ್ ಪಾವತಿ, ದೂರಸಂಪರ್ಕ, ರೈಲ್ವೆ, ವಿಮಾನ ನಿಲ್ದಾಣ, ವಿದ್ಯುತ್ ವ್ಯವಸ್ಥೆ, ಕಂಪ್ಯೂಟರ್ ನೆಟ್‌ವರ್ಕ್‌ಗಳು ಹಾಗೂ ಸರ್ಕಾರಿ ದಾಖಲೆಗಳಲ್ಲಿ ನಿಖರ ಸಮಯ ಮತ್ತು ಸಮಯದ ಮುದ್ರೆಗಳ ಬಳಕೆ ಮತ್ತಷ್ಟು ವಿಶ್ವಾಸಾರ್ಹವಾಗಲಿದೆ.

180 ದಿನಗಳಲ್ಲಿ ತಾಂತ್ರಿಕ ಬದಲಾವಣೆ

ಹೊಸ ನಿಯಮಗಳು ಜಾರಿಗೆ ಬರುವ ಮುನ್ನ ಸರ್ಕಾರಿ ಇಲಾಖೆಗಳು, ವ್ಯವಹಾರ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಇತರ ಸಂಬಂಧಿತ ಸಂಸ್ಥೆಗಳು ತಮ್ಮ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ಅಗತ್ಯವಿರುವ ತಾಂತ್ರಿಕ ಬದಲಾವಣೆಗಳನ್ನು ಕೈಗೊಂಡು ಭಾರತೀಯ ಪ್ರಮಾಣಿತ ಸಮಯವನ್ನು ಅಳವಡಿಸಿಕೊಳ್ಳಲು 180 ದಿನಗಳ ಕಾಲಾವಕಾಶ ನೀಡಲಾಗಿದೆ.

ದೇಶಾದ್ಯಂತ ಭಾರತೀಯ ಸಂಸ್ಥೆಗಳು ಹಾಗೂ ಕಾನೂನು ಮಾಪನಶಾಸ್ತ್ರ ಪ್ರಯೋಗಾಲಯಗಳ ಮೂಲಕ ನಿಖರವಾದ IST ಪ್ರಸಾರಕ್ಕೆ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ IST ಪ್ರಸರಣದ ಪ್ರದರ್ಶನ

‘ಒನ್ ನೇಷನ್ ಒನ್ ಟೈಮ್’ ಉಪಕ್ರಮದ ಭಾಗವಾಗಿ ಜುಲೈ 2026ರಲ್ಲಿ ಬೆಂಗಳೂರಿನ ಪ್ರಾದೇಶಿಕ ಉಲ್ಲೇಖ ಪ್ರಮಾಣಿತ ಪ್ರಯೋಗಾಲಯದಲ್ಲಿ ಭಾರತೀಯ ಪ್ರಮಾಣಿತ ಸಮಯ ಪ್ರಸರಣದ ಪ್ರದರ್ಶನ ಜಾಲವನ್ನು ನಿಯೋಜಿಸಲಾಗಿತ್ತು. ಈ ವ್ಯವಸ್ಥೆಯ ಮೂಲಕ ಬ್ಯಾಂಕಿಂಗ್, ದೂರಸಂಪರ್ಕ, ವಿದ್ಯುತ್, ಸಾರಿಗೆ ಮತ್ತು ಡಿಜಿಟಲ್ ಆಡಳಿತ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸಲಾಗಿದೆ. ಬೆಂಗಳೂರಿನ RRSL ಮತ್ತು ಚೆನ್ನೈನ NSE ನಡುವೆ ISTಯ ಸುರಕ್ಷಿತ ಪ್ರಸರಣವನ್ನೂ ಪ್ರದರ್ಶಿಸಲಾಗಿದೆ. ಈ ಯೋಜನೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, CSIR-NPL, ISRO, SEBI, NSE, BSNL ಸೇರಿದಂತೆ ಹಲವು ಸಂಸ್ಥೆಗಳು ಸಹಭಾಗಿತ್ವ ವಹಿಸಿವೆ.

ಸಚಿವ ಪ್ರಲ್ಹಾದ್ ಜೋಶಿ ನಿರ್ದೇಶನ

‘ಒನ್ ನೇಷನ್ ಒನ್ ಟೈಮ್’ ಉಪಕ್ರಮದಡಿ IST ಅನುಸರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದ್ದಾರೆ. 180 ದಿನಗಳ ಅವಧಿಯಲ್ಲಿ ಎಲ್ಲ ಪಾಲುದಾರರು ಅಗತ್ಯ ತಾಂತ್ರಿಕ ಬದಲಾವಣೆಗಳನ್ನು ಪೂರ್ಣಗೊಳಿಸಿ, ಸ್ವದೇಶಿ ಉಪಗ್ರಹ ಆಧಾರಿತ ನಿಖರ IST ಅನುಷ್ಠಾನಕ್ಕೆ ಸಿದ್ಧರಾಗಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

ಇದನ್ನೂ ಒದಿ: ಎಫ್​ಐಆರ್ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 9:47 am, Mon, 31 August 26

Loading...
Unable to load recommendations.
Follow Us