
ಲಕ್ನೋ, ನವೆಂಬರ್ 25: ಭಾರತೀಯ ಸೇನಾ ಚೆಕ್‌ಪೋಸ್ಟ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಮೀರತ್‌ನ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಉಜೈದ್ ಎಂದು ಗುರುತಿಸಲಾಗಿರುವ ಈ ಯುವಕ ಪಾಕಿಸ್ತಾನ ಬೆಂಬಲಿತ ಆನ್‌ಲೈನ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಯುವಕರನ್ನು ಪ್ರಚೋದಿಸುತ್ತಿದ್ದ ಆರೋಪವೂ ಆತನ ಮೇಲಿದೆ.
ಪಾಕಿಸ್ತಾನಿ ಜಾಲದೊಂದಿಗೆ ಸಂಪರ್ಕ?
ಪೊಲೀಸರ ಪ್ರಕಾರ, ಮೀರತ್‌ನ ಬನಿಯಾಪಾದ ನಿವಾಸಿ ಉಜೈದ್, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ. ಭಾರತ ವಿರೋಧಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಜಮ್ಮುವಿನಲ್ಲಿ ಬಂಧನಕ್ಕೊಳಗಾದ ಮೊಹಮ್ಮದ್ ಸಾಜಿದ್ ಎಂಬಾತನೊಂದಿಗೆ ಉಜೈದ್ ಸಂಪರ್ಕ ಬೆಳೆಸಿದ್ದ. ಇಬ್ಬರೂ ಸೇರಿ ಆನ್‌ಲೈನ್ ಮೂಲಕ ಯುವಕರನ್ನು ಮೂಲಭೂತವಾದದತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಜಾಲಕ್ಕೆ ಪಾಕಿಸ್ತಾನಿ ಮೂಲದ ಶಹಜಾದ್ ಭಟ್ಟಿ ಬೆಂಬಲ ನೀಡುತ್ತಿದ್ದ ಎನ್ನಲಾಗಿದೆ.
ಆನ್‌ಲೈನ್ ಗುಂಪುಗಳ ಮೂಲಕ ಯುವಕರಿಗೆ ಬಲೆ
ತನಿಖೆಯ ಪ್ರಕಾರ, ಆರೋಪಿಗಳು ಇನ್‌ಸ್ಟಾಗ್ರಾಂನಲ್ಲಿ ‘ಟ್ಯೂಷನ್-40’, ‘005 ಬ್ರಿಗೇಡ್’ ಮತ್ತು ‘ಅಲ್ ಮುಜಾಹಿದ್’ ಹೆಸರಿನ ಗುಂಪುಗಳನ್ನು ನಡೆಸುತ್ತಿದ್ದರು. ಯುವಕರೊಂದಿಗೆ ರಹಸ್ಯವಾಗಿ ಸಂವಹನ ನಡೆಸಲು ‘ಸೆಷನ್’ ಎಂಬ ಎನ್‌ಕ್ರಿಪ್ಟ್ ಮೆಸೇಜಿಂಗ್ ಆ್ಯಪ್ ಬಳಸುತ್ತಿದ್ದರು. ಈ ಗುಂಪುಗಳ ಮೂಲಕ ಭಾರತ ವಿರೋಧಿ ಸಂದೇಶಗಳನ್ನು ಹರಡಲಾಗುತ್ತಿತ್ತು. ದೇಶದಲ್ಲಿ ಮುಸ್ಲಿಮರು ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ ಎಂಬ ಸಂದೇಶಗಳನ್ನು ಹರಡಿ ಯುವಕರನ್ನು ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ಹಮ್ ಭಿ ತೈಯಾರ್ ಹೈ’ ಎಂಬ ಒಂದೇ ಕಾಮೆಂಟ್‌ನಿಂದ ಸಿಕ್ಕ ಸುಳಿವು
ಈ ಪ್ರಕರಣದ ತನಿಖೆಯಲ್ಲಿ ಇನ್‌ಸ್ಟಾಗ್ರಾಂನಲ್ಲಿನ ಒಂದು ಕಾಮೆಂಟ್ ಪ್ರಮುಖ ಸುಳಿವಾಗಿದೆ. ಉಜೈದ್ ಸಾಮಾಜಿಕ ಜಾಲತಾಣದಲ್ಲಿ ಭಾರತ ವಿರೋಧಿ ವಿಡಿಯೋವೊಂದಕ್ಕೆ ‘ಹಮ್ ಭಿ ತೈಯಾರ್ ಹೈ’ (ನಾವೂ ಸಿದ್ಧರಿದ್ದೇವೆ) ಎಂದು ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಜಮ್ಮು ಮೂಲದ ಮೊಹಮ್ಮದ್ ಸಾಜಿದ್ ಆತನನ್ನು ಸಂಪರ್ಕಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಇಬ್ಬರ ನಡುವೆ ಆನ್‌ಲೈನ್ ಸಂಭಾಷಣೆ ಆರಂಭವಾಗಿತ್ತು. ಉಜೈದ್‌ನ ಇನ್‌ಸ್ಟಾಗ್ರಾಂ ಖಾತೆಯನ್ನು ಪತ್ತೆಹಚ್ಚಿದ ತನಿಖಾಧಿಕಾರಿಗಳು ಆತನ ಸಂಪರ್ಕ ಜಾಲದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಸೇನಾ ನೆಲೆ ಮೇಲೆ ದಾಳಿಗೆ ರೂಪಿಸಿದ್ದ ಯೋಜನೆ ಏನು?
