ಸುಖೋಯ್ ಯುದ್ಧವಿಮಾನ ಅಪಘಾತ; ಆಪರೇಷನ್ ಸಿಂಧೂರ್​​ನಲ್ಲಿ ಭಾಗಿಯಾಗಿದ್ದ ಪೈಲಟ್ ಸೇರಿ ಇಬ್ಬರು ಸಾವು

ಅಸ್ಸಾಂನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ (Su-30MKI) ಯುದ್ಧವಿಮಾನ ನಾಪತ್ತೆಯಾಗಿತ್ತು. ರಡಾರ್​​ನಿಂದ ಕಣ್ಮರೆಯಾಗಿದ್ದ ಆ ವಿಮಾನ ಅಪಘಾತಕ್ಕೀಡಾಗಿದೆ. ಈ ವೇಳೆ ಅದರಲ್ಲಿದ್ದ ಇಬ್ಬರು ವಾಯುಪಡೆಯ ಪೈಲಟ್​ಗಳು ಮೃತಪಟ್ಟಿದ್ದಾರೆ. ಅವರಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್ ಕೂಡ ಸೇರಿದ್ದಾರೆ. 10 ದಿನಗಳ ಹಿಂದಷ್ಟೇ ಅವರು ತಮ್ಮ ಕುಟುಂಬವನ್ನು ಭೇಟಿಯಾಗಿದ್ದರು. ಮೃತಪಟ್ಟ ಪೈಲಟ್​​ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ.

ಸುಖೋಯ್ ಯುದ್ಧವಿಮಾನ ಅಪಘಾತ; ಆಪರೇಷನ್ ಸಿಂಧೂರ್​​ನಲ್ಲಿ ಭಾಗಿಯಾಗಿದ್ದ ಪೈಲಟ್ ಸೇರಿ ಇಬ್ಬರು ಸಾವು
Sukhoi Pilots Who Died In Accident

Updated on: Mar 06, 2026 | 10:09 PM

ನವದೆಹಲಿ, ಮಾರ್ಚ್ 6: ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ (Su-30MKI) ಫೈಟರ್ ಜೆಟ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಆ ಯುದ್ಧವಿಮಾನಕ್ಕಾಗಿ ಐಎಎಫ್​ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆ ಯುದ್ಧವಿಮಾನ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಅಪಘಾತಕ್ಕೀಡಾಗಿರುವುದು ದೃಢಪಟ್ಟಿದೆ. ಇಬ್ಬರು ಭಾರತೀಯ ವಾಯುಪಡೆಯ (IAF) ಪೈಲಟ್‌ಗಳಾದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿದ್ದಾರೆ.

ಸುಖೋಯ್ ಯುದ್ಧವಿಮಾನದ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಮೃತಪಟ್ಟಿರುವ ಬಗ್ಗೆ IAF ದೃಢಪಡಿಸಿದೆ. ಈ ದುಃಖದ ಸಮಯದಲ್ಲಿ IAFನ ಎಲ್ಲಾ ಸಿಬ್ಬಂದಿ ಮೃತರ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಸುಖೋಯ್ Su-30 MKI ಯುದ್ಧ ವಿಮಾನ ನಾಪತ್ತೆ; ಐಎಎಫ್​​ನಿಂದ ಶೋಧ ಕಾರ್ಯಾಚರಣೆ ಆರಂಭ

ಸುಖೋಯ್-30MKI ವಿಮಾನವು ಗುರುವಾರ ಸಂಜೆ ಜೋರ್ಹತ್ ವಾಯುನೆಲೆಯಿಂದ ಹೊರಟು ರಡಾರ್ ಸಂಪರ್ಕವನ್ನು ಕಳೆದುಕೊಂಡಿತು. ರಷ್ಯಾ ಮೂಲದ ಫೈಟರ್ ಜೆಟ್‌ನೊಂದಿಗಿನ ಸಂಪರ್ಕವು ಸಂಜೆ 7.42ರ ಸುಮಾರಿಗೆ ಕಡಿದುಹೋಗಿತ್ತು. ಐಎಎಫ್​ ಶೋಧ ಕಾರ್ಯಾಚರಣೆ ವೇಳೆ ಜೋರ್ಹತ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು.

Purvesh Duragkar

ಆಪರೇಷನ್ ಸಿಂಧೂರ್​​ನಲ್ಲಿ ಭಾಗಿಯಾಗಿದ್ದ ಪೈಲಟ್:

ಅಸ್ಸಾಂನ ಕರ್ಬಿ ಆಂಗ್ಲಾಂಗ್‌ನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ ಯುದ್ಧ ವಿಮಾನ ಅಪಘಾತಕ್ಕೀಡಾದ ನಂತರ ಸಾವನ್ನಪ್ಪಿದ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಗ್ಕರ್ ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ಪ್ರತೀಕಾರಕ್ಕಾಗಿ ಭಾರತ ಪ್ರಾರಂಭಿಸಿದ್ದ ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯ ಭಾಗವಾಗಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಮೇಲಿನ ದ್ವೇಷದಿಂದ ಭಾರತ, ಇರಾನ್, ಅಫ್ಘಾನ್ ಒಂದಾಗಿ ಸಂಚು; ಖವಾಜಾ ಆಸಿಫ್ ಆರೋಪ

2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತ್ತು. ಭದ್ರತಾ ಪಡೆಗಳು ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಬಹು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದವು. ನಂತರ ಪಾಕಿಸ್ತಾನವು ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ನಡೆಸಿತು. ಅದನ್ನು ಭಾರತ ತಡೆಹಿಡಿಯಿತು. ಅದಕ್ಕೆ ಪ್ರತೀಕಾರವಾಗಿ, ಭಾರತ ಪಾಕಿಸ್ತಾನದಲ್ಲಿನ ವಾಯುನೆಲೆಗಳ ಮೇಲೆ ದಾಳಿ ಮಾಡಿತು. ಮೇ 10ರಂದು ಕದನ ವಿರಾಮ ಘೋಷಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us