ಪೊಲೀಸರ ತನಿಖೆಯ ಪ್ರಕಾರ, 2025ರ ನವೆಂಬರ್‌ನಲ್ಲಿ ಪ್ರಮುಖ ಸೇನಾ ಶಿಬಿರ ಅಥವಾ ಸೇನಾ ವಾಹನಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು.
– ಮೊಹಮ್ಮದ್ ಸಾಜಿದ್‌ಗೆ ಸೇನಾ ನೆಲೆಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿತ್ತು.
– ಉಜೈದ್‌ಗೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಜಾಕೆಟ್ ಒದಗಿಸುವ ಯೋಜನೆ ಇತ್ತು ಎನ್ನಲಾಗಿದೆ.
– ಕಾಶ್ಮೀರದ ಗುರೇಜ್ ಕಣಿವೆಯಲ್ಲಿ ಅಗತ್ಯ ತರಬೇತಿ ಮತ್ತು ಸಾಮಗ್ರಿಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಆದರೆ ಸಾಜಿದ್ ಬಂಧನದಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರೋನ್ ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನದ 10 ಪ್ರಮುಖ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದ ಪಾಕಿಸ್ತಾನ
ಹತ್ತು ತಿಂಗಳಿನಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ
2025ರ ನವೆಂಬರ್ 24ರಂದು ಜಮ್ಮುವಿನ ಬಹು ಫೋರ್ಟ್ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ವೇಳೆ ಮೊಹಮ್ಮದ್ ಸಾಜಿದ್‌ನನ್ನು ಬಂಧಿಸಲಾಗಿತ್ತು. ಸಾಜಿದ್ ನೀಡಿದ ಮಾಹಿತಿ ಆಧರಿಸಿ ಜಮ್ಮು ಪೊಲೀಸರು ಮೀರತ್ ಪೊಲೀಸರ ಸಹಕಾರದೊಂದಿಗೆ 2026ರ ಜನವರಿ 18 ಮತ್ತು ಫೆಬ್ರವರಿ 21ರಂದು ಉಜೈದ್ ಮನೆ ಮೇಲೆ ದಾಳಿ ನಡೆಸಿದ್ದರು. ಆದರೆ ಆತ ಪತ್ತೆಯಾಗಿರಲಿಲ್ಲ.
ಸುಮಾರು ಹತ್ತು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಉಜೈದ್‌ನನ್ನು ನವೆಂಬರ್ 23ರಂದು ಖಚಿತ ಮಾಹಿತಿ ಆಧರಿಸಿ ಮೀರತ್‌ನ ಗಹ್ಲೋಟ್ ರಸ್ತೆಯಲ್ಲಿ ಬಂಧಿಸಲಾಗಿದೆ. ಇದೀಗ ಆತನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ತನಿಖೆಯಲ್ಲಿ ಇನ್ನೇನು ಬೆಳಕಿಗೆ ಬಂದಿದೆ?
ಉಜೈದ್‌ನ ಮೊಬೈಲ್ ಫೋನ್, ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಆನ್‌ಲೈನ್ ಸಂಭಾಷಣೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಪಂಜಾಬ್ ಭಾಗದಲ್ಲಿರುವ ವ್ಯಕ್ತಿಗಳ ಸಂಪರ್ಕದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇಂಟೆಲಿಜೆನ್ಸ್ ಬ್ಯೂರೋ (IB), ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಇತರ ತನಿಖಾ ತಂಡಗಳು ಆತನನ್ನು ವಿಚಾರಣೆ ನಡೆಸಿವೆ. ಈ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಮತ್ತು ದಾಳಿಯ ಸಂಚಿನಲ್ಲಿ ಯಾರ ಪಾತ್ರ ಏನಿತ್ತು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಪ್ರಚೋದಿಸಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪ ಈ ಪ್ರಕರಣದಲ್ಲಿದೆ. ಆದರೆ ಆರೋಪಿಗಳ ಪಾತ್ರ ಮತ್ತು ಪಾಕಿಸ್ತಾನಿ ಸಂಪರ್ಕದ ಕುರಿತು ತನಿಖೆ ಇನ್ನೂ ನಡೆಯುತ್ತಿದೆ. ಇವು ಸದ್ಯಕ್ಕೆ ಪೊಲೀಸರ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